ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಹಕರಿಲ್ಲದೆ ಶೋ ರೂಮ್‌ಗಳು ಭಣಭಣ, ಸಂಕಷ್ಟದಲ್ಲಿ ವಾಹನ ಉದ್ಯಮ

ಬಿಎಸ್‌ 4 ವಾಹನ ಮಾರಾಟಕ್ಕೆ ಕಂಟಕವಾದ ಕೊರೊನಾ
Last Updated 20 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಮೈಸೂರು: ಸುಪ್ರೀಂಕೋರ್ಟ್‌ನ ಸೂಚನೆಯಂತೆ ಏ.1ರಿಂದ ಬಿಎಸ್‌ 4 ಪರಿಮಾಣದ ಹೊಸ ವಾಹನಗಳ ನೋಂದಣಿಗೆ ಅವಕಾಶವಿಲ್ಲ. ಮಾರ್ಚ್‌ 31ರೊಳಗೆ ಆರ್‌ಟಿಒನಲ್ಲಿ ನೋಂದಾಯಿಸಲೇಬೇಕು. ನಂತರ ನೋಂದಣಿ ನಡೆಯಲ್ಲ. ಪ್ರಸ್ತುತ ಇದು ವಾಹನ ಉದ್ಯಮಕ್ಕೆ ಕಂಟಕವಾಗಿ ಕಾಡುತ್ತಿದೆ.

ಬಹುತೇಕ ಶೋ ರೂಂಗಳಲ್ಲಿ ಬಿಎಸ್‌ 4 ಪರಿಮಾಣದ ಹೊಸ ವಾಹನಗಳಿವೆ. ಮಾರ್ಚ್‌ ಅಂತ್ಯದೊಳಗೆ ಇವುಗಳನ್ನು ಗ್ರಾಹಕರಿಗೆ ಮಾರಾಟ ಮಾಡಿ, ಆರ್‌ಟಿಒನಲ್ಲಿ ನೋಂದಾಯಿಸಬೇಕಾದ ಒತ್ತಡದಲ್ಲಿ ಶೋ ರೂಂ ಮಾಲೀಕರಿದ್ದಾರೆ. ಆದರೆ ಕಳೆದೊಂದು ವಾರದಿಂದ ಕೊರೊನಾ ವೈರಸ್ ಸೋಂಕಿನ ಭೀತಿ ಎಲ್ಲೆಡೆ ಹೆಚ್ಚಾಗಿದ್ದು, ವಹಿವಾಟು ಪಾತಾಳಕ್ಕೆ ಕುಸಿದಿದೆ.

‘ಶೋ ರೂಂನತ್ತ ಗ್ರಾಹಕರು ಕಾಲಿಡುತ್ತಿಲ್ಲ. 12 ದಿನದೊಳಗೆ ನಮ್ಮಲ್ಲಿರುವ ಬಿಎಸ್‌ 4 ಮಾದರಿಯ ವಾಹನಗಳನ್ನು ಮಾರಾಟ ಮಾಡಿ, ಆರ್‌ಟಿಒನಲ್ಲಿ ನೋಂದಾಯಿಸಬೇಕಿದೆ. ಯಾವೊಂದು ಬೈಕ್ ಮಾರಾಟವಾಗದಿದ್ದರೆ, ನಮಗೆ ನಷ್ಟ ಕಟ್ಟಿಟ್ಟ ಬುತ್ತಿಯಾಗಲಿದೆ’ ಎಂದು ಶಾರಾದಾ ಟಿವಿಎಸ್‌ ಶೋ ರೂಂನ ರವೀಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮ್ಮ ಶೋ ರೂಂನಲ್ಲೇ ಟಿವಿಎಸ್‌ನ ರೆಡಾನ್ ಮಾದರಿಯ 87 ಬೈಕ್‌ಗಳಿವೆ. ಒಂದರ ದರ ₹ 72,800 ಇದೆ. ಹಬ್ಬದ ಕೊಡುಗೆ ಎಂದು ₹ 10,000 ರಿಯಾಯಿತಿ ಘೋಷಿಸಿದರೂ ಯಾರೊಬ್ಬರೂ ಖರೀದಿಗೆ ಬರುತ್ತಿಲ್ಲ. ಸಾಕಷ್ಟು ಪ್ರಚಾರ ಕೊಟ್ಟರೂ ಸ್ಪಂದನೆಯಿಲ್ಲದಾಗಿದೆ. ವಿಧಿಯಿಲ್ಲದೆ ಹಳೆಯ ಗ್ರಾಹಕರನ್ನು ಮನವೊಲಿಸಿ, ಶೋ ರೂಂಗೆ ಕರೆಸಿಕೊಂಡು ಮಾರಾಟ ಮಾಡುವ ಯತ್ನ ನಡೆಸಿದ್ದೇವೆ. ನಿರೀಕ್ಷಿತ ಫಲ ಸಿಗದಾಗಿದೆ’ ಎಂದು ಅವರು ಹೇಳಿದರು.

‘ನಮ್ಮ ಕಂಪನಿಯೊಂದೇ ಅಲ್ಲ. ಎಲ್ಲ ಬೈಕ್‌ ಕಂಪನಿಗಳು ಡಿಸ್ಕೌಂಟ್ ಘೋಷಿಸಿವೆ. ಆದರೆ ಖರೀದಿ ಮಾತ್ರ ಅಷ್ಟಕ್ಕಷ್ಟೇ ಇದೆ. ಇದು ಉದ್ಯಮಕ್ಕೆ ಭಾರಿ ಹೊಡೆತ ನೀಡಿದೆ. ಕೊರೊನಾ ವೈರಸ್ ಸೋಂಕಿನ ಭೀತಿಗೆ ಜನ ಇತ್ತ ಸುಳಿಯದಾಗಿದ್ದಾರೆ’ ಎಂದರು.

‘ಸರ್ಕಾರಿ ಕಚೇರಿಗಳು ಬಂದ್ ಆಗಿವೆ. ಯಾವೊಂದು ಕೆಲಸವೂ ನಡೆಯಲ್ಲ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಇದರಿಂದ ಗ್ರಾಮೀಣ ಪ್ರದೇಶದ ಗ್ರಾಹಕರು ಖರೀದಿಗೆ ಮುಂದಾಗುತ್ತಿಲ್ಲ. ನಾವು ಎಷ್ಟೇ ಮನವೊಲಿಸಿದರೂ ನಂಬುತ್ತಿಲ್ಲ. ನೋಂದಣಿಯಾಗದಿದ್ದರೆ ವಾಹನ ಖರೀದಿಸಿ ಪ್ರಯೋಜನ ಏನು ? ಎಲ್ಲ ಮುಗಿದ ಮೇಲೆ ಬಂದು ಖರೀದಿ ಮಾಡುತ್ತೇವೆ ಎನ್ನುತ್ತಿದ್ದಾರೆ. ಇದು ನಮ್ಮ ಉದ್ಯಮಕ್ಕೆ ಚೇತರಿಸಿಕೊಳ್ಳಲಾಗದ ಹೊಡೆತ ನೀಡುತ್ತಿದೆ’ ಎಂದು ರವೀಶ್‌ ತಿಳಿಸಿದರು.

ಕೊರೊನಾ ಕರಿನೆರಳಿಗಿಂತ ಆರ್ಥಿಕ ಹಿಂಜರಿತದ ಹೊಡೆತ

‘ನಾಲ್ಕು ಚಕ್ರದ ವಾಹನ ಉದ್ಯಮಕ್ಕೆ ಕೊರೊನಾ ಕರಿನೆರಳಿಗಿಂತ ಆರ್ಥಿಕ ಹಿಂಜರಿತದ ಹೊಡೆತವೇ ಹೆಚ್ಚಿದೆ’ ಎನ್ನುತ್ತಾರೆ ಮಾಂಡೋವಿ ಮೋಟರ್ಸ್‌ನ ಗಣಪತಿ.

‘2018ರ ನವೆಂಬರ್‌ನಲ್ಲಿ ಆರಂಭಗೊಂಡ ಆರ್ಥಿಕ ಹಿಂಜರಿತದ ಹೊಡೆತ ಇಂದಿಗೂ ತಪ್ಪದಾಗಿದೆ. ಬಹುತೇಕ ಕಾರುಗಳು ಈಗಾಗಲೇ ಭಾರತ್‌ ಸ್ಟೇಜ್ 6 ಪರಿಮಾಣದ ವಾಯುಮಾಲಿನ್ಯ ನಿಯಂತ್ರಣ ನಿಯಮಗಳಿಗೆ ಬದ್ಧವಾಗಿಯೇ ತಯಾರಾಗಿವೆ. ಇವುಗಳ ಮಾರಾಟವೇ ನಡೆದಿದೆ. ಕೊರೊನಾ ಭೀತಿಯೂ ಕಾಡುತ್ತಿಲ್ಲ. ಬಹುತೇಕ ಶೋ ರೂಂಗಳಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದೇವೆ’ ಎಂದು ಅವರು ಹೇಳಿದರು.

‘2019ರ ಮಾರ್ಚ್‌ ವಹಿವಾಟಿಗೆ ಹೋಲಿಸಿದರೆ, ಪ್ರಸ್ತುತ ಶೇ 20ರಷ್ಟು ವಹಿವಾಟು ಕುಸಿದಿದೆ. ಹಬ್ಬದ ಖರೀದಿ ಸಂಭ್ರಮ ಎಂಬುದು ಕಣ್ಮರೆಯಾಗಿ ಎರಡ್ಮೂರು ವರ್ಷವಾಯ್ತು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT