ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಾಸು ಹೆಸರಿನಲ್ಲಿ ಪ್ರಶಸ್ತಿ ನೀಡಬೇಕು– ವಾಟಾಳ್‌ ನಾಗರಾಜ್

ಸರ್ಕಾರಗಳಿಗೆ ಸಾಹಿತ್ಯ ಕ್ಷೇತ್ರ ಬೇಕಿಲ್ಲ ಎಂದು ಹರಿಹಾಯ್ದ ಗಣ್ಯರು
Last Updated 29 ನವೆಂಬರ್ 2020, 14:58 IST
ಅಕ್ಷರ ಗಾತ್ರ

ಮೈಸೂರು: ತರಾಸು ಹಾಗೂ ಅನಕೃ ಅಂತಹ ಸಾಹಿತಿಗಳ ಹೆಸರಿನಲ್ಲಿ ತಲಾ ₹10 ಲಕ್ಷ ಮೊತ್ತದ ಪ್ರಶಸ್ತಿಯನ್ನು ಪ್ರತಿ ವರ್ಷ ನೀಡಬೇಕು ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಒತ್ತಾಯಿಸಿದರು.

ತರಾಸು ಜನ್ಮಶತಮಾನೋತ್ಸವ ಸಮಿತಿ ವತಿಯಿಂದ ಇಲ್ಲಿನ ಎಂಜಿನಿಯರುಗಳ ಸಂಸ್ಥೆಯಲ್ಲಿ ಭಾನುವಾರ ನಡೆದ ‘ತರಾಸು ಜನ್ಮ ಶತಮಾನೋತ್ಸವ’ ಉದ್ಘಾಟಿಸಿ ಅವರು ಮಾತನಾಡಿದರು.

ಕಾದಂಬರಿ ಬರೆಯುವವರ ಸಂಖ್ಯೆ ಕಡಿಮೆಯಾಗಿದೆ. ಪ್ರತಿ ವರ್ಷ ಇವರ ಹೆಸರಿನಲ್ಲಿ ಪ್ರಶಸ್ತಿ ನೀಡುವುದರಿಂದ ಕಾದಂಬರಿ ಕ್ಷೇತ್ರವೂ ಬೆಳವಣಿಗೆ ಕಾಣುತ್ತದೆ. ಇವರ ಎಲ್ಲ ಪುಸ್ತಕಗಳನ್ನು ಮರುಮುದ್ರಣ ಮಾಡಿ ಹಂಚಬೇಕಾಗಿದೆ. ಇವರ ಮನೆಯನ್ನು ಸ್ಮಾರಕ ಮಾಡಬೇಕು. ಆದರೆ, ಸರ್ಕಾರಗಳಿಗೆ ಸಾಹಿತ್ಯ ಕ್ಷೇತ್ರ ಬೇಕಾಗಿಲ್ಲ. ಶಾಸನಸಭೆಗಳಲ್ಲೂ ಸಾಹಿತ್ಯದ ವಾತಾವರಣ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ತರಾಸು ಜನ್ಮ ಶತಮಾನೋತ್ಸವವನ್ನು ಸರ್ಕಾರವೇ ಮಾಡಬೇಕಾಗಿತ್ತು. ಆದರೆ, ಸರ್ಕಾರಕ್ಕೆ ತರಾಸು ಯಾರು ಎಂಬುದೇ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.

ಒಂದು ನಿರ್ಣಯ ಕೈಗೊಳ್ಳಲು 50 ನಿಮಿಷ ಚರ್ಚೆ–ಸ.ರ.ಸುದರ್ಶನ

‘ಸ್ವಾತಂತ್ರ್ಯ ಮತ್ತು ಕನ್ನಡ ಚಳವಳಿಗಾರರಾಗಿ ತರಾಸು’ ಕುರಿತು ಮಾತನಾಡಿದ ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ಸ.ರ.ಸುದರ್ಶನ, ‘ಬೆಂಗಳೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಒಂದು ನಿರ್ಣಯ ಕೈಗೊಳ್ಳಲು ಸುಮಾರು 50 ನಿಮಿಷ ಚರ್ಚೆಯಾಯಿತು. ಆದರೆ, ಇಂದಿನ ಸಮ್ಮೇಳನಗಳಲ್ಲಿ ನಿರ್ಣಯ ಮಂಡಿಸಲೂ ಸಮಯವಾಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.‌

ಕೇಂದ್ರೋದ್ಯಮಗಳಲ್ಲಿ ಕನ್ನಡ ಬಲ್ಲವರಿಗೆ ಉದ್ಯೋಗ ನೀಡಬೇಕು ಎಂಬ ನಿರ್ಣಯಕ್ಕೆ ವಿರೋಧ ವ್ಯಕ್ತಪಡಿಸಿದ ತರಾಸು, ಕನ್ನಡಿಗರಿಗೇ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದರು. ಇದು ಸಾಕಷ್ಟು ಚರ್ಚೆಗೆ ದಾರಿ ಮಾಡಿಕೊಟ್ಟಿತು ಎಂದು ಸ್ಮರಿಸಿದರು.

ಬೆಂಗಳೂರಿನಲ್ಲಿ ನಡೆದ ರಾಮೋತ್ಸವವೊಂದರಲ್ಲಿ ಕನ್ನಡ ಕಲಾವಿದರಿಗೆ ಆದ್ಯತೆ ಸಿಗಬೇಕು ಎಂದು ಸುಬ್ಬುಲಕ್ಷ್ಮೀ ಅವರ ಗಾಯನ ನಡೆಯುವಾಗ ತರಾಸು ಕಪ್ಪುಬಾವುಟ ಪ್ರದರ್ಶಿಸಿದ್ದರು ಎಂದು ನೆನಪಿಸಿಕೊಂಡರು.

ತರಾಸು ಆರ್ಥಿಕ ಸ್ಥಿತಿ ಸಂಕಟದಲ್ಲಿತ್ತು– ಪ.ಮಲ್ಲೇಶ್

ತರಾಸು ಅವರ ಆರ್ಥಿಕ ಸ್ಥಿತಿ ತೀರಾ ಸಂಕಟದಲ್ಲಿತ್ತು. ಪ್ರಾಮಾಣಿಕ ಹೋರಾಟಗಾರರು ಅವರಾಗಿದ್ದರು. ಅವರ ದುರ್ಗಾಸ್ತಮಾನ ನಿಜಕ್ಕೂ ದೊಡ್ಡ ಕೃತಿ ಎಂದು ಹೋರಾಟಗಾರ ಪ.ಮಲ್ಲೇಶ್ ಶ್ಲಾಘಿಸಿದರು.

ಕನ್ನಡಪರ ಹೋರಾಡಿದ ರಘು ಅವರು ಇಂಗ್ಲಿಷ್‌ ಶಾಲೆ ತೆರೆದರು. ಆದರೆ, ನಾವು ಕನ್ನಡ ಮಾಧ್ಯಮದಲ್ಲಿ ವಿಜ್ಞಾನ ಕಲಿಸಬೇಕು ಎಂದು ಹೊರಟರೆ ಮೂವರೇ ವಿದ್ಯಾರ್ಥಿಗಳು ಬಂದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತರಾಸು ಅವರ ಪುತ್ರಿ ಪೂರ್ಣಿಮಾ ಹಾಗೂ ಅಳಿಯ ಸುಂದರ್‌ ಅವರನ್ನು ಸನ್ಮಾನಿಸಲಾಯಿತು.

ಸಮಿತಿಯ ಗೌರವ ಅಧ್ಯಕ್ಷ ಡಿ.ಟಿ.ಪ್ರಕಾಶ್, ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್, ಸಮಾಜಸೇವಕರಾದ ರಘುರಾಂ ವಾಜಪೇಯಿ, ಉದಯಗಿರಿ ಕನ್ನಡ ಸಂಘದ ಅಧ್ಯಕ್ಷ ಮಡ್ಡಿಕೆರೆ ಗೋ‍‍ಪಾಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT