ಗುರುವಾರ , ಅಕ್ಟೋಬರ್ 17, 2019
28 °C
ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿದ ರೈತ ದಸರಾ ಮೆರವಣಿಗೆ; ಕಲಾತಂಡಗಳಿಗೆ ಮನಸೋತ ಜನತೆ

ಬಂಡಿ ಸಿಂಗಾರವೂ, ಬಂಡೂರು ಕುರಿ ನಡಿಗೆಯೂ

Published:
Updated:
Prajavani

ಮೈಸೂರು: ಎತ್ತುಗಳ ಕೊಂಬಿಗೆ ಕಟ್ಟಿದ ಬಣ್ಣಬಣ್ಣದ ಟೇಪುಗಳು, ಕಾಲುಗಳಿಗೆ ಗೆಜ್ಜೆ, ಹಣೆಗೆ ರಂಗಿನ ಚಿತ್ತಾರ, ನೊಗದ ಮಧ್ಯೆ ಕಟ್ಟಿದ ಹೊಂಬಾಳೆ, ಎತ್ತಿನಗಾಡಿಗೆ ಹೂವಿನ ಅಲಂಕಾರ, ರೈತರ ಮೊಗದಲ್ಲಿ ಸಂತಸದ ಹೊನಲು...

ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಆವರಣದಲ್ಲಿ ಮಂಗಳವಾರ ರೈತ ದಸರಾ ಮೆರವಣಿಗೆಗಾಗಿ ತಿ.ನರಸೀ‍ಪುರ ತಾಲ್ಲೂಕಿನ ಸೋಸಲೆ ಗ್ರಾಮದ ಕೃಷ್ಣಮೂರ್ತಿ ಅವರು ಸಿಂಗರಿಸಿಕೊಂಡು ಬಂದಿದ್ದ ಎತ್ತಿನಗಾಡಿ ಗಮನಸೆಳೆಯಿತು.

ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ರೈತ ಚಿಕ್ಕಯ್ಯ ಅವರ 14 ಬಂಡೂರು ಕುರಿಗಳು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದವು. ದೇವಸ್ಥಾನ ಆವರಣದಿಂದ ಹೊರಟ ಮೆರವಣಿಗೆಯು ಕೆ.ಆರ್‌.ಸರ್ಕಲ್‌, ದೇವರಾಜ ಅರಸು ರಸ್ತೆ, ನಾರಾಯಣಶಾಸ್ತ್ರಿ ರಸ್ತೆ, ಧನ್ವಂತರಿ ರಸ್ತೆ ಮೂಲಕ ಜೆ.ಕೆ.ಮೈದಾನ ತಲುಪಿತು.

ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಆರೇಳು ಎತ್ತಿನಗಾಡಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ರಸ್ತೆಯ ಇಕ್ಕೆಲಗಳಲ್ಲಿ ನಿಂತು ಜನ ವಿಡಿಯೊ ಹಾಗೂ ಫೋಟೊ ತೆಗೆದುಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಹಾಗೂ ಅರಣ್ಯ ಇಲಾಖೆಗಳ ಟ್ಯಾಬ್ಲೊಗಳು ಎತ್ತಿನ ಗಾಡಿಗಳ ಹಿಂದೆ ಸಾಗಿದವು.

ಮೆರವಣಿಗೆಯಲ್ಲಿ ನಂದಿಧ್ವಜ, ಡೊಳ್ಳು, ಯಕ್ಷಗಾನ, ಕಂಸಾಳೆ, ಹುಲಿವೇಷ, ಪೂಜಾಕುಣಿತ ಹಾಗೂ ಮರಗಾಲು ಕುಣಿತ ಆಕರ್ಷಿಸಿದವು.

‘ರೈತ ದಸರಾ ಮೆರವಣಿಗೆಯಲ್ಲಿ ಪಾಲ್ಗೊಳ್ಳಲೆಂದು ಎತ್ತಿನಗಾಡಿಯನ್ನು ಚೆಂಡು ಹೂವಿನಿಂದ ವಿಶೇಷವಾಗಿ ಅಲಂಕರಿಸಿದ್ದು, ಎತ್ತುಗಳಿಗೆ ಗೌನ್‌ ಹಾಕಿದ್ದೇವೆ. ಪ್ರತಿ ವರ್ಷ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತೇವೆ’ ಎಂದರು ರೈತ ಕೃಷ್ಣಮೂರ್ತಿ.

ಮೈಸೂರು ತಾಲ್ಲೂಕಿನ ನಾಗನಹಳ್ಳಿಯಿಂದ ಮೂರು ಎತ್ತಿನಗಾಡಿಗಳು ಬಂದಿದ್ದವು.

ಸಚಿವ ಕೋಟ ಶ್ರೀನಿವಾಸ ಪೂಜಾರಿ ಮೆರವಣಿಗೆಗೆ ಚಾಲನೆ ನೀಡಿದರು. ಶಾಸಕರಾದ ಎಲ್‌.ನಾಗೇಂದ್ರ, ಎಸ್‌.ಎ.ರಾಮದಾಸ್‌, ಮೇಯರ್‌ ಪುಷ್ಪಲತಾ ಜಗನ್ನಾಥ್‌ ಇದ್ದರು. 

ರೈತ ದಸರಾ ಮೆರವಣಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಗಜಪಡೆಯೂ ಗಮನಸೆಳೆಯಿತು. ಬನ್ನಿಮಂಟಪದವರೆಗೂ ಹೋಗಿ ತಾಲೀಮು ಮುಗಿಸಿಕೊಂಡು ಬಂದ ಆನೆಗಳನ್ನು ಸಾರ್ವಜನಿಕರು ಕಣ್ತುಂಬಿಕೊಂಡರು.

Post Comments (+)