ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಭರಣ ಲೋಕಕ್ಕೆ ಲೇಸ್‌ ಜ್ಯುವೆಲ್ಲರಿ

Last Updated 28 ಮೇ 2018, 19:30 IST
ಅಕ್ಷರ ಗಾತ್ರ

ವಸ್ತ್ರವಿನ್ಯಾಸದಲ್ಲಿ ಸಾಮಾನ್ಯವಾಗಿ ಬಳಕೆಯಾಗುತ್ತಿದ್ದ ಲೇಸ್‌ ಈಗ ಮಗ್ಗಲು ಬದಲಾಯಿಸಿಕೊಂಡು ಆಭರಣ ಕ್ಷೇತ್ರಕ್ಕೂ ಕಾಲಿಟ್ಟಿದೆ. ಸೀರೆ, ಸಲ್ವಾರ್‌ಗಳ ಅಂದ ಹೆಚ್ಚು ಮಾಡುತ್ತಿದ್ದ ಲೇಸ್‌ಗಳಿಂದ ಮಾಡಿರುವ ಆಕರ್ಷಕ, ಮನಹೋಹಕ ಕಿವಿಯೋಲೆ, ನೆಕ್ಲೇಸ್‌, ಬಳೆ, ಉಂಗುರ ಮೊದಲಾದ ಆಭರಣಗಳು ಈಗ ಹೆಂಗಳೆಯರ ಮನ ಕದ್ದಿವೆ.

ಟೆರಕೋಟ, ರೇಷ್ಮೆ ದಾರದ ಆಭರಣ, ಕ್ವಿಲ್ಲಿಂಗ್‌ ಆಭರಣಗಳು ಟ್ರೆಂಡ್‌ನಲ್ಲಿವೆ. ಆದರೆ ಅದಕ್ಕೆ ಹೋಲಿಸಿದರೆ ಲೇಸ್‌ ಜ್ಯುವೆಲ್ಲರಿ ಇನ್ನೂ ಅಷ್ಟೊಂದು ಜನಪ್ರಿಯವಾಗಿಲ್ಲ. ಪ್ಲೇನ್‌ ಅಥವಾ ಎಂಬ್ರಾಯ್ಡರಿ ಸೀರೆಗಳ ಅಂದ ಹೆಚ್ಚಿಸಲು ವಿವಿಧ ವಿನ್ಯಾಸದ ಲೇಸ್‌ಗಳನ್ನು ಅಂಚುಗಳಲ್ಲಿ ಬಳಸಲಾಗುತ್ತಿತ್ತು. ಈಗ ಇದೇ ಫ್ಯಾಷನ್‌ ಕೊಂಚ ಆಧುನೀಕರಣಗೊಂಡು ಜ್ಯುವೆಲ್ಲರಿ ರೂಪಕ್ಕೆ ಬಂದಿದೆ. ಕೆಲ ಕಚ್ಚಾ ವಸ್ತುಗಳನ್ನು ಬಳಸಿಕೊಂಡು ಈ ಜ್ಯುವೆಲ್ಲರಿ ತಯಾರಿಸುತ್ತಾರೆ.

ಈ ಲೇಸ್‌ ಜ್ಯುವೆಲ್ಲರಿಗಳು ಧರಿಸಲು ಹಗುರವಾಗಿ ಆರಾಮದಾಯಕವಾಗಿರುತ್ತದೆ. ಡ್ರೆಸ್‌ಗೆ ಹೊಂದುವಂತಹ ಬಣ್ಣದ ಲೇಸ್‌ನಲ್ಲಿಯೇ ಈ ಜ್ಯುವೆಲ್ಲರಿಗಳನ್ನು ಮಾಡಿಕೊಂಡು ಧರಿಸಬಹುದಾಗಿದೆ. ಲೇಸ್‌ಗಳನ್ನು ಬೇಕಾದ ವಿನ್ಯಾಸಕ್ಕೆ ಕತ್ತರಿಸಿಕೊಂಡು, ಕಚ್ಚಾ ವಸ್ತುಗಳನ್ನು ಬಳಸಿ, ಅದರ ಮೇಲೆ ಮುತ್ತು, ಹರಳುಗಳಿಂದ ವಿನ್ಯಾಸ ಮಾಡಿ, ಆಭರಣ ರೂಪಕ್ಕೆ ತರಲು ಹೆಚ್ಚು ಸಮಯ ಬೇಕು. ಜಾಲಹಳ್ಳಿಯ ಆಶಾ ರಜನಿ ಅವರದು ಲೇಸ್‌ ಜ್ಯುವೆಲ್ಲರಿ ಮಾಡುವಲ್ಲಿ ಪಳಗಿದ ಕೈ.

ನೋಡಲು ಆಕರ್ಷಕವಾಗಿ, ಕ್ವಿಲ್ಲಿಂಗ್‌ ಆಭರಣದಂತೆ ಕಾಣುವ ಲೇಸ್‌ ಜ್ಯುವೆಲ್ಲರಿಗಳನ್ನು ಸೀರೆ, ಸಲ್ವಾರ್‌, ಲೆಹೆಂಗಾಕ್ಕೆ ತಕ್ಕಂತೆ ಧರಿಸಬಹುದು ಎನ್ನುತ್ತಾರೆ ಆಶಾ. ಇವರು ಲೇಸ್‌ ಅನ್ನು ಬಳಸಿಕೊಂಡು ಬಗೆ ಬಗೆ ವಿನ್ಯಾಸಗಳನ್ನು ಮಾಡುತ್ತಾರೆ. ಇದು ವಿವಿಧ ಬಣ್ಣ, ವಿನ್ಯಾಸಗಳಲ್ಲಿ ಲಭ್ಯವಿರುವ ಇವುಗಳನ್ನು ಉಡುಪಿಗೆ ತಕ್ಕಂತೆ ಎಲ್ಲಾ ವಯಸ್ಸಿನವರಿಗೂ ಧರಿಸಲು ಸೂಕ್ತವಾಗಿರುತ್ತದೆ ಎನ್ನುತ್ತಾರೆ ಅವರು.

ಆಶಾ ರಜನಿ ಅವರು ಕಾರ್ಪೋರೇಟ್‌ ಕೆಲಸ ಮಾಡಿದವರು. ಮದುವೆಯಾದ ಬಳಿಕ ಮನೆಯಲ್ಲಿ ಕೆಲ ಹವ್ಯಾಸಗಳನ್ನು ರೂಢಿಸಿಕೊಂಡರು. ಅದರಲ್ಲಿ ಹ್ಯಾಂಡ್‌ ಮೇಡ್‌ ಜ್ಯುವೆಲ್ಲರಿಯೂ ಒಂದು. ರೇಷ್ಮೆದಾರಗಳಿಂದ ಬಗೆ ಬಗೆ ಆಭರಣಗಳನ್ನು ಮಾಡುತ್ತಿದ್ದ ಅವರು ಲೇಸ್‌ನಲ್ಲೂ ಆಭರಣ ಮಾಡಬಾರದೇಕೆ? ಎಂದು ಯೋಚಿಸಿ ಕಾರ್ಯಮಗ್ನರಾದರು. ಮೊದಲ ಪ್ರಯತ್ನವೇ ಅವರಿಗೆ ಮತ್ತಷ್ಟು ಇಂಚು ನೀಡಿತು. ವಿವಿಧ ಮಣಿ, ಹರಳುಗಳನ್ನು ಬಳಸಿ ಆಕರ್ಷಕವಾಗಿ ಆಭರಣಗಳನ್ನು ಮಾಡುತ್ತಾರೆ. ಇದರಲ್ಲಿ ಬ್ರೇಸ್‌ಲೆಟ್‌, ಕಾಲ್ಗೆಜ್ಜೆ, ಸೀರೆಪಿನ್‌, ಬಗೆ ಬಗೆ ಸರಗಳನ್ನು ಮಾಡುತ್ತಾರೆ.

ತಮ್ಮ ಆಭರಣಗಳ ಮಾರಾಟಕ್ಕೆ ಆಶಾ ರಜನಿ ಅವರು ಫೇಸ್‌ಬುಕ್‌ ಅನ್ನು ಮಾಧ್ಯಮವನ್ನಾಗಿಸಿಕೊಂಡಿದ್ದಾರೆ. ‘ಕೆಲ ಗ್ರಾಹಕರು ತಮ್ಮ ಉಡುಪಿನ ಚಿತ್ರಗಳನ್ನು ವಾಟ್ಸ್‌ ಆ್ಯಪ್‌ನಲ್ಲಿ ಕಳುಹಿಸಿದರೆ ಅದಕ್ಕೆ ತಕ್ಕಂತೆ ವಿನ್ಯಾಸ ಮಾಡಿ ಆಭರಣಗಳನ್ನು ಕಳುಹಿಸುತ್ತೇವೆ. ಸರ, ಬಳೆ, ಕಿವಿಯೋಲೆ, ಉಂಗರದ ಒಂದು ಸೆಟ್‌ ಬೆಲೆ ₹500’ ಎಂದು ಹೇಳುತ್ತಾರೆ ಆಶಾ.

ಆಶಾ ಮನೆಯಲ್ಲಿ ಗೃಹಿಣಿಯರಿಗೆ ಆಭರಣ ಕಾರ್ಯಾಗಾರಗಳನ್ನು ನಡೆಸುತ್ತಾರೆ. ಈ ಲೇಸ್‌ ಜ್ಯುವೆಲ್ಲರಿಗೆ ತುಂಬಾ ಬೇಡಿಕೆ ಇದೆ. ಇದನ್ನು ಮನೆಯಲ್ಲೇ ಮಾಡಬಹುದಾಗಿದ್ದರಿಂದ ಇದನ್ನು ವ್ಯಾಪಾರ ಮಾಡಿಕೊಂಡು ಸ್ವಾಭಿಮಾನಿ ಮಹಿಳೆಯರಾಗಬಹುದು ಎನ್ನುವ ಅವರಿಗೆ ಮುಂದಿನ ದಿನಗಳಲ್ಲಿ ಆನ್‌ಲೈನ್‌ ತರಗತಿ ನಡೆಸುವ ಯೋಚನೆಯೂ ಇದೆ.

‘ಆಸಕ್ತರು ನಿರ್ದಿಷ್ಟ ಮೊತ್ತ ಕಳುಹಿಸಿದರೆ ಅವರಿಗೆ ಲೇಸ್‌ ಕಿಟ್‌ ಕಳುಹಿಸಿ, ಆಭರಣ ಮಾಡುವ ವಿಧಾನಗಳ ವಿಡಿಯೊ ಕಳುಹಿಸುತ್ತೇನೆ. ಅದನ್ನು ನೋಡಿ ಅವರು ಕಲಿಯಬಹುದು’ ಎಂಬುದು ಅವರ ಆಲೋಚನೆ. ಇದಲ್ಲದೇ ತಮ್ಮಲ್ಲಿ ಕಲಿತ ಮಹಿಳೆಯರಿಗೆ ಇವರೇ ಹೊಸ ಆಭರಣಗಳ ಆರ್ಡರ್‌ ನೀಡುತ್ತಾರೆ.

ಲೇಸ್‌ ಜ್ಯುವೆಲ್ಲರಿಗಳನ್ನು ಮಾಡುವಾಗ ಗುಣಮಟ್ಟ ಮುಖ್ಯ. ಕಡಿಮೆ ಬೆಲೆಯಿಂದ ಹಿಡಿದು ದುಬಾರಿ ಬೆಲೆಯ ಲೇಸ್‌ಗಳು ಲಭ್ಯ. ಆಭರಣಗಳು ಹೆಚ್ಚು ಕಾಲ ಬಾಳಿಕೆ ಬರಬೇಕು ಎಂದಾದರೆ ಗುಣಮಟ್ಟದವುಗಳನ್ನು ಖರೀದಿಸಬೇಕು. ಕುಂದನ್, ಪರ್ಲ್, ಮಣಿಗಳ ವರ್ಕ್ ಇರುವ ಲೇಸ್‌ಗಳಿಂದ ಬಗೆ ಬಗೆ ವಿನ್ಯಾಸಗಳನ್ನು ಮಾಡಿಕೊಳ್ಳಬಹುದು ಎನ್ನುತ್ತಾರೆ ಆಶಾ.

ಮಾಹಿತಿಗೆ: 9902305606

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT