ಬೈಕ್‌ ಕಳ್ಳತನದ ಬೃಹತ್ ಜಾಲ ಪತ್ತೆ

7
ಹಳೆಯ ಹಿರೋ ಹೊಂಡಾ ಬೈಕ್‌ಗಳೇ ಇವರ ಗುರಿ

ಬೈಕ್‌ ಕಳ್ಳತನದ ಬೃಹತ್ ಜಾಲ ಪತ್ತೆ

Published:
Updated:

ಮೈಸೂರು: ನಗರದಲ್ಲಿ ಹೆಚ್ಚಿದ ಬೈಕ್‌ ಕಳ್ಳತನಗಳ ಜಾಲವೊಂದನ್ನು ವಿಜಯನಗರ ಪೊಲೀಸರು ಪತ್ತೆ ಹಚ್ಚಿದ್ದಾರೆ. ಶ್ರೀನಿವಾಸ (25) ಹಾಗೂ ದಿನೇಶ (26) ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿ, ಇವರಿಂದ 8 ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿಗಳು 30ಕ್ಕೂ ಹೆಚ್ಚಿನ ಬೈಕ್‌ಗಳನ್ನು ಕಳವು ಮಾಡಿರುವುದಾಗಿ ತಿಳಿಸಿದ್ದು, ಇವುಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.‌ ಹಳೆಯ ಹೀರೊ ಹೊಂಡಾ ಸ್ಪೆಂಡ್ಲರ್ ಹಾಗೂ ಫ್ಯಾಷನ್‌ ಬೈಕ್‌ಗಳನ್ನಷ್ಟೇ ಸುಲಭವಾಗಿ ಕಳ್ಳತನ ಮಾಡುವ ತಂತ್ರಗಾರಿಕೆಯನ್ನು ಆರೋಪಿಗಳು ರೂಢಿಸಿಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ.

ಏನಿದು ಪ್ರಕರಣ?
ನಗರದಲ್ಲಿ ಕಳೆದ ಒಂದೂವರೆ ತಿಂಗಳಿನಲ್ಲಿ ಬೈಕ್‌ ಕಳ್ಳತನಗಳ ಪ್ರಕರಣಗಳು ಹೆಚ್ಚಾಗಿದ್ದವು. ಇವುಗಳ ತಡೆಗೆ ಮುಂದಾದ ಪೊಲೀಸರು ಹೆಚ್ಚಿನ ಪಾರ್ಕಿಂಗ್ ಇರುವ ಕಡೆ ಮಫ್ತಿನಲ್ಲಿ ಹುಡುಕಾಟ ನಡೆಸತೊಡಗಿದರು. ಈ ವೇಳೆ ಬೈಕ್ ಕಳ್ಳತನಕ್ಕೆ ಯತ್ನಿಸಿದ ಈ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು.

ವಿಚಾರಣೆ ವೇಳೆ ಆರೋಪಿಗಳು ಕಳೆದ 6 ತಿಂಗಳಲ್ಲಿ 30ಕ್ಕೂ ಅಧಿಕ ಬೈಕ್‌ಗಳನ್ನು ಕಳವು ಮಾಡಿ, ಮಂಡ್ಯ, ತುಮಕೂರು, ಚಾಮರಾಜನಗರ, ಹಾಸನ, ಕೆ.ಆರ್.ಪೇಟೆ ಭಾಗಗಳ ಗ್ರಾಮಾಂತರ ಪ್ರದೇಶಗಳ ಜನರಿಗೆ ಬೈಕ್‌ನ ದಾಖಲೆಗಳು ಕಳೆದು ಹೋಗಿವೆ ಎಂದು ನಂಬಿಸಿ ₹ 5ರಿಂದ ₹ 10 ಸಾವಿರಕ್ಕೆ ಮಾರಾಟ ಮಾಡಿದ್ದೇವೆ ಎಂದು ತಿಳಿಸಿದ್ದಾರೆ. ಸದ್ಯ, ಪೊಲೀಸರು 8 ಬೈಕ್‌ಗಳನ್ನಷ್ಟೇ ವಶಕ್ಕೆ ತೆಗೆದುಕೊಂಡಿದ್ದು, ಇನ್ನುಳಿದ ಬೈಕ್‌ಗಳ ಶೋಧ ನಡೆಸುತ್ತಿದ್ದಾರೆ.‌

ಕಳ್ಳತನ ಹೇಗೆ?
ಆರೋಪಿಗಳು ಹಳೆಯ ಹೀರೊ ಹೊಂಡಾ ಕಂಪೆನಿಯ ಸ್ಪೆಂಡ್ಲರ್, ಸ್ಪೆಂಡ್ಲರ್ ಪ್ಲಸ್, ಸ್ಪೆಂಡ್ಲರ್ ಪ್ರೊ ಬೈಕ್‌ಗಳನ್ನಷ್ಟೇ ಕಳವು ಮಾಡುತ್ತಿದ್ದರು. ಕೀ ತೆರೆಯುವ ಜಾಗ ಸಡಿಲಗೊಂಡಿರುವ ಹಳೆಯ ಬೈಕ್‌ಗಳಲ್ಲಿ ‘ಮಾಸ್ಟರ್ ಕೀ’ ಎಂಬ ಒಂದು ಸಾಧನ ಬಳಸಿ ಇವರು ಸುಲಭವಾಗಿ ತೆರೆಯುತ್ತಿದ್ದರು. ಹಳೆಯ ಬೈಕ್‌ ಹೊಂದಿರುವ ಸಾರ್ವಜನಿಕರು ತಮ್ಮ ಬೈಕ್‌ಗಳ ಲಾಕಿಂಗ್ ವ್ಯವಸ್ಥೆಯನ್ನು ಆಗಾಗ್ಗೆ ಬದಲಿಸಿಕೊಳ್ಳಬೇಕು ಎಂದು ಹೆಸರು ಹೇಳಲಿಚ್ಛಿಸದ ಪೊಲೀಸ್‌ ಅಧಿಕಾರಿಯೊಬ್ಬರು ಮನವಿ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !