ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಯಾಚನೆಯ ಭಿಕ್ಷಾಪಾತ್ರೆಯಾದ ಸೇನೆ: ಮಾಲಗತ್ತಿ

Last Updated 10 ಜೂನ್ 2019, 16:42 IST
ಅಕ್ಷರ ಗಾತ್ರ

ಮೈಸೂರು: ‘ಮಿಲಿಟರಿಯ ಗನ್ನನ್ನೇ ಮತಯಾಚನೆಯ ಭಿಕ್ಷಾಪಾತ್ರೆಯನ್ನಾಗಿ ಮಾಡಿಕೊಂಡಿದ್ದು ಈ ಕಾಲದ ಬಹುದೊಡ್ಡ ದುರಂತ’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ.ಅರವಿಂದ ಮಾಲಗತ್ತಿ ಬೇಸರ ವ್ಯಕ್ತಪಡಿಸಿದರು.

‘ಗುರುತು‘ ಬಳಗ ಮತ್ತು ‘ಶ್ರೀನಿಧಿ ಪುಸ್ತಕಗಳು‘ ವತಿಯಿಂದ ಇಲ್ಲಿನ ಕಲಾಮಂದಿರದ ಮನೆಯಂಗಳದಲ್ಲಿ ಸೋಮವಾರ ನಡೆದ ಮೊದಲ ವಾರ್ಷಿಕೋತ್ಸವ ಮತ್ತು ‘ಗುರುತು‘ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.‌

‘ಸರ್ಕಾರದ ಸಾಧನೆಯನ್ನು ಹೇಳುವುದೇ ಬೇರೆ. ಅದರ ವೈಭವೀಕರಣವೇ ಬೇರೆ. ಸಾಧನೆಯನ್ನು ಬಿಂಬಿಸಿಕೊಂಡ ರೀತಿ ಸರಿಯಲ್ಲ’ ಎಂದು ಟೀಕಿಸಿದರು.

‘ಪ್ರಾದೇಶಿಕ ಭಾಷೆಗಳ ಮೇಲೆ ಹಿಂದಿ ಹೇರಿಕೆ ಸರಿಯಲ್ಲ. ದೇಶದ ಎಲ್ಲ ಭಾಷೆಗಳನ್ನೂ ರಾಷ್ಟ್ರೀಯ ಭಾಷೆಯನ್ನಾಗಿಸಬೇಕು. ಆಗ ತಾನೇ ತಾನಾಗಿ ಪ್ರಾದೇಶಿಕ ಭಾಷೆಗಳಿಗೆ ಮೊದಲ ಸ್ಥಾನ ಸಿಗುತ್ತದೆ’ ಎಂದು ಅವರು ಅಭಿಪ್ರಾಯಪಟ್ಟರು.

‘ವಿದ್ಯುನ್ಮಾನ ಮಾಧ್ಯಮದಲ್ಲಷ್ಟೇ ಇದ್ದ ಸೋಂಕು ಇದೀಗ ಮುದ್ರಣ ಮಾಧ್ಯಮಕ್ಕೂ ವ್ಯಾಪಿಸುತ್ತಿರುವುದು ಆತಂಕ ಹುಟ್ಟಿಸಿದೆ. ಮುದ್ರಣ ಮಾಧ್ಯಮಕ್ಕೊಂದು ಚರಿತ್ರೆ ಇದ್ದುದರಿಂದ ಅದು ಬದ್ಧತೆ ಮತ್ತು ನೈತಿಕತೆಯನ್ನು ಉಳಿಸಿಕೊಂಡಿತ್ತು. ಆದರೆ, ವಿದ್ಯುನ್ಮಾನ ಮಾಧ್ಯಮಕ್ಕೆ ಯಾವುದೇ ಚರಿತ್ರೆ ಇರಲಿಲ್ಲ. ಹೀಗಾಗಿ, ಮಕ್ಕಳ ಕೈಗೆ ಬ್ಲೇಡು ಕೊಟ್ಟಂತಹ ಸ್ಥಿತಿಗೆ ಅದು ತಲುಪಿತು. ಈಗ ಇದೇ ಹಾದಿಗೆ ಮುದ್ರಣ ಮಾಧ್ಯಮವೂ ಹೊರಳಬಾರದು’ ಎಂದು ಕಳಕಳಿ ವ್ಯಕ್ತಪಡಿಸಿದರು.‌

ಅಪಾಯದ ಆತಂಕ

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ‘ಏಕವ್ಯಕ್ತಿಯ ವಿಜೃಂಭಣೆ ರಾಜಕೀಯ ಪಕ್ಷಕ್ಕೆ ಮಾತ್ರವಲ್ಲ ದೇಶಕ್ಕೇ ಅಪಾಯಕಾರಿ’ ಎಂದು ಅಭಿಪ್ರಾಯಪಟ್ಟರು.

‘ಇಂತಹ ವಿಜೃಂಭಣೆ ಇತಿಹಾಸದಲ್ಲಿ ಸಾಕಷ್ಟು ನಡೆದಿವೆ. ಆದರೆ, ನಂತರ ಇವು ಮರೆಯಾಗುವುದು ಖಚಿತ. ಜನಾಭಿಪ್ರಾಯ ಒಪ್ಪಬೇಕು ಎನ್ನುವುದು ತಾತ್ವಿಕವಾಗಿ ಸರಿ. ಆದರೆ, ಈ ಬಗೆಯ ವಿಜೃಂಭಣೆಯನ್ನು ಒಪ್ಪುವುದು ಕಷ್ಟ’ ಎಂದರು.

‘ಲೋಕಸಭಾ ಚುನಾವಣೆಯಲ್ಲಿ ದೇಶದ ಜನರ ಮನಸ್ಸನ್ನೇ ದಿಕ್ಕು ತಪ್ಪಿಸಲಾಗಿದೆ. ಮುಂಬರುವ ದಿನಗಳಲ್ಲಿ ಅಪಾಯ ಕಾದಿದೆ. ಎಲ್ಲರೂ ಬದ್ಧತೆಯಿಂದ ಕಾರ್ಯನಿರ್ವಹಿಸುವ ಮೂಲಕ ಈ ಅಪಾಯ ಎದುರಿಸಬೇಕಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT