ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರ ಮೇಲೆ ಹಲ್ಲೆ– ರಾಜಕೀಯ ಬೇಡ: ಎಸ್‌ಡಿಪಿಐ

ಬಿಜೆಪಿ ವಿರುದ್ಧ ಪರೋಕ್ಷವಾಗಿ ಅಬ್ದುಲ್‌ ಮಜೀದ್‌ ವಾಗ್ದಾಳಿ
Last Updated 20 ನವೆಂಬರ್ 2019, 17:30 IST
ಅಕ್ಷರ ಗಾತ್ರ

ಮೈಸೂರು: ‘ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್‌ ಸೇಠ್ ಮೇಲಿನ ಹಲ್ಲೆಯನ್ನು ಕೆಲ ಪಕ್ಷಗಳು ರಾಜಕೀಯಗೊಳಿಸುತ್ತಿವೆ. ಅಧಿಕಾರದಲ್ಲಿದ್ದವರು ಹೀಗೆ ಮಾಡಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಹಳೆಯ ಚಾಳಿಯನ್ನು ಇನ್ನಾದರೂ ಬಿಡಬೇಕು’ ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ಧ ಸೋಷಿಯಲ್‌ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್‌ ಮಜೀದ್‌ ವಾಗ್ದಾಳಿ ನಡೆಸಿದರು.

‘ಸಾರ್ವಜನಿಕ ಸ್ಥಳದಲ್ಲಿ, ನೂರಾರು ಜನರ ಸಮ್ಮುಖದಲ್ಲಿಯೇ ಶಾಸಕರ ಮೇಲೆ ಹಲ್ಲೆ ನಡೆದದ್ದು ಆಘಾತಕಾರಿ ಸಂಗತಿ ಹಾಗೂ ಕ್ಷಮಾರ್ಹವಲ್ಲ. ಘಟನೆಯನ್ನು ಎಸ್‌ಡಿಪಿಐ ಖಂಡಿಸುತ್ತದೆ. ತಪ್ಪು ಯಾರೇ ಮಾಡಿರಲಿ ಅಂಥವರಿಗೆ ಶಿಕ್ಷೆಯಾಗಬೇಕು ಎಂಬುದು ನಮ್ಮ ಪಕ್ಷದ ನಿಲುವು. ಬಂಧನವಾದ ಆರೋಪಿ ಎಸ್‌ಡಿಪಿಐ ಕಾರ್ಯಕರ್ತನಲ್ಲ. ಚುನಾವಣೆ ವೇಳೆ ಪಕ್ಷದ ಪರ ಪ್ರಚಾರ ಮಾಡಿದ್ದ ಅಷ್ಟೇ. ಅಲ್ಲದೇ ಆತ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷದಲ್ಲೂ ಗುರುತಿಸಿಕೊಂಡಿದ್ದ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಯಾವುದೇ ವ್ಯಕ್ತಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಅಥವಾ ಇದ್ದ ಎಂಬ ಕಾರಣಕ್ಕೆ ಆತನ ಕೆಟ್ಟ ಕೆಲಸಕ್ಕೆ ಇಡೀ ಪಕ್ಷ ಹೊಣೆಯಲ್ಲ. ಎಸ್‌ಡಿಪಿಐ, ರಾಜ್ಯ ಸೇರಿದಂತೆ ದೇಶದ 15 ರಾಜ್ಯಗಳಲ್ಲಿ ಸಕ್ರಿಯವಾಗಿದೆ. ಕೆಲವರಿಂದ ಪಕ್ಷಕ್ಕೆ ಕಳಂಕ ತರಲು ಹುನ್ನಾರ ನಡೆದಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಈ ಘಟನೆಯನ್ನು ರಾಜಕೀಯಗೊಳಿಸುವ ದುರುದ್ದೇಶದಿಂದ ಕೆಲ ನಾಯಕರ ಹೇಳಿಕೆಗಳು ಬೇಜವಾಬ್ದಾರಿತನಕ್ಕೆ ಹಿಡಿದ ಕೈಕನ್ನಡಿಯಾಗಿವೆ. ಇದನ್ನೂ ಎಸ್‍ಡಿಪಿಐ ಖಂಡಿಸುತ್ತದೆ. ಪ್ರತಿಯೊಂದು ಘಟನೆಗಳನ್ನು ತಮ್ಮ ಮೂಗಿನ ನೇರಕ್ಕೆ ಬಳಸಿಕೊಂಡು ಅದನ್ನು ರಾಜಕೀಯಗೊಳಿಸಿ ಸಮಾಜಕ್ಕೆ ತಪ್ಪು ಸಂದೇಶ ನೀಡುವ ಹುನ್ನಾರವನ್ನು ಕೈಬಿಟ್ಟು, ಪ್ರಬುದ್ಧರಾಗಿ ಮತ್ತು ಜವಾಬ್ದಾರಿಯನ್ನು ಅರಿತು ಹೇಳಿಕೆ ನೀಡಬೇಕು’ ಎಂದು ನುಡಿದರು.

ಈ ಪ್ರಕರಣದಲ್ಲಿ ಎ‌ಸ್‌ಡಿಪಿಐ ಮೇಲೆ ಗುಮಾನಿಯಿದೆ ಎಂದು ಗೃಹ ಸಚಿವರು ಹೇಳಿಕೆ ನೀಡಿದ್ದಾರಲ್ಲ ಎಂಬ ಪ್ರಶ್ನೆಗೆ, ಅದಕ್ಕೆ ರಾಜಕೀಯ ಹಿನ್ನೆಲೆ ಹಾಗೂ ಸೈದ್ಧಾಂತಿಕ ಭಿನ್ನತೆ ಕಾರಣ‘ ಎಂದರು.

‘ಪ್ರಕರಣದಲ್ಲಿ ಕೈವಾಡ ಇದೇ ಎಂದು ಆರೋಪಿಸಿ ನಮ್ಮ ಪಕ್ಷವನ್ನು ನಿಷೇಧಿಸುವ ಪ್ರಶ್ನೆ ಬಂದರೆ, ಈ ದೇಶದಲ್ಲಿ ಮೊದಲು ಬಿಜೆಪಿಯನ್ನು ನಿಷೇಧ ಮಾಡಬೇಕು. 1925ರಿಂದ ಇಲ್ಲಿಯವರೆಗೆ ದೇಶದಲ್ಲಿ ಬಿಜೆಪಿಯಿಂದ ಆದ ಹಿಂಸಾಚಾರ, ಶ್ರೀರಾಮನ ಹೆಸರಲ್ಲಿ ಮಾಡಿದ ಗಲಭೆಗಳೇ ಸಾಕು‘ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಹುಣಸೂರು ಕ್ಷೇತ್ರದ ಎಸ್‌ಡಿಪಿಐ ಅಭ್ಯರ್ಥಿ ದೇವನೂರು ಪುಟ್ಟನಂಜಯ್ಯ, ರಾಜ್ಯ ಕಾರ್ಯದರ್ಶಿ ಕುಮಾರಸ್ವಾಮಿ, ಅಬ್ರಾರ್‌ ಅಹಮದ್ ಇದ್ದರು.

ನಿಷ್ಪಕ್ಷಪಾತ ತನಿಖೆ ನಡೆಸಲು ಒತ್ತಾಯ
‘ಆರೋಪಿ ಶೀಘ್ರವೇ ಕುಖ್ಯಾತಿಯಾಗಲು ಹವಣಿಸುತ್ತಿದ್ದ ಬಗ್ಗೆ ಗೆಳೆಯರಲ್ಲಿ ಹೇಳಿದ್ದನ್ನು ನೋಡಿದರೆ ಆತ ಸೈಕೋ ಇರಬಹುದು ಅಥವಾ ವೈಯಕ್ತಿಕ ಕಾರಣವೂ ಇರಬಹುದು. ಈ ಬಗ್ಗೆ ಸತ್ಯಾಸತ್ಯತೆ ತಿಳಿಯಲು ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಅದಕ್ಕೆ ಪಕ್ಷ ಸಂಪೂರ್ಣ ಸಹಕಾರ ನೀಡುತ್ತದೆ’ ಎಂದು ಮಜೀದ್ ಹೇಳಿದರು

ಪೊಲೀಸರು ಖಾಕಿ ಧರ್ಮ ಪಾಲಿಸಬೇಕು. ಜಾತಿ, ಮತ, ಭೇದಲವನ್ನು ಬಿಟ್ಟು ಸಂವಿಧಾನ ಬದ್ಧವಾಗಿ ತನಿಖೆ ನಡೆಸಬೇಕು. ಮಂಗಳೂರು ಕೀರ್ತಿರಾಜ್‌ ಕೊಲೆ ಪ್ರಕರಣದಲ್ಲಿ ಎಸ್‌ಡಿಪಿಐ ಕೈವಾಡವಿದೆ ಎಂದು ಬಿಜೆಪಿ ಆರೋಪಿಸಿತ್ತು. ಆದರೆ, ತನಿಖೆಯ ನಂತರ ಆತನ ಸಹೋದರಿಯೇ ಕೊಲೆ ಮಾಡಿಸಿದ್ದು ಪೊಲೀಸ್ ತನಿಖೆಯಿಂದ ಗೊತ್ತಾಯಿತಲ್ಲವೇ? ಎಂದರು.

‘ತನಿಖೆಯ ಹಂತದಲ್ಲಿದ್ದಾಗ ದಾರಿ ತಪ್ಪಿಸುವ ಕೆಲಸವನ್ನು ಮಾಧ್ಯಮಗಳು ಮಾಡಬಾರದು. ಅದು ಪತ್ರಿಕಾಧರ್ಮವೂ ಅಲ್ಲ. ಅಲ್ಲದೇ ಪೊಲೀಸ್ ಕಮಿಷನರ್ ಅವರು ಸರಿಯಾಗಿ ತನಿಖೆ ನಡೆಸುತ್ತಾರೆಂಬ ಭರವಸೆ ಇದೆ’ ಎಂದು ಹೇಳಿದರು.

ಚುನಾವಣಾ ರಾಜಕೀಯ ನಿವೃತ್ತಿ ಪಡೆಯುವೆ
‘ಎರಡು ಬಾರಿ ತನ್ವೀರ್‌ ಸೇಠ್ ವಿರುದ್ಧ ಸ್ಪರ್ಧಿಸಿ ಸೋತಿದ್ದೇನೆ. ಅದು ಚುನಾವಣಾ ಭಿನ್ನತೇ ಅಷ್ಟೇ. ಅವರೊಂದಿಗೆ ಸದಾ ಸ್ನೇಹ, ಸೌಹಾರ್ದದಿಂದ ಇದ್ದೇನೆ. ಅವರನ್ನು ದ್ವೇಷಿಸಿಲ್ಲ. ಅಂಥ ಅಸಹ್ಯ ಹುಟ್ಟಿಸುವ ಮತ್ತು ದಗಲ್‌ಬಾಜಿ ರಾಜಕೀಯ ನನಗೆ ಬೇಕಿಲ್ಲ. ಬೇಕಿದ್ದರೇ ಚುನಾವಣಾ ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ’ ಎಂದು ಅಬ್ದುಲ್‌ ಮಜೀದ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT