ಪ್ರಾಣಿ ಆರೈಕೆ: ಪುನರ್ವಸತಿ ಕೇಂದ್ರ ಶೀಘ್ರ

ಸೋಮವಾರ, ಮೇ 27, 2019
27 °C
ಅಶಕ್ತ, ಮಾನಸಿಕ ಅಸ್ವಸ್ಥ, ಅನಾಥ ಪ್ರಾಣಿಗಳಿಗೆ ಆಸರೆ, ಚಿಕಿತ್ಸೆ

ಪ್ರಾಣಿ ಆರೈಕೆ: ಪುನರ್ವಸತಿ ಕೇಂದ್ರ ಶೀಘ್ರ

Published:
Updated:
Prajavani

ಮೈಸೂರು: ಅಶಕ್ತ, ಮಾನಸಿಕ ಅಸ್ವಸ್ಥ, ಅನಾಥ ಪ್ರಾಣಿಗಳನ್ನು ರಕ್ಷಿಸಿ ಚಿಕಿತ್ಸೆ ನೀಡುವ ಉದ್ದೇಶದಿಂದ ರಾಯನಕೆರೆ ಬಳಿಯ 5 ಎಕರೆ ಜಾಗದಲ್ಲಿ ಪ್ರಾಣಿ ಪುನರ್ವಸತಿ ಕೇಂದ್ರ ಆರಂಭವಾಗುತ್ತಿದೆ. ಈ ರೀತಿಯ ಕೇಂದ್ರ ಶುರುವಾಗುತ್ತಿರುವುದು ರಾಜ್ಯದಲ್ಲಿ ಇದೇ ಮೊದಲು.

ನಗರದಲ್ಲಿ ಈಚೆಗೆ ಬೀದಿ ನಾಯಿಗಳ ಉಪಟಳ ವಿಪರೀತವಾಗಿದೆ. ಹಾಗಾಗಿ, ರೇಬಿಸ್‌ ಚುಚ್ಚುಮದ್ದು ನೀಡುವುದು, ಸಂತಾನ ಹರಣ ಚಿಕಿತ್ಸೆ ನೀಡುವುದು ನಡೆದಿದೆ. ಅಂತೆಯೇ, ಬೀದಿ ಹಂದಿ ಕಾಟವೂ ಹೆಚ್ಚಾಗಿದೆ. ನಗರದಲ್ಲಿ ಈ ತಿಂಗಳು ಪೂರ್ತಿ ‘ಆಪರೇಷನ್‌ ಸ್ಟ್ರೇ ಪಿಗ್’ ಕಾರ್ಯಕ್ರಮ ನಡೆಯುತ್ತಿದ್ದು, 6 ದಿನಗಳಲ್ಲಿ 100ಕ್ಕೂ ಹೆಚ್ಚು ಹಂದಿಗಳನ್ನು ಹಿಡಿಯಲಾಗಿದೆ. ಆದರೆ, ನಗರದಲ್ಲಿ ಈ ಪ್ರಾಣಿಗಳನ್ನು ಸಲಹಿ, ಚಿಕಿತ್ಸೆ ನೀಡಲು ಕೇಂದ್ರವೊಂದು ಇಲ್ಲ. ಹಾಗಾಗಿ, ಹಿಡಿದ ಹಂದಿಗಳನ್ನು ಅನಿವಾರ್ಯವಾಗಿ ಕಾಡಿಗೆ ಬಿಡುವಂತೆ ಆಗಿದೆ.

ಆದರೆ, ಕಾಡಿಗೆ ನಗರದ ಪ್ರಾಣಿಗಳನ್ನು ಬಿಡುವುದರ ಬಗ್ಗೆ ಪರಿಸರವಾದಿಗಳ ಆಕ್ಷೇಪವಿದೆ. ಕಾಡು ಪ್ರಾಣಿಗಳ ಆಹಾರ ಕ್ರಮ ಏರುಪೇರು ಆಗುವುದರ ಜತೆಗೆ, ಅವುಗಳ ಆರೋಗ್ಯವೂ ಕೆಡುತ್ತದೆ ಎನ್ನುವುದು ಆರೋಪ. ಇದಕ್ಕಾಗಿ ನಗರಪಾಲಿಕೆಯು ಹೊಸ ಕ್ರಮಕ್ಕೆ ಮುಂದಾಗಿದೆ. ಚಿಕಿತ್ಸೆ, ಪುನರ್ವಸತಿ, ಆರೈಕೆ – ಈ ಮೂರೂ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಪುನರ್ವಸತಿ ಕೇಂದ್ರ ನಿರ್ಮಿಸುತ್ತಿದೆ.

ಬಿ.ಎಲ್‌.ಭೈರಪ್ಪ ಅವರು ಮೇಯರ್‌ ಆಗಿದ್ದ ಅವಧಿಯಲ್ಲೇ ಈ ಯೋಜನೆ ಪ್ರಸ್ತಾವ ಸಲ್ಲಿಸಲಾಗಿತ್ತು. ಆದರೆ, ಅದು ಸಾಕಾರಗೊಂಡಿರಲೇ ಇಲ್ಲ. ಇದೀಗ ಬಹತೇಕ ಎಲ್ಲ ಸಿದ್ಧತೆಗಳೂ ಪೂರ್ಣಗೊಂಡಿವೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಕೇಂದ್ರ ಶುರುವಾಗಿಲ್ಲ. ಮೇ 23ರ ನಂತರ ಪೂರ್ಣ ಪ್ರಮಾಣದಲ್ಲಿ ನಿರ್ಮಾಣ ಕಾರ್ಯ ಶುರುವಾಗಲಿದೆ. ಚೆನ್ನೈ, ಹೈದರಾಬಾದ್, ಮುಂಬೈನಲ್ಲಿ ಈ ರೀತಿಯ ಕೇಂದ್ರಗಳಿವೆ. ಈ ಕೇಂದ್ರಗಳ ಅಧ್ಯಯನ ನಡೆಸಿ ಇಲ್ಲಿನ ಕೇಂದ್ರದ ರೂಪುರೇಷೆ ಸಿದ್ಧಪಡಿಸಲಾಗಿದೆ ಎಂದು ನಗರಪಾಲಿಕೆಯ ಪಶು ವೈದ್ಯಾಧಿಕಾರಿ ಡಾ.ಸುರೇಶ್‌ ಬಾಬು ‘ಪ್ರಜಾವಾಣಿ’ಗೆ ತಿಳಿಸಿದರು.

ಸಾರ್ವಜನಿಕರಿಗೆ ಅನುಕೂಲ: ಈ ಕೇಂದ್ರ ಜಾರಿಯಾದರೆ ಸಾರ್ವಜನಿಕರಿಗೇ ಹೆಚ್ಚು ಅನುಕೂಲ. ಏಕೆಂದರೆ, ಪೋಲಿ ಬಿದ್ದ ನಾಯಿ, ಹಸು, ಹಂದಿಗಳಿಂದ ರಕ್ಷಣೆ ಸಿಕ್ಕಂತಾಗುತ್ತದೆ. ನಗರದಲ್ಲಿ 2009ರಿಂದ ಬೀದಿನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ನೀಡಲಾಗುತ್ತಿದೆ. 2012ರಲ್ಲಿ ನಾಯಿಗಳ ಸಂಖ್ಯೆ ನಗರದಲ್ಲಿ 27 ಸಾವಿರವಿತ್ತು. 2016ರಲ್ಲಿ 44 ಸಾವಿರಕ್ಕೆ ಏರಿತ್ತು. ಈಗ ಸಂಖ್ಯೆ 50 ಸಾವಿರವಾಗಿದೆ. ಈ ವರ್ಷ 41, 432 ನಾಯಿಗಳಿಗೆ ಚಿಕಿತ್ಸೆ ನೀಡಲಾಗಿದೆ.

ಈಗಿರುವ ಪ್ರಾಣಿ ಜನನ ನಿಯಂತ್ರಣ (ಎಬಿಸಿ) ಕೇಂದ್ರದಲ್ಲಿ ಪ್ರಾಣಿಗಳಿಗೆ ಸೂರು ನೀಡಲು ಜಾಗವಿಲ್ಲ. ಅಲ್ಲದೇ, ಇದು ಕೇವಲ ನಾಯಿಗಳಿಗಷ್ಟೇ ಮೀಸಲಾಗಿದೆ. ಹಾಗಾಗಿ, ಪ್ರಾಣಿ ಪುನರ್ವಸತಿ ಕೇಂದ್ರ ಶುರುವಾದಲ್ಲಿ ನಾಯಿ, ಹಂದಿ, ದನಗಳನ್ನು ಸೇರಿದಂತೆ ಸಾವಿರಾರು ಪ್ರಾಣಿಗಳನ್ನು ಇರಿಸಿಕೊಂಡು ಚಿಕಿತ್ಸೆ, ಆರೈಕೆ ನೀಡುವುದು ಸಾಧ್ಯವಾಗಲಿದೆ ಎಂದರು.

Tags: 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !