ಭಾನುವಾರ, ಸೆಪ್ಟೆಂಬರ್ 19, 2021
23 °C
ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಜ್ಯೋತಿ ಹೇಳಿಕೆ

ಅಸಾಧ್ಯವಾದುದನ್ನು ಸಾಧಿಸಲು ಭಗೀರಥ ಸ್ಪೂರ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಅಸಾಧ್ಯವಾದುದು ಯಾವುದೂ ಇಲ್ಲ. ಮನಸ್ಸು ಮಾಡಿದರೆ ಎಲ್ಲವನ್ನೂ ಸಾಧಿಸಬಹುದು ಎಂಬ ಸಂದೇಶವನ್ನು ಭಗೀರಥ ಮಹರ್ಷಿಗಳು ಸಮಾಜಕ್ಕೆ ಸಾರಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಜ್ಯೋತಿ ತಿಳಿಸಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಗೀರಥರು ಸಾವಿರ ವರ್ಷ ತಪಸ್ಸು ಮಾಡಿದ್ದರು ಎಂಬ ಪ್ರತೀತಿ ಇದೆ. ಒಂದು ಕಾರ್ಯ ಸಾಧನೆಗಾಗಿ ಎಲ್ಲವನ್ನೂ ತ್ಯಜಿಸಿ ಸಾವಿರ ವರ್ಷ ನಿರಂತರವಾಗಿ ಪ್ರಯತ್ನ ಮಾಡುವುದು ಮನುಷ್ಯನ ಸಾಧನೆಗೆ ರೂಪಕವಾಗಿ ಪರಿಣಮಿಸಿದೆ. ಸಮಾಜಮುಖಿಯಾಗಿ ಕೆಲಸ ಮಾಡಲು, ಅಂದುಕೊಂಡಿದ್ದನ್ನು ಸಾಧಿಸಲು ಯುವಕರಿಗೆ ಭಗೀರಥರ ಪ್ರಯತ್ನ ಪ್ರೇರಣೆಯಾಗಬೇಕು ಎಂದು ಹೇಳಿದರು.

‘ಸರ್ಕಾರದ ವತಿಯಿಂದ ಇಂತಹ ಜಯಂತಿಗಳು ಆಚರಿಸಬೇಕು. ಇಲ್ಲವಾದಲ್ಲಿ ಮಹಾಪುರಷರನ್ನು ಮರೆತುಬಿಡುತ್ತೇವೆ. ಇತ್ತೀಚಿಗೆ ಓದಿನ ಹವ್ಯಾಸ ನಮಗೆ ಕಡಿಮೆಯಾಗಿಬಿಟ್ಟಿದೆ. ಜಯಂತಿಗಳು ಆಗುತ್ತಿದ್ದರೆ ಮಹಾಪುರುಷರ ಸ್ಮರಣೆ ಸಾಧ್ಯವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ಸಮಾಜದಲ್ಲಿ ಮೌಲ್ಯಗಳು ಕಡಿಮೆಯಾಗುತ್ತಿರುವ ಈ ಸಂದರ್ಭದಲ್ಲಿ ಇಂತಹ ಮಹನೀಯರ ಸಂದೇಶಗಳನ್ನು ಕೇಳಿದಾಗ ಹೊಸ ಚೈತನ್ಯ ಬಂದಂತೆ ಆಗುತ್ತದೆ. ಇನ್ನಷ್ಟು ಸಾಧನೆಗಳನ್ನು ಮಾಡಲು ಭರವಸೆ ಮತ್ತು ಧೈರ್ಯ ಬರುತ್ತದೆ ಎಂದರು.

‘ಭಗೀರಥ ಮಹರ್ಷಿ ಮಾಡಿದ ಸಾಧನೆ ಒಂದು ಸಮಾಜಕ್ಕೆ ಸೀಮಿತವಲ್ಲ. ಇಡಿ ಮನುಷ್ಯ ಕುಲಕ್ಕೆ ಅದು ಸಲ್ಲುವಂತದ್ದು. ಪುರುಷರು ಅಥವಾ ಮಹಿಳೆಯರು ಸಮಾಜದ ಒಳಿತಿಗೆ, ಮಕ್ಕಳ ಭವಿಷ್ಯಕ್ಕಾಗಿ ಸಾಧನೆ ಮಾಡಬೇಕು. ಸಮಾಜಮುಖಿಯಾದ ಪ್ರಯತ್ನ ಯಾವತ್ತೂ ಸೋಲುವುದಿಲ್ಲ ಎಂಬುದನ್ನು ಹಲವು ನಿದರ್ಶನಗಳಲ್ಲಿ ನೋಡಿದ್ದೇವೆ’ ಎಂದು ಕಿವಿಮಾತು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಜಿ. ಅನುರಾಧಾ ಮಾತನಾಡಿ, ಯಾರಾದರೂ ಸತತ ಪ್ರಯತ್ನ ಮಾಡುತ್ತಿದ್ದರೆ ಅದನ್ನು ಭಗೀರಥ ಪ್ರಯತ್ನ ಎನ್ನುತ್ತಾರೆ. ಎಲ್ಲರಿಗೂ ಭಗೀರಥ ಪ್ರಯತ್ನ ಸ್ಫೂರ್ತಿಯಾಗಿದೆ. ನಾವು ಏನಾದರೂ ಸಾಧಿಸಲು ಬಯಸಿದರೆ ಭಗೀರಥರನ್ನು ಮಾದರಿಯಾಗಿಟ್ಟುಕೊಂಡು ಪ್ರಯತ್ನ ಮುಂದುವರಿಸಬೇಕು ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಚನ್ನಪ್ಪ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಆರ್.ರಾಜು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು