ನೋಡುಬಾರ ಅರ್ಜುನ, ತಾರಾ...

7
ಎರಡು ಬಿಳಿ ಹುಲಿ, ನಾಲ್ಕು ಜೀಬ್ರಾಗಳು ಪ್ರವಾಸಿಗರ ವೀಕ್ಷಣೆಗೆ

ನೋಡುಬಾರ ಅರ್ಜುನ, ತಾರಾ...

Published:
Updated:
Deccan Herald

ಮೈಸೂರು: ನಾಡಹಬ್ಬ ದಸರಾ ಕಣ್ತುಂಬಿಕೊಳ್ಳಲು ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಹೊಸ ಅತಿಥಿಗಳನ್ನು ನೋಡುವ ಭಾಗ್ಯವೂ ಲಭಿಸಿದೆ.

ಚಾಮರಾಜೇಂದ್ರ ಮೃಗಾಲಯದ ಕುಟುಂಬಕ್ಕೆ ಎರಡು ಬಿಳಿ ಹುಲಿಗಳು ಹೊಸದಾಗಿ ಸೇರ್ಪಡೆಯಾಗಿವೆ. ಪ್ರಾಣಿಗಳ ವಿನಿಮಯ ಒಪ್ಪಂದದಂತೆ ಚೆನ್ನೈನ ವಂಡಲೂರು ಮೃಗಾಲಯದಿಂದ 6 ವರ್ಷ ವಯಸ್ಸಿನ ಅರ್ಜುನ ಎಂಬ ಗಂಡು, 4 ವರ್ಷದ ತಾರಾ ಎಂಬ ಬಿಳಿ ಹುಲಿಗಳನ್ನು ತರಲಾಗಿದೆ. ಈ ಮೂಲಕ ಮೈಸೂರು ಮೃಗಾಲಯದಲ್ಲಿ ಬಿಳಿ ಹುಲಿಗಳ ಸಂಖ್ಯೆ ಮೂರಕ್ಕೇರಿದೆ.

‘ಬಿಳಿ ಹುಲಿಗಳನ್ನು ಪ್ರತ್ಯೇಕವಾಗಿರಿಸಿ ಅವುಗಳ ಆರೋಗ್ಯದ ಬಗ್ಗೆ ವಿಶೇಷ ನಿಗಾ ವಹಿಸಲಾಗುತ್ತಿದೆ. ಚೆನ್ನೈನಿಂದ ಏಪ್ರಿಲ್‌ನಲ್ಲೇ ಬಿಳಿಹುಲಿಗಳನ್ನು ತರಬೇಕಾಗಿತ್ತು. ಆ ಸಂದರ್ಭದಲ್ಲಿ ಇಲ್ಲಿ ತಾಪಮಾನ ಹೆಚ್ಚಿದ್ದರಿಂದ ಮುಂದೂಡಲಾಗಿತ್ತು. ಈಗ ಇಲ್ಲಿನ ವಾತಾವರಣಕ್ಕೆ ಹೊಂದಿಕೊಂಡಿವೆ. ಅವುಗಳನ್ನು ಸದ್ಯದಲ್ಲೇ ಪ್ರವಾಸಿಗರ ವೀಕ್ಷಣೆಗೆ ಮುಕ್ತಗೊಳಿಸಿ, ರೊಟೇಶನ್‌ ಪದ್ಧತಿಯಲ್ಲಿ ಅವುಗಳನ್ನು ಬಿಡಲಾಗುವುದು’ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್‌ ಕುಲಕರ್ಣಿ ‘ಪ್ರಜಾವಾಣಿಗೆ’ ತಿಳಿಸಿದರು.

ಪ್ರವಾಸಿಗರನ್ನು ಆಕರ್ಷಿಸಲು ಸಿದ್ಧತೆ: ಅಕ್ಟೋಬರ್ ತಿಂಗಲಿನಲ್ಲಿ ಸಾಲು ಸಾಲು ರಜೆಗಳಿದ್ದು, ದಸರಾ ಸೇರಿದಂತೆ ಅರಮನೆ ನಗರಿಗೆ ಬರುವ ಪ್ರವಾಸಿಗರನ್ನು ಮೃಗಾಲಯಕ್ಕೆ ಆಕರ್ಷಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

‘ಈಗ ನಿತ್ಯ 3ರಿಂದ ಐದು ಸಾವಿರ ಪ್ರವಾಸಿಗರು ಭೇಟಿ ನೀಡುತ್ತಿದ್ದು, ದಸರಾ ವೇಳೆಯಲ್ಲಿ ದಿನಕ್ಕೆ 30ರಿಂದ 35 ಸಾವಿರ ಜನ ಭೇಟಿ ನೀಡುವ ನಿರೀಕ್ಷೆಯಿದೆ. ಈ ಕಾರಣದಿಂದ ಭದ್ರತೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸುವಂತೆ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಲಾಗಿದೆ. ಅಲ್ಲದೆ, ಭದ್ರತಾ ಸಿಬ್ಬಂದಿಯನ್ನೂ ನೇಮಿಸಿಕೊಳ್ಳಲಾಗುತ್ತಿದೆ’ ಎಂದು ಅಜಿತ್‌ ಕುಲಕರ್ಣಿ ತಿಳಿಸಿದರು.

ಪ್ರವಾಸಿಗರ ಚಲನವಲನ ಗಮನಿಸುವ ನಿಟ್ಟಿನಲ್ಲಿ ಹೆಚ್ಚುವರಿಯಾಗಿ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಜೊತೆಗೆ ಪ್ರವಾಸಿಗರಿಗೆ ಪ್ರಾಣಿ, ಪಕ್ಷಿಗಳ ಜೀವನಶೈಲಿಯ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಇದರಿಂದ ಜನರು ಜಾಗೃತರಾಗಿ ಅರಣ್ಯ ಸಂರಕ್ಷಣೆಯತ್ತಲೂ ಒಲವು ತೋರಿಸುವಂತೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಪ್ರತಿವರ್ಷದಂತೆ ಇಲ್ಲಿನ ಸಿಬ್ಬಂದಿಗೆ ಸಮವಸ್ತ್ರ ವಿತರಿಸಲಾಗುವುದು. ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದ್ದು, ಪುಷ್ಪಾಲಂಕಾರವನ್ನೂ ಮಾಡಿಸಲಾಗುವುದು. ಅಲ್ಲದೇ, ಮೃಗಾಲಯದ ವೆಬ್‌ಸೈಟ್‌ನಲ್ಲೂ ವಿವಿಧ ಮಾಹಿತಿಗಳನ್ನು ನೀಡುವ ಮೂಲಕ ಪ್ರವಾಸಿಗರನ್ನು ಆಕರ್ಷಿಸಲಾಗುತ್ತಿದೆ ಎಂದು ಅವರು ವಿವರಿಸಿದರು.

ಪ್ರಾಣಿಗಳ ವಿನಿಮಯಕ್ಕೆ ಅನುಕೂಲವಾಗುವಂತೆ ‘ಝೂ ಇನ್ಫರ್ಮೇಷನ್‌ ಮ್ಯಾನೇಜ್‌ಮೆಂಟ್‌ ಸಿಸ್ಟಂ’ ಎಂಬ ‘ಆನ್‌ಲೈನ್‌ ಡೇಟಾ ಬ್ಯಾಂಕ್‌’ ಇದ್ದು, ಮೃಗಾಲಯಗಳಲ್ಲಿರುವ ಪ್ರಾಣಿಗಳು ಮತ್ತು ವಿನಿಮಯದ ಬಗ್ಗೆ ಮಾಹಿತಿ ಲಭಿಸುತ್ತದೆ. ಈ ಡೇಟಾ ಬ್ಯಾಂಕ್‌ ಅನ್ನು ಸೆಂಟ್ರಲ್‌ ಝೂ ಅಥಾರಿಟಿ ಆಫ್‌ ಇಂಡಿಯಾ ನಿರ್ವಹಿಸುತ್ತದೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !