ಮಂಗಳವಾರ, ಸೆಪ್ಟೆಂಬರ್ 17, 2019
27 °C
ಜಿಲ್ಲಾ ಉಸ್ತುವಾರಿ ಹೇಳಿಕೆ

ಆದಿವಾಸಿಗಳಿಗೂ ದಸರಾ ದರ್ಶನ: ಸಚಿವ ವಿ.ಸೋಮಣ್ಣ

Published:
Updated:

ಎಚ್‌.ಡಿ.ಕೋಟೆ (ಮೈಸೂರು): ‘ಆದಿವಾಸಿಗಳಿಗೂ ವಿಶ್ವವಿಖ್ಯಾತ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಈ ಬಾರಿ ಕಲ್ಪಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಶನಿವಾರ ಇಲ್ಲಿ ತಿಳಿಸಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಗ್ರಾಮೀಣ ದಸರಾ ಮಹೋತ್ಸವ ಏರ್ಪಡಿಸುವ ಸಂಬಂಧ ಆಯೋಜಿಸಿದ್ದ ತಾಲ್ಲೂಕಿನ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಎಚ್.ಡಿ.ಕೋಟೆ, ಹುಣಸೂರು, ಪಿರಿಯಾಪಟ್ಟಣ ತಾಲ್ಲೂಕಿನ ವ್ಯಾಪ್ತಿಯಲ್ಲಿ ನೆಲೆಸಿರುವ ಆದಿವಾಸಿ ಜನರನ್ನು ದಸರಾ ಉತ್ಸವದ ವೇಳೆ ಬಸ್‌ಗಳ ಮೂಲಕ ಮೈಸೂರಿಗೆ ಕರೆ ತಂದು ದಸರಾದಲ್ಲಿ ಪಾಲ್ಗೊಳ್ಳುವಂತೆ ಮಾಡುವುದು ಈ ಬಾರಿ ನಮ್ಮ ಆದ್ಯತೆಯ ಕೆಲಸವಾಗಿದೆ. ಮೈಸೂರಿಗೆ ಬರುವ ಗಿರಿಜನರಿಗೆ ಊಟೋಪಚಾರದ ವ್ಯವಸ್ಥೆಯೊಂದಿಗೆ ಚಾಮುಂಡಿ ಬೆಟ್ಟ, ಅರಮನೆ, ಮೃಗಾಲಯ ನೋಡುವುದಕ್ಕೂ ಅವಕಾಶ ಕಲ್ಪಿಸಲಾಗುವುದು’ ಎಂದು ಹೇಳಿದರು.

ಶಾಸಕರಾದ ಸಿ.ಅನಿಲ್‌ಕುಮಾರ್‌, ನಿರಂಜನ್ ಕುಮಾರ್, ಮಾಜಿ ಶಾಸಕರಾದ ಸಿದ್ದರಾಜು, ಕೋಟೆ ಎಂ.ಶಿವಣ್ಣ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪರಿಮಳಾ ಶ್ಯಾಂ, ಉಪಾಧ್ಯಕ್ಷೆ ಗೌರಮ್ಮ, ಉಪವಿಭಾಗಾಧಿಕಾರಿ ವೀಣಾ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ನೇಹಾ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮಂಜುಳಾ ದೇವಣ್ಣ, ಉಪಾಧ್ಯಕ್ಷೆ ಮಂಜುಳಾ ಚಂದ್ರೇಗೌಡ, ಸರಗೂರು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಯೋಗೇಶ್ ಉಪಸ್ಥಿತರಿದ್ದರು.

Post Comments (+)