ಶುಕ್ರವಾರ, ಅಕ್ಟೋಬರ್ 22, 2021
29 °C
ಕುವೆಂಪು ಸಾಲುಗಳಿಗೆ ಪೂರ್ಣಚಂದ್ರ ತೇಜಸ್ವಿ ರಾಗಸಂಯೋಜನೆ

ಮೈಸೂರು ದಸರಾ: ಬಾರಿಸು ಕನ್ನಡ ಡಿಂಡಿಮವ..

ಮೋಹನ್‌ ಕುಮಾರ ಸಿ. Updated:

ಅಕ್ಷರ ಗಾತ್ರ : | |

Prajavani

ಮೈಸೂರು: ನಗರದ ಚಿಕ್ಕ ಗಡಿಯಾರದ ಅಂಗಳದಲ್ಲಿ ಕುವೆಂಪು ಸಾಲುಗಳು ಜನರ ಕೊರಳಾದ ಬಗೆಯನ್ನು ಸೆರೆಯಿಡಿದ ರೂಪಕ ‘ಬಾರಿಸು ಕನ್ನಡ ಡಿಂಡಿಮವ.. ಓ ಕರ್ನಾಟಕ ಹೃದಯ ಶಿವ...’

ಆರು ವರ್ಷಗಳ ಹಿಂದೆ ಎಸ್‌.ವಿ.ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ ಹಾಗೂ ಆರ್‌.ಸುನಿಲ್‌ ನಿರ್ದೇಶನದಲ್ಲಿ ಮೂಡಿದ ಈ ವಿಡಿಯೊ ಹಾಡು, ಸಾಮಾಜಿಕ ಜಾಲತಾಣಗಳ ಅಬ್ಬರವೇ ಇಲ್ಲದ ಕಾಲದಲ್ಲಿ ಜನರಿಗೆ ತಲುಪಿತು. ಅಲ್ಲದೆ, ಸರ್ಕಾರವು ನವೆಂಬರ್‌ ತಿಂಗಳಲ್ಲಿ ಎಲ್ಲ ಚಿತ್ರ ಮಂದಿರಗಳಲ್ಲೂ ಚಿತ್ರ ಪ್ರದರ್ಶನಕ್ಕೂ ಮುನ್ನ ಈ ಹಾಡನ್ನು ಪ್ರಸಾರ ಮಾಡಬೇಕೆಂಬ ಆದೇಶ ಹೊರಡಿಸಿದ್ದು, ಎಲ್ಲ ಕನ್ನಡಿಗರನ್ನೂ ತಲುಪುವಂತಾಯಿತು.

ಚಿಕ್ಕ ಗಡಿಯಾರದ ಅಂಗಳದಲ್ಲಿ ಪಾಶ್ಚಾತ್ಯ ಶೈಲಿಯಲ್ಲಿ ಹಾಡನ್ನು ನುಡಿಸುತ್ತಿದ್ದ ಬ್ಯಾಂಡ್‌ ಅನ್ನು ಜಾನಪದ ಕಲಾತಂಡವೊಂದು ಮುಖಾಮುಖಿಯಾದಾಗ ‘ಬಾರಿಸು ಕನ್ನಡ ಡಿಂಡಿಮ’ ಮೊಳಗುತ್ತದೆ. ಡೊಳ್ಳುಗಳನ್ನು ಹೊತ್ತ ತಂಡವು ಜೊತೆಯಾಗುತ್ತಿದ್ದಂತೆ, ದೇವರಾಜ ಮಾರುಕಟ್ಟೆಯಲ್ಲಿ ವಸ್ತುಗಳನ್ನು ಕೊಳ್ಳಲು ಗ್ರಾಹಕರಾಗಿ ಬಂದ  ಗಾಯಕರು, ಜನರು, ಕಾಲೇಜು ವಿದ್ಯಾರ್ಥಿಗಳು ಹಾಡಿಗೆ ದನಿಯಾಗುತ್ತಾರೆ. ‘ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು’ ಎಂದು ಹಾಡು ಮುಗಿಯುತ್ತದೆ. ಹಾಡಿನ ನಡುವೆ ಜಾನಪದ, ಸುಗಮ ಸಂಗೀತ, ಶಾಸ್ತ್ರೀಯ, ಅರಮನೆ ಬ್ಯಾಂಡ್‌ ಶೈಲಿಯ ಫ್ಯೂಷನ್‌ನ ಹೂರಣವಿದೆ. ಹೀಗಾಗಿಯೇ ಹಾಡು ಹೃದ್ಯವಾಗುತ್ತದೆ.

 

‘ಕನ್ನಡ ಕುರಿತ ಕುವೆಂಪು ಸಾಲುಗಳಿಗೆ ಸಂಗೀತ ಸಂಯೋಜನೆ ಮಾಡುವ ಅಭಿಲಾಷೆಯಿತ್ತು. ವನ್ಯಜೀವಿ ಛಾಯಾಗ್ರಾಹಕರಾದ ಕೃಪಾಕರ ಸೇನಾನಿ ಬೆಂಬಲಿಸಿದರು. ವಾರ್ತಾ ಇಲಾಖೆಯೂ ನೆರವಾಯಿತು. ಇದನ್ನು ದೃಶ್ಯೀಕರಿಸಲು ಮೈಸೂರನ್ನೇ ಆಯ್ದುಕೊಳ್ಳಲಾಯಿತು. ಏಕೆಂದರೆ ಕಲಾವಿದರು– ತಂತ್ರಜ್ಞರು ಮೈಸೂರಿಗರೇ ಆಗಿದ್ದರು. ಕನ್ನಡದ ಎಲ್ಲ ಭಾಗದ ಕಲೆಗಳಿಗೆ ವೇದಿಕೆ ಒದಗಿಸಿ ಎಂದಿನಿಂದಲೂ ಮೈಸೂರು ಪ್ರೋತ್ಸಾಹಿಸುತ್ತಿದೆ. ಹೀಗಾಗಿಯೇ ಈ ಹಾಡು ಕನ್ನಡ ಪರಂಪರೆಯನ್ನು ಧ್ವನಿಸುತ್ತದೆ’ ಎಂದು ಹಾಡಿನ ಸಂಗೀತ ನಿರ್ದೇಶಕ ಎಸ್‌.ವಿ.ಪೂರ್ಣಚಂದ್ರ ತೇಜಸ್ವಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‌2015ರ ದಸರೆ ವೇಳೆ ಹಾಡು ಬಿಡುಗಡೆಯಾದರೂ ಈಗಲೂ ಎಲ್ಲರ ಮೊಬೈಲ್‌ಗಳಲ್ಲಿ ಧ್ವನಿಸುತ್ತದೆ. ನಿತ್ಯ 15 ಸಾವಿರ ಮಂದಿ ವೀಕ್ಷಿಸುತ್ತಾರೆ. ಇದುವರೆಗೂ 2.5 ಕೋಟಿ ಮಂದಿ ವೀಕ್ಷಿಸಿದ್ದಾರೆ. ಮೈಸೂರಿನ ಹತ್ತಾರು ಬ್ಯಾಂಡ್‌ಗಳಲ್ಲಿ ಗುರುತಿಸಿಕೊಂಡಿದ್ದವರು, ಈ ಹಾಡಿಗೆ ದನಿಯಾದವರು ಕನ್ನಡ ಚಿತ್ರರಂಗದ ಹಿನ್ನೆಲೆ ಗಾಯಕರಾಗಿ ಹಾಗೂ ಸಂಗೀತ ನಿರ್ದೇಶಕರಾಗಿ ಸಾಧನೆ ಮಾಡಿದ್ದಾರೆ. ನವೀನ್‌ ಸಜ್ಜು, ಬಪ್ಪಿ ಬ್ಲಾಸಂ, ಅನನ್ಯ ಭಟ್‌, ಉದಿತ್‌ ಹರಿದಾಸ್‌, ಎಂ.ಸಿ.ಅರುಣ್‌, ಪಂಚಮ್‌, ಕನ್ನಿಕಾ ಅರಸ್‌, ಮೋನಿಷ್ ಕುಮಾರ್‌... ಹೀಗೆ ಪಟ್ಟಿ ಬೆಳೆಯುತ್ತದೆ. 

ತಂಡವಾಗಿ ಕೆಲಸಮಾಡಿದ ಪೂರ್ಣಚಂದ್ರ ಮೈಸೂರು, ಎನ್‌.ಎಸ್‌.ನಾಗಾಭೂಷಣ ಚಿತ್ರರಂಗದ ಮುಂಚೂಣಿ ಕಲಾವಿದರಾಗಿದ್ದರೆ, ಶೇಖರ್‌ ಎಸ್‌. ಯಶಸ್ವಿ ಸಿನಿಮಾ ಛಾಯಾಗ್ರಾಹಕರಾಗಿ ಹೆಸರು ಮಾಡಿದ್ದಾರೆ. ಮೈಸೂರಿನ ಹಲವು ಕಲಾವಿದರ ಸಾಂಘಿಕ ಶ್ರಮದಲ್ಲಿ ಮೂಡಿದ ಈ ಹಾಡು, ಕುವೆಂಪು ನುಡಿಗಳನ್ನು ಜನ–ಜಾನಪದವಾಗಿಸಿದೆ. ‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು