ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಬನ್‌ ಹಾತ್‌ನಲ್ಲಿ ‘ಕೈಮಗ್ಗ’ ಕಲರವ

Last Updated 25 ನವೆಂಬರ್ 2019, 19:45 IST
ಅಕ್ಷರ ಗಾತ್ರ

ಮೈಸೂರಿನ ಹೊರವಲಯದಲ್ಲಿರುವ ಜೆಎಸ್‌ಎಸ್‌ ಅರ್ಬನ್‌ ಹಾತ್‌ನಲ್ಲಿ ಇದೀಗ ‘ಕೈಮಗ್ಗ’ ಉತ್ಪನ್ನಗಳ ಕಲರವ ಮೇಳೈಸಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜವಳಿ ಇಲಾಖೆ ಸಹಯೋಗದಲ್ಲಿ ‘ವಿಶೇಷ ಕೈಮಗ್ಗ ಮೇಳ–ಸಂಸ್ಕೃತಿ 2019’ ನಡೆದಿದ್ದು, ಡಿ.8ರವರೆಗೆ ಕೈಮಗ್ಗದ ಉತ್ಪನ್ನಗಳ ಪ್ರದರ್ಶನ, ಮಾರಾಟ ಬಿರುಸಿನಿಂದ ನಡೆದಿದೆ.

ನೇಕಾರರು ತಯಾರಿಸುವ ಕೈಮಗ್ಗ ಉತ್ಪನ್ನಗಳಿಗೆ ಹೆಚ್ಚು ಮಾರುಕಟ್ಟೆ ಒದಗಿಸುವ ದೃಷ್ಟಿಯಿಂದ ಹಾಗೂ ಕೈಮಗ್ಗ ಉತ್ಪನ್ನಗಳು ಭವಿಷ್ಯದಲ್ಲಿ ಕಣ್ಮರೆಯಾಗದಂತೆ ಕಾಪಾಡಿಕೊಳ್ಳಲಿಕ್ಕಾಗಿ ಈ ಮೇಳ ಆಯೋಜನೆಗೊಂಡಿದೆ. ಕೈಮಗ್ಗ ವೃತ್ತಿಯನ್ನೇ ನಂಬಿರುವ ನೇಕಾರ ಕುಟುಂಬಗಳಿಗೆ ಒಂದೇ ಸೂರಿನಡಿ ಮಾರುಕಟ್ಟೆ ಕಲ್ಪಿಸಿ, ವಹಿವಾಟಿಗೆ ಅವಕಾಶ ನೀಡಲಾಗಿದೆ.

ಮೇಳದಲ್ಲಿರುವ ಉತ್ಪನ್ನಗಳು: ರೇಷ್ಮೆ ಸೀರೆ, ಮೊಳಕಾಲ್ಮೂರು ಸೀರೆ, ಇಳಕಲ್ ಸೀರೆ, ಕಸೂತಿ ಸೀರೆ, ತಮಿಳುನಾಡಿನ ಕಾಂಜಿವರಂ ಸೀರೆ, ಬಿಹಾರದ ತಷರ್ ಸೀರೆ, ಕಾಂತ ಸೀರೆ, ಬಲಚುರಿ ಸೀರೆ, ಬುಟಿಕ್ ಸೀರೆ, ಪಶ್ಚಿಮಬಂಗಾಳದ ಬೆಂಗಾಲಿ ಕಾಟನ್ ಸೀರೆ, ಉತ್ತರ ಪ್ರದೇಶದ ಬನಾರಸ್ ಸೀರೆ, ಚಿಕನ್ ಎಂಬ್ರಾಯ್ಡರಿ ಸೀರೆ...

ಮಧ್ಯಪ್ರದೇಶದ ಚಂದೇರಿ, ಮಹೇಶ್ವರಿ ಸೀರೆ, ಒಡಿಶಾದ ಸಂಬಲ್‌ಪುರಿ ಸೀರೆ, ಇಕ್ಕತ್‌, ಬೊಂಕಾಯಿ ಸೀರೆ, ಕಾಶ್ಮೀರದ ಪಶ್ಮಿನಾ ಶಾಲ್, ಆಂಧ್ರಪ್ರದೇಶದ ಗೊದ್‌ವಾಲ್ ರೇಷ್ಮೆ ಸೀರೆ, ಕಲ್ಮಕಾರಿ ಸೀರೆ, ಪೊಚಂಪಲ್ಲಿ ಸೀರೆಗಳು ಹಾಗೂ ಮಧುರೈ ಟೈ ಅಂಡ್ ಡೈ...

ಗುಜರಾತ್‌ನ ಪಟೋಲ ರೇಷ್ಮೆ ಸೀರೆ ಸೇರಿದಂತೆ ವಿವಿಧ ರಾಜ್ಯದ ರೇಷ್ಮೆ ಹಾಗೂ ಕಾಟನ್‌ ಸೀರೆಗಳು, ಡ್ರೆಸ್‌ ಮೆಟೀರಿಯಲ್‌ಗಳು, ಕಸೂತಿ ವಸ್ತ್ರಗಳು, ಟವೆಲ್‌ಗಳು, ಮೇಲು ಹಾಸು ಮತ್ತು ಹೊದಿಕೆಗಳು, ನೆಲಹಾಸು ಮತ್ತು ಇತರೆ ಕೈಮಗ್ಗ ಉತ್ಪನ್ನಗಳಿವೆ. ದೇಶದ 15ಕ್ಕೂ ಹೆಚ್ಚು ರಾಜ್ಯಗಳ ಕೈಮಗ್ಗ ಉತ್ಪನ್ನಗಳು ಜೆಎಸ್‌ಎಸ್‌ನ ಅರ್ಬನ್‌ ಹಾತ್‌ನ ಆವರಣದಲ್ಲಿ ಪ್ರದರ್ಶನ, ಮಾರಾಟಕ್ಕೆ ಲಭ್ಯ ಇವೆ. ಕರ್ನಾಟಕದ 10, ಪಶ್ಚಿಮ ಬಂಗಾಳದ 10 ಮಳಿಗೆಗಳು ಸೇರಿದಂತೆ 50ಕ್ಕೂ ಹೆಚ್ಚು ಮಳಿಗೆಗಳಿವೆ.

ಚರಕದ ಉತ್ಪನ್ನಗಳಿಗೆ ಬೇಡಿಕೆ: ಕೈಮಗ್ಗದ ಯಶೋಗಾಥೆ ಮೂಲಕ ನಾಡಿನಾದ್ಯಂತ ಹೆಸರಾಗಿರುವ ಚರಕದ ಉತ್ಪನ್ನಗಳಿಗೆ ಗ್ರಾಹಕರಿಂದ ವ್ಯಾಪಕ ಬೇಡಿಕೆ ಸೃಷ್ಟಿಯಾಗಿದೆ.

‘ಮೂರು ವರ್ಷಗಳಿಂದ ಕೈಮಗ್ಗ ಮೇಳಕ್ಕೆ ಬರುತ್ತಿದ್ದೇವೆ. ಪ್ರತಿ ಬಾರಿಯೂ ಗ್ರಾಹಕರಿಂದ ಅತ್ಯುತ್ತಮ ಸಂದನೆ ದೊರಕುತ್ತಿದೆ. ನಮ್ಮಲ್ಲಿ 150ಕ್ಕೂ ಹೆಚ್ಚು ತರಹೇವಾರಿ ಉತ್ಪನ್ನಗಳಿವೆ. ಶರ್ಟ್‌, ಕುರ್ತಾ, ಟಾಪ್ಸ್‌, ಫ್ರಾಕ್ಸ್‌, ಚಿಕ್ಕ ಪರ್ಸ್‌, ಅತ್ಯಾಧುನಿಕ ಫೈಲ್‌, ಕೌದಿ ಸೇರಿದಂತೆ ಬಗೆ ಬಗೆಯ ಉತ್ಪನ್ನಗಳಿಗೆ ಸ್ಥಳೀಯರಿಂದಷ್ಟೇ ಅಲ್ಲದೇ ವಿದೇಶಿಗರಿಂದಲೂ ಬೇಡಿಕೆಯಿದೆ. ಖರೀದಿಗಾಗಿ ಹುಡುಕಿಕೊಂಡು ನಮ್ಮ ಮಳಿಗೆಗೆ ಬರುತ್ತಾರೆ’ ಎಂದು ಚರಕ ಉತ್ಪನ್ನಗಳ ವಹಿವಾಟು ನಡೆಸುತ್ತಿದ್ದ ಕಲ್ಪನಾ ತಿಳಿಸಿದರು.

‘ನಮ್ಮಲ್ಲಿ ತಯಾರಾಗುವ ಪ್ರತಿ ಬಟ್ಟೆಯೂ ಅಪ್ಪಟ ಕೈಮಗ್ಗದ್ದು. ಬಣ್ಣವೂ ನೈಸರ್ಗಿಕವಾದದ್ದು. ಮುತ್ತುಗ, ಅಳಲೆಕಾಯಿ, ಅಂಟುವಾಳ, ಅಡಿಕೆ ಚೊಗರು, ದಾಳಿಂಬೆ, ನೀಲಗಿರಿ, ಚೆಂಡು ಹೂವಿನಿಂದ ಬಣ್ಣ ತೆಗೆದು ಬಳಸುತ್ತೇವೆ. ಹೆಗ್ಗೋಡಿನಲ್ಲೇ ಬಟ್ಟೆ ಉತ್ಪಾದನೆಯಾಗಲಿದೆ. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರಿಗೂ ಇಷ್ಟವಾಗುವ ಉಡುಪುಗಳು ನಮ್ಮಲ್ಲಿ ಲಭ್ಯ. ಬಟ್ಟೆಗೆ ಬಳಸುವ ಗುಂಡಿಗಳು ತೆಂಗಿನ ಕರಟದಿಂದ (ಚಿಪ್ಪು) ತಯಾರಾಗುವುದು ನಮ್ಮ ವೈಶಿಷ್ಟ್ಯ’ ಎಂದು ಹೇಳಿಕೊಂಡರು.

‘35 ವೆರೈಟಿ ಸೀರೆಗಳಿವೆ. ಇಳಕಲ್, ಹುಬ್ಬಳ್ಳಿ, ಧಾರವಾಡದ ಕಸೂತಿ ಸೀರೆಗಳಿಗೆ ಗ್ರಾಹಕರಿಂದ ಹೆಚ್ಚಿನ ಬೇಡಿಕೆಯಿದೆ. ₹500ರಿಂದ ₹3000 ಬೆಲೆಯಿದೆ. ಇದೇ ಮೊದಲ ಬಾರಿಗೆ ಕೈಮಗ್ಗ ಮೇಳಕ್ಕೆ ನಮ್ಮ ಸಂಘ ಬಂದಿದೆ’ ಎಂದು ಹುಬ್ಬಳ್ಳಿ ತಾಲ್ಲೂಕಿನ ಹೆಬಸೂರದ ಬನಶಂಕರಿ ನೇಕಾರರ ಸಹಕಾರ ಉತ್ಪಾದಕ ಸಂಘದ ಗೋವಿನಕೊಪ್ಪದ ಪ್ರತಿನಿಧಿ ಉಮೇಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT