ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರ ಕಳೆದರೂ ಪತ್ತೆಯಾಗದ ಹುಲಿ: ಕಾರ್ಯಾಚರಣೆ ಮುಂದುವರಿಕೆ

Last Updated 13 ಏಪ್ರಿಲ್ 2018, 12:07 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಕೊಟ್ಟಗೇರಿ ಕಾಫಿ ತೋಟದ ವ್ಯಾಪ್ತಿಯಲ್ಲಿ ತಂಗಿದೆ ಎನ್ನಲಾದ ಹುಲಿಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ನಡೆಸುತ್ತಿರುವ ಎಲ್ಲ ತಂತ್ರಗಳೂ ವಿಫಲವಾಗುತ್ತಿವೆ. ಒಂದು ವಾರದಿಂದ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದು, ಹುಲಿ ಸೆರೆಗೆ ಶತಾಯ ಗತಾಯ ಯತ್ನ ಮಾಡುತ್ತಿದ್ದಾರೆ. ಹುಲಿಯು ಅರಣ್ಯ ಇಲಾಖೆಯ ಎಲ್ಲ ಕಾರ್ಯತಂತ್ರಗಳನ್ನು ವಿಫಲಗೊಳಿಸಿ ಕಾರ್ಯಾಚರಣೆ ತಂಡಕ್ಕೆ ಚಳ್ಳೆಹಣ್ಣು ತಿನ್ನಿಸುತ್ತಿದೆ.

ಈ ವ್ಯಾಪ್ತಿಯಲ್ಲಿಯೇ ಬುಧವಾರ ರಾತ್ರಿ ಹುಲಿ ಓಡಾಡಿರುವುದು ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸುಮಾರು 200 ಎಕರೆಗಳಷ್ಟು ಜಾಗದಲ್ಲಿ ದಟ್ಟ ಗಿಡಮರಗಳು ಬೆಳೆದಿದ್ದು ಅದರ ಮಧ್ಯಭಾಗದಲ್ಲಿ ಸಣ್ಣದೊಂದು ತೊರೆ ಹರಿಯುತ್ತಿದೆ. ತೊರೆಯ ಇಕ್ಕೆಲಗಳಲ್ಲಿ ದಟ್ಟ ಪೊದೆ ಇದ್ದು ಅದರೊಳಗೆ ವ್ಯಾಘ್ರ ತಂಗಿರಬಹುದು ಎಂದು ಶಂಕಿಸಲಾಗಿದೆ. ಈ ವ್ಯಾಪ್ತಿಯಲ್ಲಿ ಅರಣ್ಯ ಸಿಬ್ಬಂದಿ 6 ಮರಗಳ ಮೇಲೆ ಅಟ್ಟಣಿಗೆ ನಿರ್ಮಿಸಿಕೊಂಡು ಕುಳಿತಿದ್ದಾರೆ.

ಗುರುವಾರ ಸ್ಥಳಕ್ಕೆ ಭೇಟಿ ನೀಡಿದ್ದ ಡಿಎಫ್ಒ ಮರಿಯಾ ಕ್ರಿಸ್ತರಾಜ್ ಕಾರ್ಯಚರಣೆಯ ತಂತ್ರವನ್ನು ಬದಲಾಯಿಸಲು ಸೂಚಿಸಿದ್ದಾರೆ. ಆಧುನಿಕ ತಂತ್ರಜ್ಞಾನ ಬಳಸಿಕೊಂಳ್ಳಲು ಮಾರ್ಗದರ್ಶನ ನೀಡಿದ್ದಾರೆ. ತಮ್ಮ ಕಚೇರಿಯನ್ನೇ ಕೊಟ್ಟಗೇರಿ ಕಾಫಿ ತೋಟಕ್ಕೆ ಬದಲಾಯಿಸಿಕೊಂಡಂತಿರುವ ತಿತಿಮತಿ ಎಸಿಎಫ್ ಶ್ರೀಪತಿ, ನಾಗರಹೊಳೆ ಎಸಿಎಫ್ ಪೌಲ್ ಆಂಟೋನಿ, ಆರ್‌ಎಫ್‌ಒಗಳಾದ ಅಶೋಕ್ ಹುನುಗುಂದ, ಕಿರಣ್ ಕುಮಾರ್, ಗಂಗಾಧರ್, ವನ್ಯಜೀವಿ ವಿಭಾಗದ ವೈದ್ಯಾಧಿಕಾರಿ ಮಜೀದ್ ಖಾನ್, ತಜ್ಞ ವೆಂಕಟೇಶ್ ಕಾರ್ಯಾಚರಣೆ ಸಫಲಗೊಳಿಸಲು ಹರಸಾಹಸ ಪಡುತ್ತಿದ್ದಾರೆ. ಕಾರ್ಯಾಚರಣೆ ತಂಡಕ್ಕೆ ಸ್ಥಳೀಯವಾಗಿ ಮಾಪಂಗಡ ಅಜಯ್, ಮಾಪಂಗಡ ಸಜನ್ ದೇವಯ್ಯ ಸಹಕಾರ ನೀಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT