ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಟ್ಟದಪುರ: ಬೆಟ್ಟದ ಅಭಿವೃದ್ಧಿಗೆ ಬಡಿದ ‘ಸಿಡಿಲು’

ಮಲ್ಲಿಕಾರ್ಜುನಸ್ವಾಮಿ ಸನ್ನಿಧಿಯಲ್ಲಿ ಸಮಸ್ಯೆಗಳ ಆಗರ
Last Updated 28 ನವೆಂಬರ್ 2021, 4:35 IST
ಅಕ್ಷರ ಗಾತ್ರ

ಬೆಟ್ಟದಪುರ: ಐತಿಹಾಸಿಕ ಹಿನ್ನೆಲೆಯುಳ್ಳ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟವು ಅಭಿವೃದ್ಧಿ ಕಾಣದೆ ಸಮಸ್ಯೆಗಳ ಆಗರವಾಗಿದೆ.

ಪ್ರಮುಖ ವೀಕ್ಷಣಾ ತಾಣವಾಗಿರುವ ಬೆಟ್ಟವು ಶಂಕುವಿನ ಆಕೃತಿಯಲ್ಲಿದ್ದು, 4,389 ಅಡಿ ಎತ್ತರವಿದೆ. ಜಿಲ್ಲೆಯಲ್ಲಿಯೇ ಅತಿ ಎತ್ತರವಾದ ಬೆಟ್ಟ ಎಂಬ ಖ್ಯಾತಿಯನ್ನೂ ಪಡೆದಿದೆ. ಆದರೆ, ಇಲ್ಲಿ ಸಮಸ್ಯೆಗಳ ಸರಮಾಲೆಯೇ ಇದೆ.

ಬೆಟ್ಟದ ಕಲ್ಲಿನ ಮೆಟ್ಟಿಲುಗಳು ಜರುಗಿವೆ, ಅಕ್ಕಪಕ್ಕ ಗಿಡಗಳು ಬೆಳೆದು ಭಕ್ತರಿಗೆ ತೊಂದರೆಯಾಗುತ್ತಿದೆ. ಪ್ರವೇಶದ್ವಾರದ ಗೋಪುರದಲ್ಲಿ ನಿರ್ಮಿಸಿದ ಶಿಲ್ಪಗಳು ಶಿಥಿಲಗೊಂಡಿವೆ. ಬೆಟ್ಟ ಏರುವ ಮಧ್ಯಭಾಗದಲ್ಲಿ ತೋರಣ ಕಲ್ಲುಗಳು ಹಾಗೂ ಗೋಪುರಗಳು ಅಪಾಯದ ಅಂಚಿನಲ್ಲಿವೆ. ಬೆಟ್ಟದ ತುದಿಯಲ್ಲಿರುವ ಗಿರಿಜಾ ಮಲ್ಲಯ್ಯ ದೇವಾಲಯವು ಸಂಪೂರ್ಣ
ಶಿಥಿಲಾವಸ್ಥೆಯಲ್ಲಿದೆ.

ದೇವಾಲಯಕ್ಕೆ ಹೊಂದಿ ಕೊಂಡಂತಿರುವ ಪಾಠಶಾಲೆ ಕೊಠಡಿ ಚಾವಣಿ ಕುಸಿದು ಬಿದ್ದಿರುವುದರಿಂದ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ದೇವಾಲಯದ ಸುತ್ತ ಪ್ರವಾಸಿಗರು ಬರಹಗಳನ್ನು ಕೆತ್ತಿ ಗೋಡೆಗಳ ಅಂದಗೆಡಿಸಿದ್ದಾರೆ. ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ ಎಂಬುದು ಭಕ್ತರ ಆರೋಪವಾಗಿದೆ.

‘ಪ್ರತಿ ವರ್ಷ ಗ್ರಾಮದಲ್ಲಿ ಆಚರಿಸುವ ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವ ಮತ್ತು ಪಂಜಿನ ಮೆರವಣಿಗೆಗೆ ಹೊರ ಜಿಲ್ಲೆಗಳಿಂದ ಭಕ್ತಾದಿಗಳು ಬೆಟ್ಟಕ್ಕೆ ಬರುತ್ತಾರೆ. ಮೂಲಸೌಕರ್ಯಗಳು ಸಹ ಇಲ್ಲಿ ಕಾಣಸಿಗುವುದಿಲ್ಲ. ಗರ್ಭಗುಡಿ ಚಾವಣಿ ಶಿಥಿಲವಾಗಿದ್ದು, ಜೀವ ಭಯದಲ್ಲಿ ಪೂಜೆ ಸಲ್ಲಿಸುವ ಸ್ಥಿತಿಯಿದೆ’ ಎಂದು ಅರ್ಚಕ ಕೃಷ್ಣಪ್ರಸಾದ್ ಅಳಲು ತೋಡಿಕೊಂಡರು.

2011ರಲ್ಲಿ ಬೆಟ್ಟಕ್ಕೆ ಮೂಲಸೌಕರ್ಯ ಹಾಗೂ ರಸ್ತೆ ಮಾಡಿಸುವ ಉದ್ದೇಶದಿಂದ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟದ ಸಂವರ್ಧನ ಟ್ರಸ್ಟ್ ಸಹ ಸ್ಥಾಪನೆಯಾಗಿತ್ತು. ಈ ಟ್ರಸ್ಟ್‌ನಿಂದ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಗೆ ಮನವಿ ಸಲ್ಲಿಸಲಾಗಿತ್ತು. ಆದರೆ, ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಬೆಟ್ಟದ ಶಿಲ್ಪಗಳು, ಗೋಪುರಗಳಿಗೂ ಒಂದೊಂದು ಇತಿಹಾಸವಿದೆ, ಅವುಗಳನ್ನು ಸಂರಕ್ಷಿಸುವ ಕೆಲಸ
ಆಗಬೇಕಿದೆ.

‘ಬೆಟ್ಟದ ಅಭಿವೃದ್ಧಿಗೆ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ರಚನೆ ಆಗಬೇಕಿದೆ. ‘ಬಿ’ ಗ್ರೇಡ್ ದೇವಾಲಯವಾದ್ದರಿಂದ ತಹಶೀಲ್ದಾರ್‌ ಅವರೊಂದಿಗೆ ಚರ್ಚಿಸಿ ಕಾರ್ಯನಿರ್ವಹಣಾಧಿಕಾರಿ ನೇಮಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ’ ಎಂದು ಉಪ ತಹಶೀಲ್ದಾರ್ ಶಶಿಧರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT