ಶುಕ್ರವಾರ, ನವೆಂಬರ್ 22, 2019
26 °C

ಕೃಷಿ–ಕಲೆಯ ಗೋಲ್ಡನ್ ಸೀಡ್ಸ್ ಕಲಾಪ್ರದರ್ಶನ

Published:
Updated:
Prajavani

ಮೈಸೂರು: ಇಪ್ಪತ್ನಾಲ್ಕು ಕ್ಯಾರೆಟ್ ಬಂಗಾರದ 33 ಭತ್ತದ ಕಾಳುಗಳನ್ನು ಮಣ್ಣಿನ ತಟ್ಟೆಯಲ್ಲಿ ಕಲಾತ್ಮಕವಾಗಿ ಜೋಡಿಸಿಟ್ಟಿರುವ ‘ಬಂಗಾರದ ಬೀಜ’ ಎಂಬ ಕಲಾಕೃತಿಯು ಮೈಸೂರಿನ ಗೋಕುಲಂನಲ್ಲಿ ನೂತನವಾಗಿ ಪ್ರಾರಂಭಗೊಂಡಿರುವ ‘ಅನೋಖಿ ಗಾರ್ಡನ್’ನ ಆರ್ಟ್‌ ಗ್ಯಾಲರಿಯಲ್ಲಿ ಪ್ರದರ್ಶನಗೊಂಡಿದೆ.

ರೈತ ಕುಟುಂಬದಿಂದ ಬಂದಿರುವ ಯುವ ಕಲಾವಿದ ಎನ್.ದಯಾನಂದ್ ಬಾಲ್ಯದಲ್ಲಿ ಭತ್ತದ ಗದ್ದೆಯಲ್ಲಿ ಹೆಚ್ಚು ಕಾಲ ಕಳೆದ ನೆನಪಿನ ಕೃಷಿ ಮತ್ತು ಕಲೆಯು ಮೇಳೈಸಿರುವ ಕಲಾಪ್ರದರ್ಶನ ಸೆ.14ರಂದು ಮಧ್ಯಾಹ್ನ 3ಕ್ಕೆ ಉದ್ಘಾಟನೆ ಗೊಳ್ಳಲಿದೆ. ಸೆ.19 ರವರೆಗೆ ಪ್ರತಿದಿನ ಬೆಳಿಗ್ಗೆ 9ರಿಂದ ಸಂಜೆ 6ರವರೆಗೆ ಪ್ರದರ್ಶನವಿರಲಿದೆ.

ಕೃಷಿ ಚಟುವಟಿಕೆಯಲ್ಲಿ ರೈತರು ರೂಪಿಸುವ ಹಲವಾರು ಅಂಶಗಳನ್ನು ಕಲಾಕೃತಿಗಳನ್ನಾಗಿ ಕಣ್ತುಂಬಿ ಕೊಂಡಿರುವ ಇವರು ಭತ್ತದ ಬೀಜಬಿತ್ತಿ, ವಟ್ಲು ಹಾಕಿ, ಸಸಿ ನೆಟ್ಟು, ಕಟಾವು ಮಾಡಿ, ಕಣದಲ್ಲಿ ರಾಶಿ ಹಾಕಿ, ಮನೆಯ ಕಣಜಕ್ಕೆ ಬರುವವರೆಗೂ ತಾವೂ ಕಂಡು, ಕಾರ್ಯನಿರ್ವಹಿಸಿದ ಅನುಭವವನ್ನು ಇಂದು ತಮ್ಮ ಕಲಾಕೃತಿಗಳಲ್ಲಿ ಅಭಿವ್ಯಕ್ತಿಸಿದ್ದಾರೆ. ಭತ್ತವು ಬಂಗಾರದ ಬಣ್ಣ ಹೊಂದಿದೆ. ಬಿಸಿಲಿನ ಕಿರಣವು ಬಿದ್ದಲ್ಲಿ ಬಂಗಾರದ ಹೊಳಪು ಇನ್ನೂ ಹೆಚ್ಚಾಗುತ್ತದೆ. ಇದನ್ನು ಗ್ರಹಿಸಿರುವ ದಯಾನಂದ್ ಭತ್ತದಂತಹ ಸೂಕ್ಷ್ಮವಾದ ಸಣ್ಣ ಕಾಳಿನ ಬಗ್ಗೆ ಹೆಚ್ಚು ಅಧ್ಯಯನ ಮಾಡಿ ಇಂದು ಅಪಾರವಾದ ಕಲಾಕೃತಿಗಳನ್ನು ಚಿತ್ರಿಸಿದ್ದಾರೆ.

ಹಳ್ಳಿ ಮತ್ತು ಪಟ್ಟಣದ ವಾತಾವರಣವಿರುವ ಕುಂಬಾರಕೊಪ್ಪಲಿನಲ್ಲಿ ಹುಟ್ಟಿದ್ದೇ, ಕೃಷಿ ಮತ್ತು ಕಲಾಕ್ಷೇತ್ರವನ್ನು ಅರಿಯಲು ಮಗನಿಗೆ ನೆರವಾಯಿತು ಎನ್ನುತ್ತಾರೆ ತಂದೆ ನಾಗರಾಜು ಮತ್ತು ತಾಯಿ ಜಯಲಕ್ಷ್ಮಿ. ಮೈಸೂರಿನ ಶ್ರೀ ಕಲಾನಿಕೇತನ ಸ್ಕೂಲ್ ಆಫ್ ಆರ್ಟ್‌ನಲ್ಲಿ ಪದವಿ ಮತ್ತು ಬೆಂಗಳೂರಿನ ಚಿತ್ರಕಲಾ ಪರಿಷತ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದು ಯುವ ಕಲಾವಿದರಾಗಿ ಸಕ್ರಿಯರಾಗಿದ್ದಾರೆ.

ಜರ್ಮನಿ, ಬಾಂಗ್ಲಾದೇಶ, ಇಂಗ್ಲೆಂಡ್‌ನ ಲಂಡನ್‌, ದೇಶದ ದೆಹಲಿ, ಕೊಚ್ಚಿ, ಹೈದರಾಬಾದ್ ಮುಂತಾದ ಕಡೆ ಕಲಾ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ‘ಫಸ್ಟ್ ಹಾರ್ವೆಸ್ಟ್’ ಕಲಾಪ್ರದರ್ಶನವು ಹೆಚ್ಚು ಗೌರವ ತಂದಿದೆ. ಸಮಕಾಲೀನ ಚಿತ್ರ, ಶಿಲ್ಪ ಮತ್ತು ಪ್ರತಿಷ್ಠಾನ ಕಲೆಯ ಬಗ್ಗೆ ನಿರಂತರವಾಗಿ ಅಧ್ಯಯನ ಮಾಡುತ್ತಿರುವ ದಯಾನಂದ್, ಕೃಷಿ ಸಾಮಗ್ರಿಗಳಾದ ಮಣ್ಣಿನ ಮಡಿಕೆ, ಕುಡುಗೋಲು, ಒನಕೆ ಹಾಗೂ ಸೀರೆಗಳನ್ನು ಈ ಬಾರಿ ವಿಶಿಷ್ಟವಾಗಿ ಬಳಸಿಕೊಂಡಿದ್ದಾರೆ.

ಭಾರತದಲ್ಲಿ ‘ಇನ್‌ಸ್ಟಾಲೇಶನ್ ಆರ್ಟ್’ (ಪ್ರತಿಷ್ಠಾನಕಲೆ) ಆಧುನಿಕ ಕಲಾ ಸನ್ನಿವೇಶದಲ್ಲಿ ಪ್ರಮುಖ ಮೈಲಿಗಲ್ಲನ್ನು ಸೃಷ್ಟಿಸಿದೆ. ಈಗ ಮೈಸೂರಿನಲ್ಲಿ ದಯಾನಂದ್‌ ಅವರು ಪ್ರತಿಷ್ಠಾಪಿಸಿರುವ ಗೋಲ್ಡನ್ ಸೀಡ್, ಭತ್ತದ ಬೊಗಸೆ, ಭತ್ತದ ಕಣಜ, ಅತಂತ್ರರು, ಎಂಟಿವಿನಿಂಗ್, ಅನಾನಿಮಸ್ ಸ್ಕೈಕ್ ಎಂಬ ಕಲಾಕೃತಿ ಗಳು ನೋಡುಗರಲ್ಲಿ ಹೊಸ ಆಯಾಮ ಸೃಷ್ಟಿಸಿವೆ.

ಮೈಸೂರಿನ ಗೋಕುಲಂ ವಿದೇಶಿಯರು ಇರುವ ಸ್ಥಳ. ಯೋಗ ಕಲಿಯಲು ಬಂದಿರುತ್ತಾರೆ. ಅನೋಖಿ ಗಾರ್ಡನ್‌ಗೆ ಹೆಚ್ಚಾಗಿ ಬರುತ್ತಾರೆ. ಕೆನಡಾದಿಂದ ಬಂದಿರುವ ವೆರ್ನೆರ್ ಅರ್ನಾಲ್ಡ್ ಇಲ್ಲಿ ಕೆಫೆಯೊಂದನ್ನು ತೆರೆದಿದ್ದಾರೆ. ಭಾರತೀಯ ಕಲೆಯ ಬಗ್ಗೆ ಹೆಚ್ಚು ಆಸಕ್ತಿ ಇರುವ ಇವರಿಗೆ ನೂರಾರು ವಿದೇಶಿಗರು ಬರುವ ಈ ಗ್ಯಾಲರಿಯಲ್ಲಿ ಕಲಾಕೃತಿಗಳನ್ನು ನೋಡಲು ಮತ್ತು ಮಾರಾಟಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಮೈಸೂರಿನ ಕಲಾಪ್ರಿಯರು ಇಲ್ಲಿಗೆ ಬಂದರೆ ಅವರೊಂದಿಗೆ ಬೆರೆಯುವ ತವಕವೂ ಇವರಿಗಿದೆ.

ಪ್ರತಿಕ್ರಿಯಿಸಿ (+)