ಹೋಟೆಲ್ ಒಳಗೆ ಕಲಾಗ್ಯಾಲರಿ...

7

ಹೋಟೆಲ್ ಒಳಗೆ ಕಲಾಗ್ಯಾಲರಿ...

Published:
Updated:
Deccan Herald

ಸರಿಗೆ ತಕ್ಕಂತೆ ಅದು ಬೆಟ್ಟದ ತಪ್ಪಲಿನ ಹೋಟೆಲ್. ಹಚ್ಚ ಹಸಿರಿನಿಂದ ಕೂಡಿರುವ ಪರಿಸರದಲ್ಲಿ ನೆಲೆ ಕಂಡಿರುವ ಆ ಹೋಟೆಲ್ ಒಳಗೆ ಕಾಲಿಟ್ಟ ತಕ್ಷಣ ಕಲಾ ಗ್ಯಾಲರಿಯೊಳಗೆ ಪ್ರವೇಶಿಸಿದ್ದೇವೆಯೋ ಅಥವಾ ಹೋಟೆಲ್‌ಗೆ ಬಂದಿದ್ದೇವೆಯೋ ಎಂಬ ಸಂಶಯ ಹಾಗೂ ಅಚ್ಚರಿ ಅರೆಕ್ಷಣ ಕಾಡುತ್ತದೆ.

ದರ್ಬಾರ್ ನಡೆಸುತ್ತಿರುವ ಕೃಷ್ಣ, ರುಕ್ಮಿಣಿ ಕಲ್ಯಾಣೋತ್ಸವ, ಮಹಾಭಾರತದ ಯುದ್ಧ ಸನ್ನಿವೇಶ, ಬೆಣ್ಣೆ ಕದ್ದ ಕೃಷ್ಣ, ಅಂಬೆಗಾಲಿನ ಕೃಷ್ಣ, ಸಂಚಾರ ನಡೆಸುವ ಶಿವ, ಶ್ರೀನಿವಾಸ, ಹನುಮಂತ... ಹೀಗೆ ದೇವಾನು ದೇವತೆಗಳ ಸಾಂಪ್ರದಾಯಿಕ ಶೈಲಿಯ ಕಲಾಕೃತಿಗಳು ಮೇಳೈಸಿದ್ದಾರೆ.

ಚಾಮುಂಡಿ ಬೆಟ್ಟದ ರಸ್ತೆಯಲ್ಲಿರುವ ‘ಹಿಲ್‌ ಸೈಡ್‌ ಹೋಟೆಲ್‌’ನಲ್ಲಿ ಕಾಣುವ ಚಿತ್ರಣವಿದು. ಹೋಟೆಲ್ ಪ್ರವೇಶಿಸುತ್ತಿದ್ದಂತೆ ಎಡ-ಬಲ ಹಾಗೂ ನೇರಕ್ಕೆ ಕಲಾಕೃತಿಗಳ ದರ್ಶನ ಭಾಗ್ಯ ಸಿಗುತ್ತದೆ. ಹಾಗೆಂದು, ಹೋಟೆಲ್‌ನ ಅಂದವನ್ನು ಹೆಚ್ಚಿಸುವ ಉದ್ದೇಶದಿಂದ ಈ ಕಲಾಕೃತಿಗಳನ್ನು ಗೋಡೆಗಳಿಗೆ ಪೇರಿಸಿದ್ದಾರೆ ಎಂದು ಭಾವಿಸುವಂತಿಲ್ಲ. ಪ್ರದರ್ಶನ ಹಾಗೂ ಮಾರಾಟಕ್ಕೆಂದೇ ಇಟ್ಟಿರುವ ಕಲಾಕೃತಿಗಳಿವು. ಸುಮಾರು 50 ಕಲಾಕೃತಿಗಳಿದ್ದು, ₹25 ಸಾವಿರದಿಂದ ಹಿಡೆದು ₹5 ಲಕ್ಷ ಮೌಲ್ಯದ ಕಲಾಕೃತಿಗಳು ಇಲ್ಲಿವೆ.

ಎರಡು ತಿಂಗಳ ಹಿಂದೆ ಆರಂಭ: ಹೋಟೆಲ್ ಆರಂಭವಾಗಿ ಮೂರು ವರ್ಷಗಳು ಕಳೆದಿವೆ. ಆದರೆ, ಕಲಾ ಗ್ಯಾಲರಿ ಶುರುವಾಗಿ ಎರಡು ತಿಂಗಳಾಗಿದೆ. ಈ ಹೋಟೆಲ್‌ನ ಮಾಲೀಕ ಎ.ಎಸ್.ಸೋಮೇಶ್. ಕಲಾಸಕ್ತರಾದ ಅವರು ಈ ಹೋಟೆಲ್ ನಿರ್ಮಿಸುವ ಸಂದರ್ಭದಲ್ಲೇ ಕರಕುಶಲ ವಸ್ತುಗಳನ್ನು ಪ್ರದರ್ಶನಕ್ಕೆ ಇಡುವ ಬಗ್ಗೆ ಆಲೋಚಿಸಿದ್ದರಂತೆ. ಹೀಗಾಗಿ, ಅದಕ್ಕೆ ಬೇಕಾದಂತೆ ಹೋಟೆಲ್‌ಅನ್ನು ವಿನ್ಯಾಸಗೊಳಿಸಿದ್ದರು. ಈಗ ಇಲ್ಲಿ ಸಾಂಪ್ರದಾಯಿಕ ಚಿತ್ರಕಲಾಕೃತಿಗಳನ್ನು ಪ್ರದರ್ಶಿಸಲಾಗಿದೆ.

ನಾಲ್ವರು ಕಲಾವಿದರು: ಮೈಸೂರಿನ ರಾಮಕೃಷ್ಣ, ದಿನೇಶ್, ತಿ.ನರಸೀಪುರದ ಶ್ರೀಹರಿ, ಕೇರಳದ ಅನಿಲ್ ಕುಮಾರ್ ರಚನೆಯ ಚಿತ್ರಪಟಗಳು ಇಲ್ಲಿವೆ. ಅನಿಲ್ ಕುಮಾರ್ ಅವರು ರಾಜಾ ರವಿವರ್ಮ ಅವರ ಕಲಾಕೃತಿಗಳನ್ನು ಮರುಸೃಷ್ಟಿಸಿದ್ದಾರೆ. ಅವು ತೈಲವರ್ಣ ಕಲಾಕೃತಿಗಳು. ವಿಶೇಷತೆ ಇರುವುದು ಸಾಂಪ್ರದಾಯಿಕ ಚಿತ್ರಕಲೆಯಲ್ಲಿ. ಈ ಚಿತ್ರಪಟಗಳಿಗೆ ನೈಸರ್ಗಿಕ ಬಣ್ಣಗಳನ್ನು ಬಳಸಲಾಗಿದ್ದು, ದೀರ್ಘಾವಧಿವರೆಗೂ ಬಣ್ಣ ಮಾಡುವುದಿಲ್ಲ. ಅಲ್ಲದೆ, ಇದಕ್ಕೆ ಚಿನ್ನವನ್ನು ಬಳಸಲಾಗಿದೆ! ಚಿತ್ರಗಳಲ್ಲಿ ಬರುವ ದೇವಾನು ದೇವತೆ ಧರಿಸಿರುವ ಆಭರಣ, ಅರಮನೆ ಮೊದಲಾದವುಗಳಿಗೆ ಚಿನ್ನಲೇಪನ ಮಾಡಲಾಗಿದೆ. ಹೀಗಾಗಿ, ಕಲಾಕೃತಿಗಳಿಗೆ ವಿಶೇಷ ಮೆರುಗು ಬಂದಿದೆ. ಈವರೆಗೆ ನಾಲ್ಕು ಕಲಾಕೃತಿಗಳು ಮಾರಾಟವಾಗಿವೆ.

ಅಪಾರ್ಟ್‌ಮೆಂಟ್‌ಗಳ ಹೋಟೆಲ್

ಎ.ಎಸ್.ಸೋಮೇಶ್ ಅವರ ಪುತ್ರ ಎ.ಎಸ್.ದರ್ಶನ್ ಈ ಹೋಟೆಲ್‌ನ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಅಪಾರ್ಟ್‌ಮೆಂಟ್‌ಗಳನ್ನು ಹೊಂದಿರುವುದು ಈ ಹೋಟೆಲ್‌ನ ವಿಶೇಷತೆ. ಒಟ್ಟು 10 ಅಪಾರ್ಟ್‌ಮೆಂಟ್‌ಗಳಿದ್ದು, 2 ಬೆಡ್‌ ರೂಂ ಹೊಂದಿರುವ ನಾಲ್ಕು ಹಾಗೂ 3 ಬೆಡ್‌ ರೂಂ ಹೊಂದಿರುವ 6 ಅಪಾರ್ಟ್‌ಮೆಂಟ್‌ಗಳಿವೆ. 2 ಬೆಡ್‌ ರೂಂಗೆ ಪ್ರತಿದಿನ ₹4 ಸಾವಿರ ರೂಪಾಯಿ ಬಾಡಿಗೆ ಇದ್ದರೆ, 3 ಬೆಡ್‌ ರೂಂಗೆ ₹6 ಸಾವಿರ ರೂಪಾಯಿ ಬಾಡಿಗೆ ಇದೆ.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !