ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನ ಖಾತ್ರಿ ಯಂತ್ರ ಬಳಕೆ: ಜಿಲ್ಲಾಧಿಕಾರಿ

Last Updated 1 ಫೆಬ್ರುವರಿ 2018, 10:32 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್ಲ ಮತಗಟ್ಟೆಗಳಲ್ಲಿಯೂ ವಿದ್ಯುನ್ಮಾನ ಮತಯಂತ್ರದ(ಇವಿಎಂ) ಜತೆಗೆ ಮತದಾನ ಖಾತರಿ ಯಂತ್ರಗಳನ್ನು(ವೋಟರ್‌ ವೇರಿಫೈಬಲ್‌ ಪೇಪರ್‌ ಆಡಿಟ್‌ ಟ್ರಯಲ್‌–ವಿವಿಪಿಎಟಿ) ಬಳಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಇಲ್ಲಿ ಬುಧವಾರ ತಿಳಿಸಿದರು.

ಈಗಾಗಲೇ ಈ ಯಂತ್ರಗಳು ಬಂದಿವೆ. ಅವುಗಳನ್ನು ಭದ್ರವಾಗಿ ಇಡಲಾಗಿದೆ. ಚುನಾವಣೆ ಆಯೋಗದಿಂದ ನಿರ್ದೇಶನ ಬಂದ ನಂತರ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಜಿಲ್ಲೆಯಲ್ಲಿ ಜನವರಿ 18 ರವರೆಗೆ 23,495 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಮತಪಟ್ಟಿಯಿಂದ ಹೆಸರು ಕೈಬಿಡಲು(ಮರಣ, ವಲಸೆ ಮೊದಲಾದ ಕಾರಣ) 14,998 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ತಿದ್ದುಪಡಿಗಾಗಿ 3,334 ಮತ್ತು ವರ್ಗಾವಣೆಗೆ (ನಮೂನೆ 8ಎ) 352 ಅರ್ಜಿಗಳು ಸಲ್ಲಿಕೆಯಾಗಿವೆ ಮಾಹಿತಿ ನೀಡಿದರು.

ವಿಧಾನಸಭೆ ಚುನಾವಣೆಗೆ ಜಿಲ್ಲಾಡಳಿತವು ಪೂರ್ವಸಿದ್ಧತೆ ಆರಂಭವಾಗಿದೆ. ಮತದಾರರ ಶಿಕ್ಷಣ ಮತ್ತು ಮತದಾನದಲ್ಲಿ ಪಾಲ್ಗೊಳ್ಳುವಿಕೆಯಡಿ (ಎಸ್‌ವಿಇಇಪಿ-ಸ್ವೀಪ್) ಕಚಟುವಟಿಕೆಗಳನ್ನು ನಡೆಸಲಾಗಿದೆ. ಶಾಲೆ–ಕಾಲೇಜುಗಳಲ್ಲಿ ರಸಪ್ರಶ್ನೆ, ಪ್ರಬಂಧ ಸ್ಪರ್ಧೆ, ಜನಸಂದಣಿ ಸ್ಥಳಗಲ್ಲಿ ಜಾಥಾ ಆಯೋಜನೆ, ಕರಪತ್ರಗಳ ವಿತರಣೆ ಕಾರ್ಯಕ್ರಮಗಳನ್ನು ಮಾಡಲಾಗಿದೆ. ಮತದಾರರ ಪಟ್ಟಿಗೆ ನೋಂದಾಯಿಸಲು ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಂದ ಅರ್ಜಿ ಸ್ವೀಕರಿಸಲು ಪ್ರಾಂಶುಪಾಲರಿಗೆ ತಿಳಿಸಲಾಗಿದೆ ಎಂದರು.

2011ರ ಜನಗಣತಿ ಪ್ರಕಾರ ಜಿಲ್ಲೆಯ ಜನಸಂಖ್ಯೆ 11,37,753 ಇತ್ತು. 2018ಕ್ಕೆ ಜನಸಂಖ್ಯೆ 11,36,044 ಇದೆ ಎಂದು ಅಂದಾಜಿಸಲಾಗಿದೆ. ಮತದಾರರ ಪ್ರಮಾಣ ಶೇ 79.43 ಇದೆ. ಪ್ರಸ್ತುತ ಲಿಂಗಾನುಪಾತ 1,005 ಇದೆ. ಪ್ರಸ್ತುತ ಜಿಲ್ಲೆಯಲ್ಲಿ 18 ವರ್ಷ ತುಂಬಿದವರ ಸಂಖ್ಯೆ 9,13,309 ಎಂದು ಅಂದಾಜಿಸಲಾಗಿದೆ. 18 ವರ್ಷ ತುಂಬಿದವರ ಜನಸಂಖ್ಯೆಗೆ ಅನುಗುಣವಾಗಿ ಮತದಾರರ ಪ್ರಮಾಣ ಶೇ 98.84 ಇದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ 1,170 ಮತಗಟ್ಟೆಗಳನ್ನು ಗುರುತಿಸಿ, ಭೌತಿಕವಾಗಿ ಪರಿಶೀಲಿಸಲಾಗಿದೆ. ಹಿಂದಿನ ಚುನಾವಣೆಯಲ್ಲಿ 1,168 ಮತಗಟ್ಟೆಗಳು ಇದ್ದವು. ಹಿಂದಿನ ಚುನಾವಣೆಯಲ್ಲಿ 149 ಅತಿಸೂಕ್ಷ್ಮ ಮತಗಟ್ಟೆಗಳು, (ನಕ್ಸಲ್‌ಪೀಡಿತ ಪ್ರದೇಶಗಳ 39 ಮತಗಟ್ಟೆಗಳು ಒಳಗೊಂಡಂತೆ), ಸೂಕ್ಷ್ಮ ಮತಗಟ್ಟೆಗಳು 226 ಇದ್ದವು. ಸಾಮಾನ್ಯ ಮತಗಟ್ಟೆಗಳು 795, ಮತಗಟ್ಟೆ ಹಂತದ ಅಧಿಕಾರಿಗಳ ಸಂಖ್ಯೆ 1,170 ಮತ್ತು ಮತಗಟ್ಟೆ ಹಂತದ ಏಜೆಂಟರು ಸಂಖ್ಯೆ 1,168 ಎಂದು ವಿವರ ನೀಡಿದರು.

ಮತದಾರರ ಪಟ್ಟಿ ಪರಿಷ್ಕರಣೆ ನಿಟ್ಟಿನಲ್ಲಿ ಬಿಎಲ್‌ಒ, ಕಂದಾಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಮನೆಮನೆ ಸಮೀಕ್ಷೆ ನಡೆಸಿದ್ದಾರೆ. ಚುನಾವಣೆಗೆ ಸುಮಾರು 6450 ಮತದಾನ ಸಿಬ್ಬಂದಿ ನೇಮಕಕ್ಕೆ ಕ್ರಮ ಕೈಗೊಳ್ಳಲಾಗಿದೆ. ಸದ್ಯದಲ್ಲಿ ಸಭೆ ಗರ್ಭಿಣಿಯರು, ಬಾಣಂತಿಯರು, ನಿವೃತ್ತಿಯಾಗುವವರು (ಚುನಾವಣೆ ಹೊತ್ತಿಗೆ) ವಿವರ ಪಡೆದು ಪಟ್ಟಿ ಮಾಡಲಾಗುವುದು. ಅವರನ್ನು ಚುನಾವಣೆ ಕರ್ತವ್ಯಕ್ಕೆ ನಿಯೋಜಿಸದಿರುವ ಬಗ್ಗೆ ಕ್ರಮ ವಹಿಸಲಾಗುವುದು. ಅಧಿಸೂಚನೆ ಪ್ರಕಟವಾದ ನಂತರ ಎಲ್ಲವೂ ಅಖೈರು ಆಗಲಿವೆ ಎಂದರು.

ಪೊಲೀಸ್ ಭದ್ರತೆ ನಿಟ್ಟಿನಲ್ಲಿ ಎಲ್ಲ ವ್ಯವಸ್ಥೆ ಕೈಗೊಳ್ಳಲಾಗುವುದು. ಹಿಂದಿನ ಚುನಾವಣೆಯಲ್ಲಿ ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆಯ (ಸಿಎಪಿಎಫ್‌) ಐದು ತುಕುಡಿಗಳನ್ನು ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳಿಗೆ ನಿಯೋಜಿಸಲಾಗಿದೆ. ಈ ಬಾರಿ 10 ತುಕಡಿಗಳನ್ನು ನಿಯೋಜಿಸುವಂತೆ ಕೋರಲಾಗುವುದು ಎಂದರು.

ಮತದಾನ ಕೇಂದ್ರಗಳಲ್ಲಿ ಮೂಲಸೌಕರ್ಯಗಳನ್ನು ಒದಗಿಸಲು ಕ್ರಮ ವಹಿಸಲಾಗಿದೆ. 1,130 ಕಡೆ ರ್‌್ಯಾಂಪ್‌ ವ್ಯವಸ್ಥೆ ಮಾಡಬೇಕಿದೆ. ಕೆಲವು ಕಡೆ ರ್‌್ಯಾಂಪ್‌ ರಿಪೇರಿ ಮಾಡಬೇಕಿದೆ. ಈ ಬಾರಿ ಅಶಕ್ತ ಅಂಗವಿಕಲರಿಗೆ ಮತದಾನ ಕೇಂದ್ರಕ್ಕೆ ತೆರಳಲು ಗಾಲಿ ಕುರ್ಚಿ ವ್ಯವಸ್ಥೆ ಮಾಡುವಂತೆ ಚುನಾವಣಾ ಆಯೋಗ ಸೂಚನೆ ನೀಡಿದೆ. ಅದರಂತೆ ಅಂಗವಿಕಲ ಮತದಾರರ ಪಟ್ಟಿ ಮಾಡಿ ಅಗತ್ಯ ಇರುವ ಕಡೆಗಳಲ್ಲಿ ಗಾಲಿ ಕುರ್ಚಿ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ವಿಧಾನಸಭಾ ಕ್ಷೇತ್ರಗಳು, ಮತದಾರರ ವಿವರ (2017 ನವೆಂಬರ್‌ 30ಕ್ಕೆ)
ಕ್ಷೇತ್ರ ಪುರುಷರು ಮಹಿಳೆಯರು ಒಟ್ಟು
ಶೃಂಗೇರಿ 79,497 80702 160199
ಮೂಡಿಗೆರೆ 81,889 83318 165207
ಚಿಕ್ಕಮಗಳೂರು 1,03,717 1,03,492 2,07,209
ತರೀಕೆರೆ 90,304 87,329 1,77,633
ಕಡೂರು 97,600 94,908 1,92,508
ಒಟ್ಟು 4,53,007 4,49,749 9,02,756

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT