ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದೇಶ ಪಾಲನೆಗೆ ಪರಿಣಾಮಕಾರಿ ಕ್ರಮವಿಲ್ಲ!

ನಿಷೇಧವಿದ್ದರೂ ನಿಲ್ಲದ ‘ಏಕಬಳಕೆ ಪ್ಲಾಸ್ಟಿಕ್’ ಬಳಕೆ
Last Updated 1 ಜುಲೈ 2022, 13:30 IST
ಅಕ್ಷರ ಗಾತ್ರ

ಮೈಸೂರು: ‘ಏಕ ಬಳಕೆಯ ಪ್ಲಾಸ್ಟಿಕ್‌ ಬಳಸಿದರೆ ಜುಲೈ 1ರಿಂದಲೇ ದಂಡ ವಿಧಿಸಲಾಗುವುದು. ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುವುದು’ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿತ್ತು. ಆದರೆ, ಅದರ ಅನುಷ್ಠಾನಕ್ಕೆ ಸಂಬಂಧಿಸಿ ನಗರದಲ್ಲಿ ಪರಿಣಾಮಕಾರಿ ಕ್ರಮ ಕೈಗೊಂಡಿದ್ದು ಶುಕ್ರವಾರ ಕಂಡುಬರಲಿಲ್ಲ!

ಸ್ಥಳೀಯ ಸಂಸ್ಥೆಯಿಂದಾಗಲಿ, ಮಾಲಿನ್ಯ ನಿಯಂತ್ರಣ ಮಂಡಳಿಯಿಂದಾಗಲಿ ಕಾರ್ಯಾಚರಣೆ ಅಥವಾ ದಾಳಿ ನಡೆಯಲಿಲ್ಲ. ಆದೇಶ ಹೊರಡಿಸಿದ್ದು ಬಿಟ್ಟರೆ ಅನುಪಾಲನೆ ಕ್ರಮವಾಗಿಲ್ಲ.

ಏಕ ಬಳಕೆಯ ಪ್ಲಾಸ್ಟಿಕ್‌ ನಿಷೇಧ ಆದೇಶ ಶುಕ್ರವಾರದಿಂದ ಜಾರಿಯಾಗಿದೆ. ರಾಜ್ಯದಲ್ಲಿ 2016ರಲ್ಲೇ ಈ ಬಗ್ಗೆ ನಿಯಮಗಳನ್ನು ರೂಪಿಸಿ ಏಕಬಳಕೆಯ ಪ್ಲಾಸ್ಟಿಕ್‌ ಬಳಕೆ ನಿಷೇಧಿಸಲಾಗಿತ್ತು. ಆದರೆ, ಇತರ ರಾಜ್ಯಗಳಲ್ಲಿ ಬಳಕೆಗೆ ಅವಕಾಶ ಕಲ್ಪಿಸಿದ್ದರಿಂದ ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿಲ್ಲ. ಈಗ, ಹೊಸದಾಗಿ ಆದೇಶ ಮಾಡಲಾಗಿದೆಯಾದರೂ ಜಾರಿಯಾಗಿದ್ದು ಕಂಡುಬಂದಿಲ್ಲ. ಏಕೆಂದರೆ, ನಗರದ ಅಲ್ಲಲ್ಲಿ ಏಕಬಳಕೆಯ ಪ್ಲಾಸ್ಟಿಕ್‌ ಬಳಸುವುದು, ಅವುಗಳ ಮೇಲೆ ಅವಲಂಬನೆಯಾಗುವುದು ದೂರಾಗಿಲ್ಲ.

ಮಾರುಕಟ್ಟೆಗಳಲ್ಲಿ, ಅಂಗಡಿಗಳಲ್ಲಿ ಪ್ಲಾಸ್ಟಿಕ್‌ ಬಳಕೆಗೆ ನಿಯಂತ್ರಣ ಬಿದ್ದಿಲ್ಲ. ಬಟ್ಟೆ ಮೊದಲಾದ ಪರ್ಯಾಯಗಳಿಗೆ ಕೆಲವರಷ್ಟೆ ಹೊಂದಿಕೊಂಡಿದ್ದಾರೆ. ಬಹುತೇಕರು ಇಂದಿಗೂ ಪ್ಲಾಸ್ಟಿಕ್‌ ಕ್ಯಾರಿಬ್ಯಾಗ್ ಕೇಳುತ್ತಾರೆ. ಮೂಲದಲ್ಲೇ ನಿಯಂತ್ರಣಕ್ಕೆ ಕ್ರಮ ವಹಿಸಿದರೆ, ನಿಷೇಧ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬಹುದಾಗಿದೆ ಎನ್ನುತ್ತಾರೆ ಅಂಗಡಿಕಾರರು.

‘ಏಕಬಳಕೆಯ ಪ್ಲಾಸ್ಟಿಕ್‌ ನಿಷೇಧಕ್ಕೆ ಸಂಬಂಧಿಸಿದಂತೆಯೇ ನಡೆದ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಿದ್ದೆವು. ಆದೇಶ ಅನುಷ್ಠಾನದ ಜವಾಬ್ದಾರಿಯನ್ನು ಮುಖ್ಯವಾಗಿ ನಗರ ಸ್ಥಳೀಯ ಸಂಸ್ಥೆಗಳು ನಿರ್ವಹಿಸಬೇಕಾಗುತ್ತದೆ. ಎಲ್ಲರ ಸಮನ್ವಯದಿಂದ ಕಾರ್ಯಾಚರಣೆ ನಡೆಯಬೇಕಿದೆ. ಈ ಸಂಬಂಧ ನಿರ್ದೇಶನಗಳನ್ನು ನೀಡಲಾಗಿದೆ. ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿ ಗಣೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೊದಲ ಹಂತದಲ್ಲಿ ಉತ್ಪಾದನಾ ಹಂತದ ಮೇಲೆ ಕೇಂದ್ರೀಕರಿಸಲಾಗಿದೆ. ಸಿಪೆಟ್‌ ಸಹಯೋಗದಲ್ಲಿ ಈಚೆಗೆ ಕಾರ್ಯಾಗಾರವನ್ನೂ ನಡೆಸಿ ಉತ್ಪಾದಕರಿಗೆ ಸೂಚನೆಗಳನ್ನು ಕೊಡಲಾಗಿದೆ; ಪರ್ಯಾಯಗಳ ಬಗ್ಗೆ ತಿಳಿಸಲಾಗಿದೆ. 35 ಮಂದಿ ಉತ್ಪಾದಕರು ಭಾಗವಹಿಸಿದ್ದರು’ ಎಂದು ಮಾಹಿತಿ ನೀಡಿದರು.

‘ಈಗಲೂ ಕೆಲವರು ಪ್ಲಾಸ್ಟಿಕ್‌ ಬಳಸುವುದು ಕಂಡುಬರುತ್ತಿದೆ. ಎಲ್ಲ ಇಲಾಖೆಗಳೂ ಸಮನ್ವಯದಿಂದ ಕೆಲಸ ಮಾಡಬೇಕಾಗುತ್ತದೆ. ಜನರ ಮನೋಭಾವ ಬದಲಿಸಲು ಪ್ರಯತ್ನಿಸಲಾಗುತ್ತಿದೆ’ ಎನ್ನುತ್ತಾರೆ ಅವರು.

‘ಏಕಬಳಕೆ ಪ್ಲಾಸ್ಟಿಕ್‌ ನಿಷೇಧಿಸಿರುವ ಕುರಿತು ಚಾಮುಂಡಿಬೆಟ್ಟದಲ್ಲಿ ಜನರಿಗೆ ಅರಿವು ಮೂಡಿಸಿದೆವು. ಬಟ್ಟೆ ಮೊದಲಾದ ಪರ್ಯಾಯ ಬ್ಯಾಗ್ ಬಳಸುವಂತೆ ತಿಳಿಸಿದೆವು. ಮೊದಲ ದಿನ ಯಾವುದೇ ದಾಳಿ ಅಥವಾ ಕಾರ್ಯಾಚರಣೆ ನಡೆಸಿಲ್ಲ. ಆದೇಶ ಜಾರಿಗೆ ತರಲು ಕ್ರಮ ವಹಿಸಲಾಗಿದೆ’ ಎಂದು ಮಹಾನಗರಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗರಾಜ್‌ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT