ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಡಹಬ್ಬ ದಸರಾ ಮಹೋತ್ಸವ: ಚಲನಚಿತ್ರೋತ್ಸವದಲ್ಲಿ ‘ಅಪ್ಪು ದಿನ’

2 ಕಡೆ, 112 ಪ್ರದರ್ಶನಕ್ಕೆ ಸಿದ್ಧತೆ
Last Updated 6 ಸೆಪ್ಟೆಂಬರ್ 2022, 3:48 IST
ಅಕ್ಷರ ಗಾತ್ರ

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ನಡೆಯುವ ಚಲನಚಿತ್ರೋತ್ಸವದಲ್ಲಿ ‘ಅಪ್ಪು ದಿನ’ ಆಚರಿಸಲು ನಿರ್ಧರಿಸಲಾಗಿದೆ.

ಖ್ಯಾತ ಚಲನಚಿತ್ರ ನಟ ಪುನೀತ್‌ ರಾಜ್‌ಕುಮಾರ್‌ ಸ್ಮರಣೆಗಾಗಿ ಒಂದು ದಿನವನ್ನು ಮೀಸಲಿಡಲುಚಲನಚಿತ್ರ ಉಪ ಸಮಿತಿಯು ತೀರ್ಮಾನಿಸಿದೆ. ಸೆ.27ರಂದು ಪುನೀತ್ ಅಭಿನಯದ ‘ಬೆಟ್ಟದ ಹೂವು’ ಸಿನಿಮಾದಿಂದ ಹಿಡಿದು ‘ಜೇಮ್ಸ್‌’ವರೆಗೆ ಆಯ್ದ 8 ಜನಪ್ರಿಯ ಸಿನಿಮಾಗಳನ್ನು ಪ್ರದರ್ಶಿಸಲಿದೆ. ಸಾಮಾಜಿಕ ಸಂದೇಶ ಸಾರುವ ಚಲನಚಿತ್ರಗಳ ಮೂಲಕ ಒಂದಿಡೀ ದಿನ ‘ಪವರ್‌ಸ್ಟಾರ್‌’ ಸ್ಮರಣೆ ಮಾಡಲಾಗುತ್ತಿದೆ.

ವಿವಿಧ ಭಾಷೆಗಳ, ಹೊಸ ಚಲನಚಿತ್ರಗಳನ್ನು ಪ್ರದರ್ಶಿಸಲು ಯೋಜಿಸಲಾಗಿದೆ. ಆಸ್ಕರ್ ‍ಪ್ರಶಸ್ತಿ ಪುರಸ್ಕೃತ ಚಲನಚಿತ್ರಗಳನ್ನು ತರಲಾಗುತ್ತಿದೆ. ಸಾಂಸ್ಕೃತಿಕ ನಗರಿಯ ಚಿತ್ರರಸಿಕರಿಗೆ ಸದಭಿರುಚಿಯ ಸಿನಿಮಾಗಳನ್ನು ತೋರಿಸಲು ಯೋಜಿಸಲಾಗಿದೆ.

ಶಿವರಾಜ್‌ಕುಮಾರ್, ಸುಧಾ ರಾಣಿ:ಚಲನಚಿತ್ರೋತ್ಸವವನ್ನು ಸೆ. 26ರಂದು ಕಲಾಮಂದಿರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ. ಚಿತ್ರ ನಟ ಶಿವರಾಜ್‌ ಕುಮಾರ್‌ ಮುಖ್ಯ ಅತಿಥಿಯಾಗಿ ‍ಪಾಲ್ಗೊಳ್ಳಲಿದ್ದಾರೆ. ಸುಧಾ ರಾಣಿ, ಅಮೃತಾ ಆಯ್ಯಂಗಾರ್, ಕಾವ್ಯಾ ಶೆಟ್ಟಿ, ಮಯೂರಿ ಮೊದಲಾದ ನಟ–ನಟಿಯರನ್ನು ಕೂಡ ಆಹ್ವಾನಿಸಲಾಗುತ್ತಿದೆ.

ಸೆ.27ರಿಂದ ಅ.3ರವರೆಗೆ ಪ್ರದರ್ಶನಗಳು ಇರಲಿವೆ. ಹೋದ ವರ್ಷ ಒಂದು ಕಡೆಯಲ್ಲಿ ಮಾತ್ರ ಉತ್ಸವ ನಡೆದಿತ್ತು. ಈ ಬಾರಿ ಎರಡು ಕಡೆಗಳಲ್ಲಿ ಆಯೋಜಿಸಲಾಗುತ್ತಿದೆ. ಹೆಚ್ಚಿನ ಸಿನಿಮಾಗಳನ್ನು ವೀಕ್ಷಿಸಲು ಅನುವು ಮಾಡಿಕೊಡಲಾಗುತ್ತಿದೆ. 28 ಕನ್ನಡ, 28 ಪನೋರಮಾ, 28 ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪುರಸ್ಕೃತವಾದ ಚಲನಚಿತ್ರಗಳು ಇರಲಿವೆ. ಒಟ್ಟು 84 ಚಲನಚಿತ್ರಗಳು ಹಾಗೂ112 ಪ್ರದರ್ಶನಗಳನ್ನು ಆಯೋಜಿಸಲಾಗುತ್ತಿದೆ.

ಐನಾಕ್ಸ್‌ನಲ್ಲಿ 3 ಮತ್ತು ಡಿಆರ್‌ಸಿಯ ಒಂದು ಪರದೆಯಲ್ಲಿ ಚಲನಚಿತ್ರೋತ್ಸವ ನಡೆಯಲಿದೆ.

ಕಲಿಕೆಯೂ...
ಉತ್ಸವಕ್ಕೆ ಮುನ್ನ, ಅಂದರೆ ಸೆ.22ರಿಂದ 24ರವರೆಗೆ ಚಲನಚಿತ್ರ ನಿರ್ಮಾಣ ಮತ್ತಿತರ ವಿಷಯದ ಬಗ್ಗೆ ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಕಾರ್ಯಾಗಾರ ಆಯೋಜಿಸಲಾಗಿದೆ. ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್ ಮೊದಲಾದವರು ಭಾಗವಹಿಸಲಿದ್ದಾರೆ.

‘ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ. ನೋಂದಣಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ₹ 500 ಪ್ರವೇಶ ಶುಲ್ಕ ಪಾವತಿಸಿ ಕಾರ್ಯಾಗಾರದಲ್ಲಿ ಭಾಗವಹಿಸುವವರು ‘ಐನಾಕ್ಸ್‌’ ಮತ್ತು ‘ಡಿಆರ್‌ಸಿ’ಯಲ್ಲಿ ನಡೆಯುವ ದಸರಾ ಚಲನಚಿತ್ರೋತ್ಸವದಲ್ಲಿ ಉಚಿತ ಪ್ರವೇಶ ಪಡೆದುಕೊಳ್ಳಲಿದ್ದಾರೆ’ ಎಂದು ಚಲನಚಿತ್ರೋತ್ಸವ ಉಪ ಸಮಿತಿಯ ಕಾರ್ಯದರ್ಶಿಯೂ ಆಗಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಕೆ.ಹರೀಶ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಕಿರುಚಿತ್ರಗಳ ಸ್ಪರ್ಧೆಯನ್ನೂ ನಡೆಸಲಾಗುತ್ತಿದ್ದು, 5 ನಿಮಿಷಗಳ ಅವಧಿಯ ಕಿರುಚಿತ್ರಗಳನ್ನು ಆಹ್ವಾನಿಸಲಾಗಿದೆ. ಉತ್ತಮ ಎನಿಸಿದ ಮೂರಕ್ಕೆ ಬಹುಮಾನ ಕೊಡಲಾಗುವುದು. ಮೊದಲ ಮೂರು ಅತ್ಯತ್ತಮ ಎನಿಸಿದವರಕ್ಕೆ ಕ್ರಮವಾಗಿ ₹ 10ಸಾವಿರ, ₹ 8ಸಾವಿರ, ₹5ಸಾವಿರ ನೀಡಲಾಗುವುದು. 2 ಕಿರುಚಿತ್ರಗಳಿಗೆ ಸಮಾಧಾನಕರ ಬಹುಮಾನವಾಗಿ ₹ 2ಸಾವಿರ ಕೊಡಲಾಗುವುದು. ಉತ್ತಮ ಮೂರು ಕಿರುಚಿತ್ರಗಳನ್ನು ಕಾರ್ಯಾಗಾರದ ಉದ್ಘಾಟನೆ ಸಮಾರಂಭದಲ್ಲಿ ಪ್ರದರ್ಶಿಸಲಾಗುತ್ತದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT