ಶುಕ್ರವಾರ, ಮಾರ್ಚ್ 5, 2021
27 °C
ಮತ್ತೆ ಕಲ್ಯಾಣದಲ್ಲಿ ಸಾಹಿತಿ ಕೆ.ಎಸ್.ಭಗವಾನ್ ಹೇಳಿಕೆ

‘ಹೊಸ ಸರ್ಕಾರ ಬಸವ ಆಶಯಕ್ಕನುಗುಣವಾಗಿರಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಬಸವೇಶ್ವರರ ಆಶಯಗಳನ್ನು ನೂತನ ಸರ್ಕಾರ ಅನುಷ್ಠಾನಗೊಳಿಸಲಿ’ ಎಂದು ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಹೇಳಿದರು.

ನಗರದ ಸುಚಿತ್ರ ಕಲಾ ಗ್ಯಾಲರಿಯಲ್ಲಿ ಸೋಮವಾರ ‘ಮತ್ತೆ ಕಲ್ಯಾಣ’ದ ಅಂಗವಾಗಿ ಸಹಮತ ವೇದಿಕೆ ಆಯೋಜಿಸಿದ್ದ ಹಿರಿಯ ಕಲಾವಿದ ಎಲ್‌.ಶಿವಲಿಂಗಪ್ಪ ರಚಿಸಿರುವ ವಚನ ಚಳವಳಿಯ ಸಂದರ್ಭದ ಚಿತ್ರಗಳ ಪ್ರದರ್ಶನ ಹಾಗೂ ‘ಮತ್ತೆ ಕಲ್ಯಾಣಕ್ಕೆ ಬಾ ಬಸವಣ್ಣ’ ಚಿತ್ರದ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ಬಸವೇಶ್ವರರ ತತ್ವ, ಆದರ್ಶ ಸಕಾಲಿಕವಾಗಿವೆ. ಇವು ಸಂವಿಧಾನದಲ್ಲಿ ಅಡಕಗೊಂಡಿದ್ದು, ಇವಕ್ಕೆ ಅಪಚಾರವಾಗದಂತೆ ನಡೆದುಕೊಳ್ಳಬೇಕಿದೆ’ ಎಂದರು.

ಚಿತ್ರ ಕಲಾಕೃತಿಗಳ ಪ್ರದರ್ಶನ ಉದ್ಘಾಟಿಸಿದ ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ ಮಾತನಾಡಿ ‘ಮತ್ತೆ ಕಲ್ಯಾಣ ಎಂದರೇ, ಅಸ್ಪೃಶ್ಯತೆ ವಿರುದ್ಧ ಹೋರಾಟ ಮತ್ತೆ ಆರಂಭಗೊಳ್ಳಬೇಕು. ಅಂತರ್ಜಾತಿ ವಿವಾಹ ಮತ್ತೆ ಮುನ್ನಲೆಗೆ ಬರಬೇಕು. ಮೌಢ್ಯತೆ ವಿರುದ್ಧ ಧ್ವನಿ ಮೊಳಗಬೇಕು’ ಎಂದು ಹೇಳಿದರು.

‘ಮತ್ತೆ ಕಲ್ಯಾಣ ಕರ್ನಾಟಕಕ್ಕೆ ಸೀಮಿತವಾಗಬಾರದು. ವಚನ ಚಳವಳಿಯಂತೆ ಎಲ್ಲೆಡೆಗೂ ಪಸರಿಸಲಿ. ನೈತಿಕ, ತಾತ್ವಿಕ ಬದುಕಿಗೆ ಪೂರಕವಾಗಿ ಚಳವಳಿ ಮುನ್ನಡೆಯಲಿ. ತಳ ಸಮುದಾಯಕ್ಕಷ್ಟೇ ಸೀಮಿತವಾಗುವುದು ಬೇಡ. ಮೇಲ್ವರ್ಗದ ಜನರು ಇದರೊಳಗೆ ಸಕ್ರಿಯರಾಗಿ ಭಾಗಿಯಾಗಲಿ’ ಎಂದು ತಿಳಿಸಿದರು.

ವಚನ ಗಾಯನ: ‘ಮತ್ತೆ ಕಲ್ಯಾಣ’ ಕನ್ನಡ ನೆಲದಲ್ಲೇ ಹುಟ್ಟಿದ ಚಿಂತನೆ. ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಕಿರುರಂಗಮಂದಿರದಲ್ಲಿ ನಡೆದ ವಚನ ಗಾಯನ, ವಚನ ವಾಚನ, ಚಿತ್ರ ರಚನಾ ಕಾರ್ಯಕ್ರಮದಲ್ಲಿ ಪ್ರೊ.ಓ.ಎಲ್.ನಾಗಭೂಷಣಸ್ವಾಮಿ ಹೇಳಿದರು.

‘ಪ್ರಸ್ತುತ ಶಿಕ್ಷಣ ಸಮಾಜದಲ್ಲಿ ನೆಮ್ಮದಿ ಸೃಷ್ಟಿಸದಾಗಿದೆ. ಪ್ರಶ್ನೆಗಳಿಗೆ ಉತ್ತರವೇ ಸಿಗದಾಗಿದೆ. ವಚನಕಾರರ ವಚನಗಳು ಭಾಷಣಗಳ ಮೂಲಕ ದುರ್ಬಳಕೆಯಾಗುತ್ತಿವೆ. ತಿಳಿವಳಿಕೆ ಯಾರೊಬ್ಬರ ಸ್ವತ್ತಲ್ಲ. ತಿಳಿದುಕೊಳ್ಳುವುದೇ ನಮ್ಮ ಜವಾಬ್ದಾರಿಯಾಗಬೇಕಿದೆ’ ಎಂದು ತಿಳಿಸಿದರು.

‘ನಾನೇ ಶ್ರೇಷ್ಠ ಎಂಬುದು ಎಲ್ಲರೊಳಗೂ ಮೊಳೆತು ಚಿಗುರಿ, ಹೆಮ್ಮರವಾಗಿದೆ. ನನ್ನಷ್ಟು ದುಃಖ, ಸಂಕಟ ಯಾರಿಗೂ ಇಲ್ಲ. ನನ್ನಂಥ ವಿಭಿನ್ನ ಯಾರೂ ಇಲ್ಲ ಎಂಬುವ ಮನೋಭಾವದವರೇ ಇಂದು ಹೆಚ್ಚಿದ್ದಾರೆ. ಇದು ಹೋಗಬೇಕು. ಸಮಾಜದ ಜತೆ ಎಲ್ಲರಳೊಗು ಬೆರೆತು ಒಂದಾಗಿ ಬದುಕಬೇಕಿದೆ’ ಎಂದು ಅವರು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು