ಶುಕ್ರವಾರ, ಜೂಲೈ 10, 2020
22 °C
ಕಾರ್ಮಿಕ ಕಲ್ಯಾಣ ಮಂಡಳಿಗೆ ನಿತ್ಯವೂ ಮಾಹಿತಿ ನೀಡುತ್ತಿರುವ ಕಟ್ಟಡ ಕಾರ್ಮಿಕರು

ಮೈಸೂರು | 46,149 ಕಾರ್ಮಿಕರ ಖಾತೆಗೆ ₹ 5000

ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಲಾಕ್‌ಡೌನ್‌ನ ಸಂಕಷ್ಟದಲ್ಲಿ ಸಿಲುಕಿರುವ ಕಾರ್ಮಿಕರ ನೆರವಿಗಾಗಿ ಸರ್ಕಾರ ಘೋಷಿಸಿದಂತೆ, ಜಿಲ್ಲೆಯಲ್ಲಿ ನೋಂದಣಿ ಮಾಡಿಕೊಂಡಿರುವ 70 ಸಾವಿರ ಕಾರ್ಮಿಕರಲ್ಲಿ 46,149 ಮಂದಿಯ ಬ್ಯಾಂಕ್‌ ಖಾತೆಗೆ ತಲಾ ₹ 5 ಸಾವಿರ ಜಮೆಯಾಗಿದೆ.

ಎರಡು ತಿಂಗಳಿಂದ ಕೆಲಸವಿಲ್ಲದೆ ಸಂಕಷ್ಟದ ಸುಳಿಯಲ್ಲಿ ಸಿಲುಕಿದ್ದ ಕಾರ್ಮಿಕರಿಗೆ ರಾಜ್ಯ ಸರ್ಕಾರದ ಪರಿಹಾರ ಪ್ಯಾಕೇಜ್‌ನ ಅನುದಾನ ಇದೀಗ ಆಸರೆಯಾಗಿದ್ದು, ಬಹುತೇಕ ಕುಟುಂಬಗಳು ಈ ಹಣದಿಂದ ತಮ್ಮ ತುರ್ತು ಅಗತ್ಯ ಪೂರೈಸಿಕೊಂಡಿವೆ.

ಕಾರ್ಮಿಕ ಸಚಿವಾಲಯದಡಿ ಕಾರ್ಯನಿರ್ವಹಿಸುತ್ತಿರುವ ‘ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ’ ಯಲ್ಲಿ ನೋಂದಾಯಿಸಿಕೊಂಡಿರುವ ಕಾರ್ಮಿಕರ ಖಾತೆಗಳಿಗೆ ಹಣ ಜಮೆ ಮಾಡಲಾಗುತ್ತಿದೆ ಎಂದು ಕಾರ್ಮಿಕ ಇಲಾಖೆಯ ಮೂಲಗಳು ಸ್ಪಷ್ಟಪಡಿಸಿವೆ.

6 ಸಾವಿರ ಮಾಹಿತಿ ಸಂಗ್ರಹ: ‘ಜಿಲ್ಲೆಯ ವ್ಯಾಪ್ತಿಯಲ್ಲಿ 70 ಸಾವಿರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ನೋಂದಾಯಿಸಿ ಕೊಂಡಿದ್ದಾರೆ. ರೋಹಿಣಿ ಸಿಂಧೂರಿ ಅವರು ಮಂಡಳಿ ಕಾರ್ಯದರ್ಶಿಯಿದ್ದ ಸಂದರ್ಭದಲ್ಲಿ ನೀಡಿದ್ದ ಸೂಚನೆಯಂತೆ ಹಲವರ ಮಾಹಿತಿ ಸಂಗ್ರಹಿಸಲಾಗಿತ್ತು’ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಎಸ್‌.ಎಂ.ಮಂಜುಳಾದೇವಿ ತಿಳಿಸಿದರು.

‘ರಾಜ್ಯ ಸರ್ಕಾರ ಪರಿಹಾರ ಪ್ಯಾಕೇಜ್ ಘೋಷಿಸಿದ ಬಳಿಕ ಜಿಲ್ಲೆಯ ವ್ಯಾಪ್ತಿಯಲ್ಲಿ 3,700ಕ್ಕೂ ಹೆಚ್ಚು ಕಾರ್ಮಿಕರು ಆನ್‌ಲೈನ್‌ನಲ್ಲಿ ತಮ್ಮ ದಾಖಲಾತಿ ಅಪ್‌ಡೇಟ್‌ ಮಾಡಿದ್ದಾರೆ. ಕಾರ್ಮಿಕ ಇಲಾಖೆಯ ಅಧಿಕಾರಿಗಳು ನೇರವಾಗಿ 6 ಸಾವಿರಕ್ಕೂ ಹೆಚ್ಚು ಕಾರ್ಮಿಕರಿಂದ ಅವರ ಕಾರ್ಮಿಕ ಕಾರ್ಡ್‌ನ ಜೆರಾಕ್ಸ್‌ ಪ್ರತಿಯೊಂದಿಗೆ, ಆಧಾರ್ ಕಾರ್ಡ್‌, ಆಧಾರ್ ಲಿಂಕ್ ಆಗಿರುವ ಬ್ಯಾಂಕ್‌ ಖಾತೆಯ ಜೆರಾಕ್ಸ್‌ ಪ್ರತಿ ಪಡೆದಿದ್ದಾರೆ’ ಎಂದು ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಕಾರ್ಮಿಕರಿಂದ ಸಂಗ್ರಹಿಸಿದ ದಾಖಲಾತಿಗಳನ್ನು ವ್ಯವಸ್ಥಿತವಾಗಿ ಮಂಡಳಿಗೆ ಕಳುಹಿಸಿಕೊಡುತ್ತಿದ್ದೇವೆ. ಅಲ್ಲಿ ನೋಂದಾಯಿತರ ದಾಖಲೆಗೆ ಇವುಗಳನ್ನು ಅಪ್‌ಡೇಟ್‌ ಮಾಡಿ, ಹಂತ ಹಂತವಾಗಿ ಪ್ರತಿಯೊಬ್ಬರ ಬ್ಯಾಂಕ್‌ ಖಾತೆಗೂ ಹಣ ಜಮೆ ಮಾಡುತ್ತಿದ್ದಾರೆ’ ಎಂದು ಅವರು ಹೇಳಿದರು.

ಅರಿವಿನ ಕೊರತೆ; ನೋಂದಣಿಯಿಲ್ಲ
‘ಇಲಾಖೆ, ಮಂಡಳಿಯಲ್ಲಿ ನೋಂದಾಯಿಸಿಕೊಳ್ಳದ ಕಾರ್ಮಿಕರೂ ಇದ್ದಾರೆ. ಇವರ ಸಂಖ್ಯೆ ಇಂತಿಷ್ಟೇ ಎಂದು ನಿಖರವಾಗಿ ಹೇಳಲಾಗದು. ಅರಿವಿನ ಕೊರತೆಯಿಂದಲೇ ಸಾಕಷ್ಟು ಮಂದಿ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ’ ಎಂದು ಕಾರ್ಮಿಕ ಇಲಾಖೆಯ ಸಹಾಯಕ ಆಯುಕ್ತ ತಮ್ಮಣ್ಣ ತಿಳಿಸಿದರು.

‘ನೋಂದಾಯಿಸಿಕೊಳ್ಳುವಂತೆ ಕಾರ್ಮಿಕ ಸಂಘಟನೆಗಳ ಮೂಲಕ ಮನವಿ ಮಾಡುತ್ತೇವೆ. ಕೆಲಸದ ಸ್ಥಳಗಳಲ್ಲಿ ಜಾಗೃತಿ ಮೂಡಿಸುತ್ತೇವೆ. ಆದರೂ ಎಲ್ಲರೂ ನೋಂದಾಯಿಸಿಕೊಳ್ಳಲು ಮುಂದಾಗುವುದಿಲ್ಲ’ ಎಂದು ಹೇಳಿದರು.

‘ಎರಡು ತಿಂಗಳಿಂದ ಕೆಲಸವೇ ಇಲ್ಲ. ಸರ್ಕಾರದ ನೆರವು ಸಿಕ್ಕರೆ ಅನುಕೂಲವಾಗಲಿದೆ’ ಎಂದು ಬುಧವಾರ ದಾಖಲಾತಿ ಸಲ್ಲಿಸಲಿಕ್ಕಾಗಿಯೇ ಮೈಸೂರಿನಲ್ಲಿನ ಕಾರ್ಮಿಕ ಇಲಾಖೆ ಕಚೇರಿಗೆ ಬಂದಿದ್ದ ಧನಗಳ್ಳಿಯ ಕಟ್ಟಡ ಕಾರ್ಮಿಕ ಮರಿಸ್ವಾಮಿ ತಿಳಿಸಿದರು.

‘ನಿತ್ಯವೂ ದುಡಿದು ತಿನ್ನೋರು ನಾವು. ನಮ್ಮ ಬಳಿ ಕಾರ್ಮಿಕ ಕಾರ್ಡ್‌ ಇಲ್ಲ. ಇಂತಹ ಹೊತ್ತಲ್ಲೂ ಸರ್ಕಾರದ ನೆರವು ಸಿಗದಿರುವುದು ನಮ್ಮನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ’ ಎಂದು ಅಂಕಮ್ಮ ಅಳಲು ತೋಡಿಕೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು