ಸೋಮವಾರ, ಮಾರ್ಚ್ 1, 2021
31 °C
ರೈತರ ಗಮನ ಸೆಳೆದ ಕೃಷಿ ವಸ್ತುಪ್ರದರ್ಶನ, ರೈತರು, ಜನರಿಂದ ಉತ್ತಮ ಸ್ಪಂದನೆ; ಮಾಹಿತಿ ಪಡೆದುಕೊಂಡ ಅನ್ನದಾತ

70 ಕೆ.ಜಿ ತೂಕದ ಬಾಳೆಗೊನೆ, ಗಜಗಾತ್ರದ ನಿಂಬೆ

ಎನ್‌. ನವೀನ್‌ ಕುಮಾರ್‌ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಬರೋಬ್ಬರಿ 70 ಕೆ.ಜಿ ತೂಗುವ ಪಚ್ಚಬಾಳೆ ಗೊನೆ, 6 ಕೆ.ಜಿ ತೂಕದ ಸೋರೆಕಾಯಿ, ವಿಶಿಷ್ಟ ರುಚಿ ಹಾಗೂ ಸ್ವಾದ ಹೊಂದಿರುವ ನಂಜನಗೂಡು ರಸಬಾಳೆ, ಗಜಗಾತ್ರದ ನಿಂಬೆ, ವಿದೇಶಿ ಸೊಪ್ಪು, ತರಕಾರಿ, ಅಧಿಕ ಹಾಲು ನೀಡುವ ಎಮ್ಮೆ, ಹಸು, ಅಧಿಕ ತೂಕದ ಮೇಕೆ, ಕೋಳಿ ತಳಿಗಳು, ವಿಶಿಷ್ಟ ರುಚಿಯ ಬಂಡೂರು ಕುರಿ, ಕೃಷಿಗೆ ಅಗತ್ಯವಿರುವ ಯಂತ್ರೋಪಕರಣಗಳು...

ದಸರಾ ಮಹೋತ್ಸವದ ಪ್ರಯುಕ್ತ ನಗರದ ಜೆ.ಕೆ.ಮೈದಾನದಲ್ಲಿ ಮಂಗಳವಾರದಿಂದ ಆರಂಭವಾದ ಕೃಷಿ ವಸ್ತುಪ್ರದರ್ಶನದ ಪ್ರಮುಖ ಆಕರ್ಷಣೆಗಳಿವು.

ಕೃಷಿ, ತೋಟಗಾರಿಕೆ, ಹೈನುಗಾರಿಕೆ ಸಂಬಂಧಿಸಿದ ಸಮಗ್ರ ಮಾಹಿತಿಯನ್ನು ಒಂದೇ ಸೂರಿನಡಿ ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ. ವಿವಿಧ ಬಿತ್ತನೆ ಬೀಜ, ರೇಷ್ಮೆ, ಸಾವಯವ ಗೊಬ್ಬರ ತಯಾರಿಕೆ, ಕೃಷಿ ಯಂತ್ರೋಪಕರಣಗಳಿಗೆ ಸಂಬಂಧಿಸಿದ ಮಳಿಗೆಗಳನ್ನು ತೆರೆಯಲಾಗಿದೆ. ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆಯ ಸಾಮಾಜಿಕ ಅರಣ್ಯ ವಿಭಾಗ, ರೇಷ್ಮೆ ಇಲಾಖೆಗಳು ಮಳಿಗೆಗಳನ್ನು ತೆರೆದಿದ್ದು, ರೈತರಿಗೆ ಸಿಗುವ ಸೌಲಭ್ಯಗಳ ಮಾಹಿತಿಯನ್ನು ನೀಡುತ್ತಿವೆ. ಹೆಬ್ಬೇವು, ಹುಣಸೆ, ಮಹಾಗನಿ, ನೇರಳೆ ಸೇರಿದಂತೆ ವಿವಿಧ ಗಿಡಗಳನ್ನು ಮಾರಾಟಕ್ಕಿಡಲಾಗಿದೆ.

ಮೈಸೂರು ತಾಲ್ಲೂಕಿನ ರೈತರು ಅತಿ ಹೆಚ್ಚು ಇಳುವರಿ ಪಡೆದಿರುವ ಹಣ್ಣು, ತರಕಾರಿಗಳ ಪ್ರದರ್ಶನವು ಗಮನ ಸೆಳೆಯಿತು. ಜಯಪುರ ಹೋಬಳಿಯ ತಳೂರು ಗ್ರಾಮದ ಸೋಮಶೇಖರ್‌ ಅವರು 70 ಕೆ.ಜಿ ತೂಕದ ಪಚ್ಚಬಾಳೆ ಗೊನೆ, ಇಲವಾಲ ಹೋಬಳಿಯ ಬೊಮ್ಮೆನಹಳ್ಳಿ ಗ್ರಾಮದ ಕುಮಾರ್‌ ಅವರು ದೊಡ್ಡ ಗಾತ್ರದ ಮೂಸಂಬಿ ಬೆಳೆದಿದ್ದಾರೆ. ಯಲಜನಹಳ್ಳಿ ಗ್ರಾಮದ ಲೋಕೇಶ್‌ ದೊಡ್ಡ ಗಾತ್ರದ ಸೀತಾಫಲ ಬೆಳೆದಿದ್ದು, ಎಲ್ಲರ ಆಕರ್ಷಣೆಯಾಗಿದೆ. ವರುಣ ಹೋಬಳಿಯ ವರಕೋಡು ಗ್ರಾಮದ ರೈತ ಕೃಷ್ಣೇಗೌಡ ಅವರು ನಂಜನಗೂಡು ರಸಬಾಳೆ ಬೆಳೆದಿದ್ದಾರೆ. ತಾಳೆಹಣ್ಣು, ಪಚ್ಚಬಾಳೆ ಗೊನೆಯನ್ನು ಸ್ಪರ್ಶಿಸಿ ರೈತರು ಕುತೂಹಲ ತಣಿಸಿಕೊಂಡರು. ತಾಳೆಹಣ್ಣನ್ನು ತಿನ್ನಬಹುದೇ ಎಂದು ಕೆಲ ಯುವಕ, ಯುವತಿಯರು ಮಳಿಗೆಯ ಪ್ರತಿನಿಧಿ ಬಳಿ ವಿಚಾರಿಸುತ್ತಿದ್ದರು. ತಾಳೆಯಿಂದ ಎಣ್ಣೆ ತಯಾರಿಸಲಾಗುತ್ತದೆ ಎಂದು ಪ್ರತಿನಿಧಿ ಉತ್ತರಿಸಿದರು.

ಟಿಲ್ಲರ್‌, ಮೇವು ಕಟಾವು ಯಂತ್ರ, ಕಳೆ ಕೀಳುವ ಯಂತ್ರ, ಔಷಧ ಸಿಂಪಡಣೆ ಉಪಕರಣ, ಹಾಲು ಕರೆಯುವ ಉಪಕರಣ, ಸೋಲಾರ್‌ ಕೀಟನಾಶಕ ಯಂತ್ರ ಸೇರಿದಂತೆ ವಿವಿಧ ಕೃಷಿ ಯಂತ್ರೋಪಕರಣಗಳನ್ನು ಪ್ರದರ್ಶನಕ್ಕಿಟ್ಟಿದ್ದು, ರೈತರು ಇವುಗಳ ಬಗ್ಗೆ ಮಾಹಿತಿ ಪಡೆದರು. ಯಂತ್ರೋಪಕರಣಗಳ ಖರೀದಿಗೆ ಕೃಷಿ ಇಲಾಖೆ ಸಹಾಯಧನ ನೀಡಲಿದ್ದು, ಅದರ ಬಗ್ಗೆ ರೈತರಿಗೆ ಮಾಹಿತಿ ನೀಡಲಾಯಿತು.

ಹೆಚ್ಚು ಹಾಲು ನೀಡುವ ಮು‍ರ‍್ರಾ ಎಮ್ಮೆ, ಗಿರ್‌, ಕಾಂಕ್ರೇಜ್‌ ಹಸು, ಕೃಷಿಗೆ ಸಹಾಯಕವಾಗುವ ಹಳ್ಳಿಕಾರ್‌, ಬರ್ಗೂರ್‌ ಎತ್ತುಗಳು, ಬೀಟಲ್‌, ಜಮುನಾಪರಿ, ಬೋಯರ್‌, ಶಿರೋಹಿ ತಳಿಯ ಮೇಕೆಗಳು, ಟರ್ಕಿ ಕೋಳಿ, ಗಿರಿರಾಜ, ಕಾವೇರಿ ತಳಿಯ ಕೋಳಿಗಳನ್ನು ಪ್ರದರ್ಶನಕ್ಕಿಡಲಾಗಿದ್ದು, ಹೆಚ್ಚಿನ ಜನರು ಇಲ್ಲಿಗೆ ಭೇಟಿ ನೀಡಿದರು. ಕೆಲವರು ಇವುಗಳ ಮುಂದೆ ನಿಂತು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.

ನಾಗನಹಳ್ಳಿಯ ಸಾವಯವ ಕೃಷಿ ಸಂಶೋಧನಾ ಕೇಂದ್ರದ ಮಳಿಗೆಯಲ್ಲಿ 29 ವಿಧದ ಭತ್ತದ ತಳಿಗಳ ಬೀಜಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಇದಲ್ಲದೆ, ಸಿರಿಧಾನ್ಯಗಳ ಬೀಜಗಳನ್ನೂ ಇಡಲಾಗಿತ್ತು.

ಕೃಷಿ ವಸ್ತುಪ್ರದರ್ಶನಕ್ಕೆ ಚಾಲನೆ ನೀಡಿದ ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ‘ದಸರಾ ಮಹೋತ್ಸವದಲ್ಲಿ ಕೃಷಿ ದಸರಾ ಹಾಗೂ ವಸ್ತುಪ್ರದರ್ಶನವೂ ಪ್ರಮುಖ ಆಕರ್ಷಣೆಯಾಗಿದೆ. ಗ್ರಾಮೀಣ ಕ್ರೀಡೆ, ಎತ್ತಿನಗಾಡಿ ಸ್ಪರ್ಧೆಯು ಈ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದೆ. ಕೃಷಿ ಇಲಾಖೆಯ ಅಚ್ಚುಕಟ್ಟಾಗಿ ಈ ಪ್ರದರ್ಶನ ಆಯೋಜನೆ ಮಾಡಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಸದ ಪ್ರತಾಪಸಿಂಹ, ಶಾಸಕ ಎಲ್‌.ನಾಗೇಂದ್ರ ಇದ್ದರು.

ವಿದೇಶಿ ತರಕಾರಿಗಳ ಪ್ರದರ್ಶನ

ಜಯಪುರ ಹೋಬಳಿಯ ತಳೂರು ಗ್ರಾಮದ ರೈತ ಟಿ.ಎಂ.ಯೋಗೇಶ್‌ ವಿದೇಶಿ ತರಕಾರಿ ಮಳಿಗೆಯನ್ನು ತೆರೆದಿದ್ದಾರೆ. 7 ವರ್ಷಗಳಿಂದ ವಿದೇಶಿ ತರಕಾರಿಗಳನ್ನು ಬೆಳೆಯುತ್ತಿರುವ ಯೋಗೇಶ್‌, ತಮ್ಮದೇ ಮಾರುಕಟ್ಟೆ ಜಾಲವನ್ನು ಹೊಂದಿದ್ದಾರೆ. ಬಕ್ರುಲಿ, ಲೇಟ್ಯೂಸ್‌, ಲೀಕ್ಸ್‌, ಚರಿ ಟೊಮೆಟೊ, ಸೆಲರಿ, ಲೆಮೆನ್‌ ಗ್ರಾಸ್‌, ತೈಮ್‌, ರೆಡ್‌ರಾಡಿಶ್‌, ಜುಕಿನಿ, ಗ್ರೀನ್‌ ಲೆಟ್ಯೀವಸ್‌ ಸೇರಿದಂತೆ 40 ವಿಧದ ಗಿಡಗಳು ಹಾಗೂ ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ಬೆಂಗಳೂರು, ಹೈದರಾಬಾದ್‌, ಚೆನ್ನೈ ನಗರಗಳಿಗೆ ತರಕಾರಿಗಳನ್ನು ಪೂರೈಸುತ್ತಿದ್ದಾರೆ.

ಮೈಸೂರಿನ ಮೋರ್‌, ಬಿಗ್‌ ಬಜಾರ್‌, ಲಾಯಲ್‌ ವರ್ಲ್ಡ್‌ ಸೇರಿದಂತೆ ಸೂಪರ್‌ ಮಾರ್ಕೆಟ್‌ಗಳಲ್ಲಿ ವಿದೇಶಿ ತರಕಾರಿಗಳು ಸಿಗುತ್ತವೆ. ಆದರೆ, ಇವುಗ ಳನ್ನು ಬೇರೆಡೆಯಿಂದ ತರಿಸಿಕೊಳ್ಳುತ್ತಿದ್ದು, ಸಾಗಣೆ ವೆಚ್ಚವನ್ನೂ ಗ್ರಾಹಕರ ಮೇಲೆ ಹಾಕಲಾಗುತ್ತಿದೆ. ಗ್ರಾಹಕರಿಗೆ ನೇರವಾಗಿ ಕಡಿಮೆ ಬೆಲೆಗೆ ತಾಜಾ ತರಕಾರಿಗಳನ್ನು ಪೂರೈಸುವ ಉದ್ದೇಶದಿಂದ ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಮಳಿಗೆ ತೆರೆಯಲಾಗಿದೆ ಎಂದು ಯೋಗೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು