ಗುರುವಾರ , ಮೇ 19, 2022
24 °C
ಸಿದ್ಧೇಶ್ವರಸ್ವಾಮೀಜಿ ಪ್ರವಚನ, ಸಿರಿ ನೆಚ್ಚಿ ಕೆಡದಿರಲು ಸಲಹೆ

ಬಸವ ಜಯಂತಿಯಲ್ಲಿ ದರ್ಶನಗಳ ಸಾಕ್ಷಾತ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಇಲ್ಲಿನ ಕಲಾಮಂದಿರದಲ್ಲಿ ನಡೆಯುತ್ತಿರುವ ಬಸವ ಜಯಂತಿಯ 2ನೇ ದಿನವಾದ ಬುಧವಾರ ಸಭಿಕರು ಬಸವ ದರ್ಶನದ ಸಾಕ್ಷಾತ್ಕಾರ ಪಡೆದರು.

ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ‘ಸಿರಿಯೆಂಬುದ ಮರೆದು ಪೂಜಿಸು ನಮ್ಮ ಕೂಡಲಸಂಗಮದೇವನ’ ಎಂಬ ಬಸವಣ್ಣನವರ ತತ್ವವನ್ನು ವಿವರಿಸುವ ಮೂಲಕ ತತ್ವಾಸಕ್ತರ ಗಮನವನ್ನು ಸೆಳೆದರು.

‘ಸಂಸಾರವೆಂಬುದು ಒಂದು ಗಾಳಿಯ ಸೊಡರು! ಸಿರಿಯೆಂಬುದು ಒಂದು ಸಂತೆಯ ಮಂದಿ ಕಂಡಯ್ಯ! ಇದ ನೆಚ್ಚಿ ಕೆಡಬೇಡ; ಸಿರಿಯೆಂಬುದ ಮರೆದು ಪೂಜಿಸು, ನಮ್ಮ ಕೂಡಲಸಂಗಮದೇವನ’ ಎಂಬ ಬಸವಣ್ಣನವರ ವಚನದ ಅರ್ಥದ ವಿವಿಧ ಮಜಲುಗಳನ್ನು ಅವರು ಪ್ರೇಕ್ಷಕರ ಮುಂದೆ ತೆರೆದಿಟ್ಟರು.

ಬಸವ ಜಯಂತಿ ಕಾರ್ಯಕ್ರಮಗಳಲ್ಲಿ ಹಲವು ಮಂದಿ ವಿದ್ವಾಂಸರು ಅನೇಕ ವಿಚಾರಗಳನ್ನು ಹೇಳಿದ್ದಾರೆ. ಅವುಗಳೆಲ್ಲವನ್ನೂ ನೆನಪಿನಲ್ಲಿಡುವುದು ಕಷ್ಟ. ಆದರೆ, ಬಸವಣ್ಣ ಹೇಳಿದ ‘ಸಿರಿಯೆಂಬುದ ಮರೆದು ಪೂಜಿಸು ನಮ್ಮ ಕೂಡಲಸಂಗಮದೇವನ’ ಎಂಬ ಒಂದು ವಾಕ್ಯವನ್ನಾದರೂ ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ಸಾರ್ಥಕವಾಗುತ್ತದೆ ಎಂದು ಅವರು ತಿಳಿಸಿದರು.

‘ಸಕಲ ನೀನೆ, ನಿಷ್ಕಲ ನೀನೇ ಕಂಡಯ್ಯ! ವಿಶ್ವತಶ್ಚಕ್ಷು ನೀನೇ ದೇವ! ವಿಶ್ವತೋಬಾಹು ನೀನೇ ದೇವ ವಿಶ್ವತೋಮುಖ ನೀನೇ ದೇವ! ಕೂಡಲಸಂಗಮದೇವ’ ಎಂದು ಬಸವಣ್ಣ ಹೇಳುತ್ತಾರೆ. ಇದನ್ನೇ ಐನ್‌ಸ್ಟೀನ್‌ ‘ಅನ್‌ಲಿಮಿಟೆಬಲ್‌ ರಿಯಾಲಿಟಿ’ ಎಂದು ಹೇಳುತ್ತಾರೆ. ಇಂತಹ ನಿಷ್ಕಲ ದೇವನನ್ನು ಪೂಜಿಸಬೇಕು ಎಂದು ಅವರು ಕರೆ ನೀಡಿದರು.

‘ಜಾಗ್ರಸ್ವಪ್ನಸುಷುಪ್ತಿಯಲ್ಲಿ ಮತ್ತೊಂದ ನೆನೆದಡೆ ತಲೆದಂಡ ತಲೆದಂಡ! ಹುಸಿಯಾದಡೆ ದೇವಾ ತಲೆದಂಡ ತಲೆದಂಡ! ಕೂಡಲಸಂಗಮದೇವಾ ನೀವಲ್ಲದೆ ಅನ್ಯವ ನೆನೆದಡೆ ತಲೆದಂಡ ತಲೆದಂಡ!’ ಎಂದು ಬಸವಣ್ಣ ಹೇಳುತ್ತಾರೆ. ಜಾಗೃತ ಮತ್ತು ನಿದ್ದೆಯಲ್ಲಿ ಅವರು ಕೂಡಲಸಂಗಮನನ್ನು ನೆನೆಯುತ್ತಾರೆ. ಆದರೆ, ನಾವು ಜಾಗೃತಿ ಇದ್ದಾಗಲೂ ನೆನೆಯುವುದಿಲ್ಲ. ನಿದ್ದೆಯಲ್ಲಿದ್ದಾಗಲೂ ನೆನೆಯುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಅಕ್ಕ ನಾಗಮ್ಮ ಬಸವಣ್ಣನನ್ನು ಮಹಾದಾಸೋಹಿ ಎಂದು ಕರೆಯುತ್ತಾರೆ. ಶಿವಪಥವೇ ದಾಸೋಹ. ಇಂತಹ ದಾರಿಯನ್ನು ತೋರಿಸಿದಾತ ಬಸವಣ್ಣ ಎಂದು ಅವರು ತಮ್ಮ ವಚನಗಳಲ್ಲಿ ಹೇಳುತ್ತಾರೆ. ದಾಸೋಹ ಎಂದರೆ ಇಲ್ಲಿರುವ ಯಾವುದೂ ತಮ್ಮದಲ್ಲ, ಯಾವ ವಸ್ತುವೂ ತಮ್ಮದಲ್ಲ ಎಂದು ಭಾವಿಸಿ ಎಲ್ಲವನ್ನೂ ಎಲ್ಲರಿಗೂ ಅರ್ಪಿಸುವುದು ಎಂದು ಅವರು ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.