ಬುಧವಾರ, ನವೆಂಬರ್ 20, 2019
26 °C

ಗಜ ಸೇವಕರಿಗೆ ಮಸಾಜ್‌!

Published:
Updated:
Prajavani

ಮೈಸೂರು: ಒಂದೂವರೆ ತಿಂಗಳು ಅರಮನೆ ಆವರಣದಲ್ಲಿ ವಾಸ್ತವ್ಯ ಹೂಡುವ ಗಜಪಡೆ ಸದಸ್ಯರಿಗೆ ರಾಜಾತಿಥ್ಯ ನೀಡುವುದು ವಾಡಿಕೆ. ಏಕೆಂದರೆ, ವಿಶ್ವವಿಖ್ಯಾತ ದಸರಾ ಜಂಬೂಸವಾರಿಯ ಪ್ರಮುಖ ರೂವಾರಿಗಳು ಇವರು. ಹೀಗಾಗಿ, ಇವರ ಆರೋಗ್ಯ ಕಾಳಜಿಗೂ ಒತ್ತು ನೀಡಲಾಗುತ್ತದೆ.

ಅದಕ್ಕಾಗಿ ಅರಮನೆ ಆವರಣದಲ್ಲೇ ಟೆಂಟ್‌ ಶಾಲೆಯ ಜೊತೆಗೆ ತಾತ್ಕಾಲಿಕವಾಗಿ ಟೆಂಟ್‌ ಚಿಕಿತ್ಸಾ ಕೇಂದ್ರವನ್ನೂ ತೆರೆಯಲಾಗುತ್ತದೆ. ಜಂಬೂಸವಾರಿ ನಡೆಸುವ ಮಾವುತರು, ಕಾವಾಡಿಗಳ ಆರೋಗ್ಯದಲ್ಲಿ ಏರುಪೇರು ಕಂಡುಬಂದರೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಆಯುರ್ವೇದ ಚಿಕಿತ್ಸೆ ಮಾತ್ರ ಇಲ್ಲಿ ಲಭ್ಯ. ಜೊತೆಗೆ ಮಸಾಜ್‌ ಸೌಲಭ್ಯ ಕೂಡ ಇರಲಿದೆ.

ಅದಕ್ಕಾಗಿ ಜಿಲ್ಲಾ ಆಯುಷ್ ಇಲಾಖೆಯ ಪಂಚಕರ್ಮ ಚಿಕಿತ್ಸಾ ಕೇಂದ್ರ ಆರಂಭಿಸಿದೆ. ಈ ಕೇಂದ್ರದಲ್ಲಿ ಆಯುರ್ವೇದ ಗಿಡಮೂಲಿಕೆಯ ಚಿಕಿತ್ಸೆ ನೀಡಲಾಗುತ್ತದೆ.

ಬಿದ್ದು ಕಾಲು, ಕೈ ಉಳುಕಿಸಿಕೊಂಡರೆ, ಕತ್ತು ಉಳುಕಿದರೆ ಮಸಾಜ್ ಮಾಡುವ ಮೂಲಕ ಸರಿ ಮಾಡಲಾಗುತ್ತಿದೆ. ಇದಕ್ಕಾಗಿ ಸ್ಟೀಮ್‌ ಬಾಕ್ಸ್‌, ಮಸಾಜ್‌ಗೆ ಮಂಚವನ್ನೂ ಕೇಂದ್ರದಲ್ಲಿ ಇಡಲಾಗಿದೆ. ಪ್ರತಿದಿನ ಒಬ್ಬ ಮಹಿಳಾ ಹಾಗೂ ಪುರುಷ ಥೆರಪಿಸ್ಟ್‌ ಜೊತೆಗೆ ಒಬ್ಬ ವೈದ್ಯ ಚಿಕಿತ್ಸೆ ನೀಡುತ್ತಾರೆ.

‘ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಗಜಪಡೆಯೊಂದಿಗೆ ಏಳೆಂಟು ಕಿ.ಮೀ. ನಡೆಯಬೇಕಾಗಿರುವುದು ದಣಿಯುವುದು ಸಹಜ. ಅವರಿಗೆ ಪಂಚಕರ್ಮ ಚಿಕಿತ್ಸೆ ನೀಡಿದರೆ ಉಲ್ಲಾಸಿತರಾಗುತ್ತಾರೆ. ದೇಹ ಹಾಗೂ ಮನಸ್ಸನ್ನು ಚೈತನ್ಯಗೊಳಿಸಬಹುದು’ ಎನ್ನುತ್ತಾರೆ ಜಿಲ್ಲಾ ಆಯುಷ್‌ ಅಧಿಕಾರಿ ಡಾ.ಬಿ.ಎಸ್‌.ಸೀತಾಲಕ್ಷ್ಮಿ.

ಮಾವುತರು ಮತ್ತು ಕಾವಾಡಿಗಳಿಗೆ ಮಾತ್ರವಲ್ಲದೇ ಅವರ ಕುಟುಂಬದವರಿಗೂ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಜ್ವರ, ಕೆಮ್ಮು, ಶೀತ ಸೇರಿದಂತೆ ಸಣ್ಣಪುಟ್ಟ ಕಾಯಿಲೆಗಳಿಗೆ ಉಚಿತ ಚಿಕಿತ್ಸೆಯೊಂದಿಗೆ ಔಷಧ ವಿತರಿಸುವ ವ್ಯವಸ್ಥೆ ಮಾಡಲಾಗಿದೆ.

ಕಳೆದ ಮೂರು ವರ್ಷಗಳಿಂದ ಅರಮನೆ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಗೂ ಚಿಕಿತ್ಸೆ ವಿಸ್ತರಿಸಲಾಗಿದೆ. ಚಿಕಿತ್ಸಾ ಶಿಬಿರದಲ್ಲಿ ಸರ್ವಾಂಗ ಅಭ್ಯಂಗ, ಮಹಾನಾರಾಯಣ, ಕ್ಷೀರ ತೈಲ, ಹೆಡ್‌ ಮಸಾಜ್ ಮಾಡುವ ಜೊತೆಗೆ, ಸ್ನೇಹಪಾನ ಸೇರಿದಂತೆ ವಿವಿಧ ಆಯುರ್ವೇದ ಗಿಡಮೂಲಿಕೆಗಳಿಂದ ತಯಾರಿಸಿರುವ ದ್ರಾವಣ, ಚೂರ್ಣ, ಪೌಡರ್ ಔಷಧಗಳನ್ನು ನೀಡಲಾಗುತ್ತಿದೆ. ಸ್ಟೀಮ್‌ ಬಾಕ್ಸ್‌ನಲ್ಲಿ ಕೂರಿಸಿ ಶಾಖ ಕೊಡಲಾಗುತ್ತದೆ.

ಚರ್ಮರೋಗ, ಸಂಧಿವಾತ‌, ಶ್ವಾಸಕೋಶದ ಸಮಸ್ಯೆಗಳು, ಮಂಡಿನೋವು, ಬೆನ್ನುನೋವು, ಸ್ತ್ರೀರೋಗ ಸೇರಿದಂತೆ ನಾನಾ ಆರೋಗ್ಯ ಸಮಸ್ಯೆಗಳಿಗೆ ಪಂಚಕರ್ಮ ಮತ್ತು ಆಯುರ್ವೇದದ ಮೂಲಕ ಚಿಕಿತ್ಸೆ ಕೊಡಲಾಗುತ್ತಿದೆ.

ಸಿಲಿಂಡರ್‌ಯುಕ್ತ ಸ್ಟೌ, ಡ್ರೆಸಿಂಗ್ ಮೆಟೀರಿಯಲ್, ತೂಕ ಮತ್ತು ಅಳತೆಯ ಸಾಧನ, ರಕ್ತದೊತ್ತಡ ಪರೀಕ್ಷಾ ಯಂತ್ರ ಸೇರಿದಂತೆ ರೋಗಿಗಳ ತಪಾಸಣೆಗೆ ಅಗತ್ಯ ವಿರುವ ಉಪಕರಣಗಳನ್ನು ಇಡಲಾಗಿದೆ.

‘ಗಜಪಡೆಯ ಸದಸ್ಯರು ಅಲೋಪಥಿ ಚಿಕಿತ್ಸೆ ಪಡೆಯಲು ಹಿಂದೇಟು ಹಾಕುತ್ತಾರೆ. ಇಂಜೆಕ್ಷನ್‌ ಬೇಡ ಎನ್ನುತ್ತಾರೆ. ಹೀಗಾಗಿ, ಈ ಚಿಕಿತ್ಸೆಗೆ ಒತ್ತು ನೀಡುತ್ತೇವೆ. ಅಲ್ಲದೆ, ಅವರು ಕೂಡ ಗಿಡಮೂಲಿಕೆ ಚಿಕಿತ್ಸೆ ಬಗ್ಗೆ ಮಾಹಿತಿ ನೀಡುತ್ತಾರೆ. ಕಳೆದ ದಸರೆಯಲ್ಲಿ 800 ಮಂದಿ ಚಿಕಿತ್ಸೆ ಪಡೆದಿದ್ದರು. ಈ ಬಾರಿಯೂ ಉತ್ತಮ ಪ್ರತಿಕ್ರಿಯೆ ಲಭಿಸಿದೆ. ಈಗಾಗಲೇ 100ಕ್ಕೂ ಅಧಿಕ ಮಂದಿ ಚಿಕಿತ್ಸೆ ಪಡೆದಿದ್ದಾರೆ’ ಎಂದು ಸೀತಾಲಕ್ಷ್ಮಿ ಹೇಳುತ್ತಾರೆ.

ಪಾಳಿಯಲ್ಲಿ ವೈದ್ಯರ ಕಾರ್ಯನಿರ್ವಹಣೆ

ದೈಹಿಕ ಹಾಗೂ ಮಾನಸಿಕ ಒತ್ತಡ ತಗ್ಗಿಸಲು ಮಾವುತರು, ಕಾವಾಡಿಗಳಿಗೆ ಮಸಾಜ್ ಸೌಲಭ್ಯ ಕಲ್ಪಿಸಲಾಗಿದೆ. ಆಯುರ್ವೇದ ಗಿಡಮೂಲಿಕೆಯ ಚಿಕಿತ್ಸೆ ನೀಡಲಾಗುತ್ತದೆ. ಪಾಳಿ ಮೇಲೆ ವೈದ್ಯರು ಉಪಚರಿಸಲಿದ್ದಾರೆ. ತುರ್ತು ಸಮಸ್ಯೆ ಇದ್ದರೆ ಪ್ರವಾಸಿಗರಿಗೂ ಚಿಕಿತ್ಸೆ ನೀಡಲಾಗುವುದು ಎಂದು ಡಾ.ಬಿ.ಎಸ್‌.ಸೀತಾಲಕ್ಷ್ಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರತಿಕ್ರಿಯಿಸಿ (+)