ಸೋಮವಾರ, ಜನವರಿ 25, 2021
15 °C
ಮುಖ್ಯಮಂತ್ರಿಗೆ ಸಾಹಿತಿಗಳ ಪತ್ರ

ಮುಡಾ ನಿವೇಶನದ ಅಕ್ರಮ ವರ್ಗಾವಣೆ: ಪುಸ್ತಕ ಪ್ರಾಧಿಕಾರದ ಅಧ್ಯಕ್ಷರ ವಜಾಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಕಬಳಿಕೆ ಪ್ರಕರಣದಲ್ಲಿ ಶಾಮೀಲಾಗಿರುವ ನಂದೀಶ್ ಹಂಚೆ ಅವರನ್ನು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕು ಹಾಗೂ ಅದಕ್ಕೆ ಸಹಕರಿಸಿದ ಮುಡಾ ಆಯುಕ್ತರನ್ನು ಅಮಾನತುಗೊಳಿಸಬೇಕು’ ಎಂದು ಸಾಹಿತಿಗಳು ಆಗ್ರಹಿಸಿದ್ದಾರೆ.

ಈ ಸಂಬಂಧ ಶೀಘ್ರವೇ ಕ್ರಮ ವಹಿಸುವಂತೆ ಕೋರಿ ಸಾಹಿತಿಗಳಾದ ಪ್ರೊ.ಎಸ್‌.ಜಿ.ಸಿದ್ದರಾಮಯ್ಯ, ಬಂಜಗೆರೆ ಜಯಪ್ರಕಾಶ್‌, ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಮಹೇಶ್ಚಂದ್ರ ಗುರು, ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಅಧ್ಯಕ್ಷ ಕೆ.ಎಸ್.ಶಿವರಾಮು ಅವರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.

‘ನಂದೀಶ್‌ ಅವರು ತಮ್ಮ ಅಧಿಕಾರ ದುರ್ಬಳಕೆ ಮಾಡಿ ಕೊಂಡು, ವಿಜಯನಗರ 4ನೇ ಹಂತದಲ್ಲಿ ಸುಮಾರು ₹ 4 ಕೋಟಿ ಬೆಲೆ ಬಾಳುವ (50x80 ಅಡಿ) ನಿವೇಶನವನ್ನು ಪತ್ನಿ ದೀಪಾ ಹಂಚೆ ಅವರ ಹೆಸರಿಗೆ ಅಕ್ರಮವಾಗಿ ಒಂದೇ ದಿನದಲ್ಲಿ ವರ್ಗಾಯಿಸಿಕೊಂಡಿದ್ದಾರೆ. ಇದಕ್ಕೆ ಮುಡಾ ಅಧಿಕಾರಿಗಳು ಸಹಕರಿಸಿದ್ದಾರೆ’ ಎಂದು ಪತ್ರದಲ್ಲಿ ದೂರಿದ್ದಾರೆ.

‘ಇದು 1994ರಲ್ಲಿ ಐಎಫ್‌‌ಎಸ್ ಅಧಿಕಾರಿ ನಾಗರಾಜು ಎಂಬುವರಿಗೆ ಹಂಚಿಕೆಯಾಗಿದ್ದ ನಿವೇಶನ. ಅವರಿಗೆ ಬೆಂಗಳೂರಿನಲ್ಲೂ ನಿವೇಶನ ಮಂಜೂರಾಗಿತ್ತು. ಇದನ್ನು ಪ್ರಶ್ನಿಸಿ ದೂರು ದಾಖಲಾಗಿದ್ದರಿಂದ, ಮೈಸೂರಿನ ನಿವೇಶನವನ್ನು ಮುಡಾಗೆ ಹಿಂತಿರುಗಿಸಿದ್ದರು. ಅವರು ಪಾವತಿಸಿದ್ದ ಮುಂಗಡ ಹಣವನ್ನು ಪ್ರಾಧಿಕಾರವು 2006ರಲ್ಲಿ ಮರು ಪಾವತಿಸಿತ್ತು. 2019ರಲ್ಲಿ ಅವರು ನಿಧನರಾದರು. ಆದರೆ, ನಿವೇಶನ ಹಿಂಪಡೆದ ದಾಖಲೆಗಳನ್ನು ಮುಡಾ ಅಧಿಕಾರಿಗಳು ಮರೆಮಾಚಿದ್ದಾರೆ. ಈಚೆಗೆ ಐಎಫ್‌ಎಸ್‌ ಅಧಿಕಾರಿ ಪತ್ನಿ ಶಶಿಕಲಾ ಅವರ ಹೆಸರಿಗೆ ಪೌತಿ ಖಾತೆ ಆಧಾರದಲ್ಲಿ ಈ ನಿವೇಶನವನ್ನು ಅಕ್ರಮವಾಗಿ ವರ್ಗಾಯಿಸಲಾಗಿತ್ತು. ರಾಜಕೀಯ ಪ್ರಭಾವದಿಂದ ಈ ಪ್ರಕ್ರಿಯೆ ನಡೆದಿದೆ. ಒಂದೇ ದಿನದಲ್ಲಿ ಖಾತೆ ವರ್ಗಾವಣೆ, ಕ್ರಯಪತ್ರ ಮಾಡಿಕೊಡಲಾಗಿದೆ’ ಎಂದು ಆರೋಪಿಸಿದ್ದಾರೆ.

‘ಅದೇ ದಿನ ಶಶಿಕಲಾ ಅವರು ದೀಪಾ ಹಂಚೆ ಅವರಿಗೆ ಶುದ್ಧ ಕ್ರಯ ಪತ್ರ ಮಾಡಿಕೊಟ್ಟಿದ್ದಾರೆ. ದೀಪಾ ಅವರು ಪತಿ ನಂದೀಶ್‌ ಹಂಚೆ ಅವರ ಹೆಸರನ್ನು ಮರೆಮಾಚಿ ಕ್ರಯಪತ್ರದಲ್ಲಿ ತಮ್ಮ ತಂದೆ ಹೆಸರು ನಮೂದಿಸಿದ್ದಾರೆ. ನಂದೀಶ್‌ ಅವರು ತಮ್ಮ ಖಾತೆಯಿಂದ ಒಟ್ಟು ₹ 60 ಲಕ್ಷವನ್ನು ಶಶಿಕಲಾ ಅವರಿಗೆ ಪಾವತಿಸಿ ಪತ್ನಿಗೆ ಅಕ್ರಮವಾಗಿ ನಿವೇಶನ ದೊರಕಿಸಿಕೊಡುವಲ್ಲಿ ನೆರವಾಗಿದ್ದಾರೆ. ಈ ಮೂಲಕ ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ. ಅಕ್ರಮ ಮಾರಾಟದಲ್ಲಿ ಮುಡಾ ಆಯುಕ್ತರೂ ಕೈಜೋಡಿಸಿದ್ದಾರೆ. ಈ ಬಗ್ಗೆ ತನಿಖೆಯಾಗಬೇಕು’ ಎಂದು ಆಗ್ರಹಿಸಿದ್ದಾರೆ.

‘ಯಾವುದೇ ತನಿಖೆಗೆ ಸಿದ್ಧ’

‘ಮುಡಾದಿಂದ ನಾನು ಯಾವುದೇ ನಿವೇಶನ ಖರೀದಿಸಿಲ್ಲ. ನನಗೂ ಮುಡಾಗೂ ಸಂಬಂಧ ಇಲ್ಲ. ಈ ವಿಚಾರದಲ್ಲಿ ಯಾವುದೇ ರೀತಿಯ ತನಿಖೆ ಎದುರಿಸಲು ಸಿದ್ಧ’ ಎಂದು ನಂದೀಶ್‌ ಹಂಚೆ ಹೇಳಿದರು.

‘ಮಧ್ಯವರ್ತಿಗಳ ಮೂಲಕ ನನ್ನ ಪತ್ನಿ ಹಾಗೂ ಅತ್ತೆ ನಿವೇಶನ ಖರೀದಿಸಿದ್ದು ನಿಜ. ಶಶಿಕಲಾ ಹಾಗೂ ನನ್ನ ಪತ್ನಿ ನಡುವೆ ಹಣಕಾಸು ವ್ಯವಹಾರ ನಡೆದಿದೆಯೇ ಹೊರತು ಮುಡಾ ಜೊತೆ ಅಲ್ಲ. ಅದಕ್ಕೆ ನಾನು ಹಣಕಾಸು ಸಹಾಯ ಮಾಡಿದ್ದೇನೆ. ಮೂಲ ವಾರಸುದಾರರು ತಪ್ಪು ಮಾಡಿದ್ದಾರೆ ಎಂದು ಮುಡಾಗೆ ಗೊತ್ತಾದ ಮೇಲೆ ನಿವೇಶನ ಮಂಜೂರಾತಿ ರದ್ದು ಮಾಡಲಾಗಿದೆ’ ಎಂದರು.

ಅಕ್ರಮ ವರ್ಗಾವಣೆ: ಪರಿಶೀಲನೆ

‘ದಾಖಲೆಗಳಲ್ಲಿ ಮಾಹಿತಿ ಸರಿಯಾಗಿ ನಮೂದಾಗಿಲ್ಲ. ಸಂಬಂಧಿಸಿದ ದಾಖಲೆಗಳನ್ನು ಹುಡುಕಲಾಗುತ್ತಿದೆ. ಫೈಲ್‌ ಎಲ್ಲಿ ಹೋಗಿದೆ ಎಂಬುದು ಗೊತ್ತಾಗಿಲ್ಲ. 2006ರಲ್ಲಿ ಮುಂಗಡ ಹಣ ಮರುಪಾವತಿಸಿ ನಿವೇಶನ ಹಿಂಪಡೆದಾಗ ಇದ್ದ ನೌಕರ ಮೃತರಾಗಿದ್ದಾರೆ’ ಎಂದು ಮುಡಾ ಆಯುಕ್ತ ಡಿ.ಬಿ.ನಟೇಶ್‌ ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಮುಡಾ ಅಧ್ಯಕ್ಷ ಎಚ್‌.ವಿ.ರಾಜೀವ್‌, ‘ಎಸಿಬಿಗೆ ವಹಿಸಲು ಇದು ಭ್ರಷ್ಟಾಚಾರದ ಪ್ರಕರಣ ಅಲ್ಲ. ಹೀಗಾಗಿ, ಯಾವ ರೀತಿ ತನಿಖೆ ನಡೆಸಬೇಕು ಎಂಬುದರ ಬಗ್ಗೆಯೂ ಚಿಂತನೆ ನಡೆಸಿದ್ದೇವೆ. ಈ ಪ್ರಕರಣದಲ್ಲಿ ಈಗಾಗಲೇ ಆಸ್ತಿ ವಾಪಸ್‌ ಪಡೆದಿದ್ದು, ದಾಖಲೆ ಪರಿಶೀಲಿಸಲಾಗುತ್ತಿದೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು