ಶನಿವಾರ, ಜುಲೈ 31, 2021
27 °C
ಕೊರೊನಾ ಸೋಂಕಿನಿಂದ ಸಾವಿನ ಸಂಖ್ಯೆ ಐದಕ್ಕೇರಿಕೆ; ಗರ್ಭಿಣಿಗೂ ಕೋವಿಡ್–19

ಮೈಸೂರಿನಲ್ಲಿ ಮತ್ತೊಂದು ಸಾವು: 25 ಮಂದಿಗೆ ಸೋಂಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಕೊರೊನಾ ವೈರಸ್‌ ಸೋಂಕು ತಗುಲಿದ್ದ ವೃದ್ಧೆಯೊಬ್ಬರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಡಳಿತ ಭಾನುವಾರ ದೃಢಪಡಿಸಿದೆ.

ಮೈಸೂರಿನ ಸುಭಾಷ್‌ನಗರದ ಈ ವೃದ್ಧೆ ಅನಾರೋಗ್ಯಕ್ಕೀಡಾಗಿದ್ದರು. ಜುಲೈ 3ರಂದು ಇವರ ಗಂಟಲುದ್ರವದ ಮಾದರಿ ಸಂಗ್ರಹಿಸಲಾಗಿತ್ತು.

ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಇವರು, ಆಸ್ಪತ್ರೆಯಲ್ಲಿ ಗಂಟಲು ದ್ರವದ ಮಾದರಿ ನೀಡಿದ ಬಳಿಕ ಕೋವಿಡ್‌ ಕೇರ್ ಸೆಂಟರ್‌ಗೆ ಮರಳುತ್ತಿದ್ದ ದಾರಿ ನಡುವೆಯೇ ಮೃತಪಟ್ಟಿದ್ದರು. ಮಾದರಿ ಪರೀಕ್ಷೆಯಲ್ಲಿ ಕೊರೊನಾ ವೈರಸ್ ಸೋಂಕು ತಗುಲಿದ್ದು ದೃಢಪಟ್ಟಿದೆ ಎಂಬುದು ಮೂಲಗಳಿಂದ ತಿಳಿದು ಬಂದಿದೆ.

ವೃದ್ಧೆ ವಾಸವಿದ್ದ ಮನೆಯ ಸುತ್ತಮುತ್ತಲಿನ ಪ್ರದೇಶವನ್ನು ಕಂಟೈನ್‌ಮೆಂಟ್‌ ಜೋನ್ ಎಂದು ಘೋಷಿಸಿ, ಸೀಲ್‌ಡೌನ್‌ ಮಾಡಲಾಗಿದೆ. ಈಕೆಯ ಸಂಪರ್ಕಿತರನ್ನು ಕ್ವಾರಂಟೈನ್‌ಗೊಳಪಡಿಸಲಾಗಿದೆ. ಎಲ್ಲರ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ ಎಂಬುದು ಗೊತ್ತಾಗಿದೆ.

ಜಿಲ್ಲೆಯಲ್ಲಿ ಇಲ್ಲಿಯವರೆಗೂ ಕೊರೊನಾ ಸೋಂಕು ತಗುಲಿ ಮೃತಪಟ್ಟವರ ಸಂಖ್ಯೆ ಐದಕ್ಕೇರಿದೆ. ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ವೃದ್ಧರೊಬ್ಬರು ಭಾನುವಾರ ಮೃತಪಟ್ಟಿದ್ದು, ಇವರ ಕೋವಿಡ್–19 ತಪಾಸಣಾ ವರದಿ ಬರಬೇಕಿದೆ.

179 ಸಕ್ರಿಯ ಪ್ರಕರಣ: 25 ಮಂದಿಗೆ ಭಾನುವಾರ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಕೋವಿಡ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದ 12 ಜನರು ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ.

ಪೀಡಿತರ ಸಂಪರ್ಕದಲ್ಲಿದ್ದ 12 ಜನರಿಗೆ, ಅಂತರ ಜಿಲ್ಲಾ ಪ್ರವಾಸ ನಡೆಸಿರುವ 6 ಮಂದಿ ಹಾಗೂ ತೀವ್ರ ಉಸಿರಾಟದ ಸಮಸ್ಯೆ ಎದುರಿಸುತ್ತಿರುವ ಇಬ್ಬರು (ಒಬ್ಬರು ಮೃತ), ಶೀತಜ್ವರ ಪೀಡಿತರಾಗಿದ್ದ ನಾಲ್ವರು ಸೇರಿದಂತೆ ಗರ್ಭಿಣಿಯೊಬ್ಬರಿಗೆ ಸೋಂಕು ತಗುಲಿದೆ ಎಂದು ಹೇಳಿದ್ದಾರೆ.

ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 436ಕ್ಕೇರಿದೆ. 252 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, 179 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ 165 ಜನರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ತಲಾ ಆರು ಪೀಡಿತರು ಖಾಸಗಿ ಆಸ್ಪತ್ರೆ ಹಾಗೂ ತಮ್ಮ ಮನೆಗಳಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರು ಗರ್ಭಿಣಿಯರು ಹೆರಿಗೆ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು