ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಳಿಗೆ ಎದೆಗುಂದುವುದಿಲ್ಲ, ಹೋರಾಟ ತೀವ್ರಗೊಳಿಸುತ್ತೇವೆ: ಬಡಗಲಪುರ ನಾಗೇಂದ್ರ

ಸರ್ಕಾರದ ವಿರುದ್ಧ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ವಾಗ್ದಾಳಿ
Last Updated 2 ಜೂನ್ 2022, 9:17 IST
ಅಕ್ಷರ ಗಾತ್ರ

ಮೈಸೂರು: ‘ರೈತ ಚಳವಳಿಯನ್ನು ಹತ್ತಿಕ್ಕುವುದಕ್ಕಾಗಿ ಬಿಜೆಪಿ ಸರ್ಕಾರ ಹಾಗೂ ಸಂಘ ‍ಪರಿವಾರವು ನಿರಂತರವಾಗಿ ದಾಳಿ ಮಾಡುತ್ತಿದ್ದು, ರಾಕೇಶ್‌ ಟಿಕಾಯತ್‌ ಅವರಿಗೆ ಮಸಿ ಬಳಿದಿರುವ ಪ್ರಕರಣವು ಇದೇ ಕುತಂತ್ರದ ಭಾಗ’ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ವಾಗ್ದಾಳಿ ನಡೆಸಿದರು.

‘ರೈತ ಆಂದೋಲನಗಳಿಗೆ ಸಿಕ್ಕ ಜಯದಿಂದ ಹತಾಶರಾಗಿರುವ ಬಿಜೆಪಿಯು ರೈತ ಮುಖಂಡರನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದೆ. ನೈತಿಕ ಬಲ, ತಾತ್ವಿಕ ಸ್ಪಷ್ಟತೆಯು ಸಂಘಟನೆಗಿದ್ದು, ಹೋರಾಟವನ್ನು ತೀವ್ರಗೊಳಿಸಲಾಗುವುದು’ ಎಂದು ಗುರುವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಭಾರತೀಯ ಕಿಸಾನ್‌ ಯೂನಿಯನ್‌ ವಿರುದ್ಧ ಉತ್ತರ ಪ್ರದೇಶದ ಸರ್ಕಾರ ಸುಳ್ಳಿನ ಆರೋಪ ಮಾಡುತ್ತಾ ಬಂದಿದೆ. ಇಲ್ಲಿನ ಬಿಜೆಪಿ ಸರ್ಕಾರವು ಉತ್ತರ ಪ್ರದೇಶವನ್ನೇ ಅನುಸರಿಸುತ್ತಿದೆ. ಭದ್ರತೆ ನೀಡದೆ, ದಾಳಿ ನಡೆಸಲು ಅನುವು ಮಾಡಿಕೊಡುವ ಮೂಲಕ ಕರ್ನಾಟಕದ ಸ್ಥಾನಮಾನ, ಮರ್ಯಾದೆಯನ್ನು ಹಾಳುಗೆಡವಿದೆ’ ಎಂದು ದೂರಿದರು.

‘ಟಿಕಾಯತ್‌ರ ಮೇಲಿನ ಹಲ್ಲೆ ಪ್ರಕರಣ ಪೂರ್ವಯೋಜಿತ ಸಂಚಾಗಿದ್ದು, ಶೀಘ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ನಿರ್ಲಕ್ಷ್ಯವಹಿಸಿದರೆ ಹೋರಾಟ ನಡೆಸಲಿದ್ದೇವೆ’ ಎಂದು ಎಚ್ಚರಿಸಿದರು.

ಸಮಿತಿ ರಚನೆ: ‘ಕೋಡಿಹಳ್ಳಿ ಚಂದ್ರಶೇಖರ್‌ ವಿರುದ್ಧದ ಆರೋಪ ವಿಚಾರಣೆಗೆ ತ್ರಿಸದಸ್ಯ ಸಮಿತಿಯನ್ನು ಸಂಘವು ರಚಿಸಿದೆ. ಹಸಿರು ಟವೆಲ್‌ ಹಾಕಿಕೊಂಡು ರೈತ ಚಳವಳಿಯ ದಿಕ್ಕನ್ನೇ ತಪ್ಪಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಸಂಯುಕ್ತ ಕಿಸಾನ್‌ ಮೋರ್ಚಾ ಸೇರಿದಂತೆ ಎಲ್ಲ ಸಂಘಟನೆಗಳೊಂದಿಗೂ ಚರ್ಚಿಸಲಾಗುವುದು’ ಎಂದು ಬಡಗಲಪುರ ನಾಗೇಂದ್ರ ಹೇಳಿದರು.

‘ವಿಧಾನ ಪರಿಷತ್‌ ಚುನಾವಣೆ ನಂತರ ಸಂಘದ ಸಿದ್ಧಾಂತ ಹಾಗೂ ರಾಜಕೀಯ ನಿಲುವಿನಲ್ಲಿ ಸ್ಪಷ್ಟತೆಯಿರುವ ನೈತಿಕ ಬಲವುಳ್ಳ ಯುವಕ ಪಡೆಯನ್ನು ಕಟ್ಟಲು ಚರ್ಚೆ ನಡೆಯುತ್ತಿದೆ. ಚಳವಳಿ ದುರುಪಯೋಗ ಮಾಡಿಕೊಳ್ಳುವುದನ್ನು ತಡೆಯುವುದೇ ಇದರ ಉದ್ದೇಶ’ ಎಂದರು.

ಪಠ್ಯ ಪರಿಷ್ಕರಣ ಸಮಿತಿ ವಿಸರ್ಜಿಸಿ: ‘ಶಾಲಾ ಮಕ್ಕಳ ಬಗ್ಗೆ ಕಾಳಜಿಯಿಲ್ಲದೆ ಗೊಂದಲದ ವಾತಾವರಣ ಸೃಷ್ಟಿಸಿರುವ ರೋಹಿತ್‌ ಚಕ್ರತೀರ್ಥ ನೇತೃತ್ವದ ಪಠ್ಯ ಪರಿಷ್ಕರಣ ಸಮಿತಿಯನ್ನು ವಿಸರ್ಜಿಸಬೇಕು. ಸಿದ್ಧಾಂತ ಹೇರಿಕೆಯನ್ನು ಮಕ್ಕಳ ಮನಸ್ಸುಗಳ ಮೇಲೆ ಮಾಡುವುದು ಸಲ್ಲ’ ಎಂದು ಬಡಗಲಪುರ ನಾಗೇಂದ್ರ ಹೇಳಿದರು.

‘ಪರಿಷ್ಕರಣೆ ಕುರಿತು ವ್ಯಾಪಕ ವಿರೋಧ ವ್ಯಕ್ತವಾಗಿದ್ದರೂ ಸರ್ಕಾರವು ಕ್ರಮ ಕೈಗೊಳ್ಳುತ್ತಿಲ್ಲ. ಉದ್ದೇಶಿತ ಯೋಜನೆಯನ್ನು ಕಾರ್ಯಗೊಳಿಸುವ ಹಠಕ್ಕೆ ಬಿದ್ದಿದೆ’ ಎಂದು ಕಿಡಿಕಾರಿದರು.

ಸಂಘದ ಹೊಸಕೋಟೆ ಬಸವರಾಜು, ಎಂ.ಎಸ್‌.ಅಶ್ವತ್ಥನಾರಾಯಣರಾಜೇ ಅರಸ್‌, ಶಿರಮಹಳ್ಳಿ ಸಿದ್ದಪ್ಪ, ಆನಂದ್‌ ಪ್ರಭಾಕರ್‌, ಸ್ವರಾಜ್‌ ಇಂಡಿಯಾದ ಪುನೀತ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT