ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂವರು ಬೈಕ್‌ ಕಳ್ಳರ ಬಂಧನ

Last Updated 23 ಜೂನ್ 2019, 15:40 IST
ಅಕ್ಷರ ಗಾತ್ರ

ಮೈಸೂರು: ದುಬಾರಿ ಬೆಲೆಯ ಬೈಕ್‌ಗಳನ್ನು ಕಳವು ಮಾಡಿ, ಮಾರಾಟ ಮಾಡುತ್ತಿದ್ದ ಮೂವರು ದ್ವಿಚಕ್ರ ವಾಹನ ಕಳ್ಳರನ್ನು ನಗರ ಅಪರಾಧ ಪತ್ತೆ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಕನಕಪುರದ ರಮೇಶ್‌ಕುಮಾರ್, ಚೇತನ್‌, ಶಿವಪ್ರಶಾಂತ್ ಬಂಧಿತರು.

ನಂಬರ್‌ ಪ್ಲೇಟ್‌ ಇಲ್ಲದ ಬುಲೆಟ್‌ ಹಾಗೂ ಅಪಾಚಿ ಬೈಕ್‌ಗಳನ್ನು ಕಳವು ಮಾಡಿ, ನಗರದ ವಸಂತ ಮಹಲ್‌ ಬಳಿ ಮಾರಾಟ ನಡೆಸುವ ಯತ್ನದಲ್ಲಿದ್ದ ಸಂದರ್ಭ, ಖಚಿತ ಮಾಹಿತಿ ಮೇರೆಗೆ ಅಪರಾಧ ದಳದ ಸಿಬ್ಬಂದಿ ದಾಳಿ ನಡೆಸಿದ್ದಾರೆ.

ನಾಲ್ವರಲ್ಲಿ ಮೂವರು ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ಮತ್ತೊಬ್ಬ ಪರಾರಿಯಾಗಿದ್ದಾನೆ. ಪರಾರಿಯಾದ ಆರೋಪಿ ಬಗ್ಗೆ ಮಾಹಿತಿ ಸಿಕ್ಕಿದ್ದು, ಆತನ ಬಂಧನಕ್ಕೂ ಜಾಲ ಬೀಸಲಾಗಿದೆ. ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದರು.

ಇಬ್ಬರ ಬಂಧನ: ಗಾಂಜಾ ವಶ|
ನಗರದ ಮಂಡಿ ಮೊಹಲ್ಲಾದ ಸುಲ್ತಾನ್ ಪಾರ್ಕ್‌ ರಸ್ತೆಯ ಖಾಲಿ ಮಳಿಗೆಯೊಂದರಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಆರ್ಥಿಕ ಮತ್ತು ಮಾದಕದ್ರವ್ಯ ಅಪರಾಧ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಶಾಂತಿ ನಗರದ ಫೈರೋಜ್ ಖಾನ್ (28,) ಮಂಡಿ ಮೊಹಲ್ಲಾದ ರಫೀಕ್ ಅಹಮದ್ (56) ಬಂಧಿತರು.

ಈ ಇಬ್ಬರು ಬಂಧಿತ ಆರೋಪಿಗಳಿಂದ 187 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂಬುದು ಪೊಲೀಸ್ ಮೂಲಗಳಿಂದ ಗೊತ್ತಾಗಿದೆ.

ವರದಕ್ಷಿಣೆ ಕಿರುಕುಳ: ದೂರು
ವರದಕ್ಷಿಣೆ ಕಿರುಕುಳ ನೀಡಲಾಗಿದೆ ಎಂದು ಸಿಮ್ರಾನ್‌, ಜರೀನ್‌ ತಾಜ್ ಎಂಬ ಇಬ್ಬರು ನಗರದ ಮಹಿಳಾ ಠಾಣೆಗೆ ತಮ್ಮ ಪತಿ ಹಾಗೂ ಆತನ ಮನೆಯವರ ವಿರುದ್ಧ ದೂರು ನೀಡಿದ್ದಾರೆ.

ಸಿಮ್ರಾನ್‌ ‘ತಾನು ಗರ್ಭಿಣಿಯಿದ್ದು ಆಸ್ಪತ್ರೆಗೆ ತೋರಿಸುತ್ತಿಲ್ಲ ಎಂದು ದೂರಿದ್ದಾರೆ. ಹೆಚ್ಚಿನ ವರದಕ್ಷಿಣೆ ತಂದುಕೊಡದಿದ್ದರೆ ಬೇರೊಬ್ಬಳನ್ನು ಮದುವೆಯಾಗುವುದಾಗಿ ಪತಿ ಹಿಂಸೆ ನೀಡಿದ್ದಾರೆ’ ಎಂದು ದೂರು ದಾಖಲಿಸಿದ್ದಾರೆ.

ಜರೀನ್‌ ತಾಜ್‌ ‘ನನ್ನ ಒಡವೆಗಳನ್ನು ಕಿತ್ತುಕೊಂಡು ಮಾರಾಟ ಮಾಡಿ ಪತಿ ಆಟೊ ಖರೀದಿಸಿದ್ದರು. ನಂತರ ಆಟೊ ಮಾರಾಟ ಮಾಡಿದ್ದಾರೆ. ಇದನ್ನು ಪ್ರಶ್ನಿಸಿದರೆ ಮಾನಸಿಕ, ದೈಹಿಕ ಹಿಂಸೆ ನೀಡುತ್ತಿದ್ದಾರೆ. ಹಲ ಬಾರಿ ತವರಿನಿಂದ ಹಣ ತಂದುಕೊಟ್ಟರೂ; ವರದಕ್ಷಿಣೆಗಾಗಿ ಮತ್ತೆ ಮತ್ತೆ ಪೀಡಿಸುತ್ತಿದ್ದಾರೆ. ಈಚೆಗೆ ಕೊಲೆ ಬೆದರಿಕೆ ಸಹ ಹಾಕಿದ್ದಾರೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ದೌರ್ಜನ್ಯದ ದೂರು
16 ವರ್ಷಗಳಿಂದ ವಾಸವಿದ್ದ ಗುಡಿಸಲಿನ ಗೋಡೆಯನ್ನು ದೌರ್ಜನ್ಯದಿಂದ ಕೆಳಗುರುಳಿಸಿದ್ದಾರೆ ಎಂದು ಜಯಮ್ಮ ಎಂಬಾಕೆ ಮೇಟಗಳ್ಳಿ ಪೊಲೀಸ್ ಠಾಣೆಗೆ ಲಕ್ಷ್ಮಮ್ಮ ಎಂಬುವರ ವಿರುದ್ಧ ದೂರು ನೀಡಿದ್ದಾರೆ.

ಪರಿಶಿಷ್ಟ ಜಾತಿಯ ನನ್ನ ಮೇಲೆ ಸವರ್ಣೀಯರು ದೌರ್ಜನ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ ಎಂದು ಮೇಟಗಳ್ಳಿ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT