ಶುಕ್ರವಾರ, ಮೇ 20, 2022
19 °C
ಕರ್ನಾಟಕವನ್ನು ಎಟಿಎಂ ಆಗಿ ಬಳಸಿಕೊಳ್ಳಲು ಬಿಡುವುದಿಲ್ಲ: ಅರುಣ್ ಸಿಂಗ್

‘ಕಾಂಗ್ರೆಸ್ ನಾಯಕತ್ವರಹಿತ ಪಕ್ಷ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ದೇಶ ಮತ್ತು ರಾಜ್ಯದಲ್ಲಿ ನಾಯಕತ್ವರಹಿತ ಪಕ್ಷವಿದ್ದರೆ ಅದು ಕಾಂಗ್ರೆಸ್ ಮಾತ್ರ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್ ಟೀಕಿಸಿದರು.

ಪಕ್ಷದ ಸಂಘಟನಾತ್ಮಕ ಸಭೆಗಾಗಿ ಇಲ್ಲಿಗೆ ಬಂದಿರುವ ಅವರು ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದರು.

'ರಾಜಸ್ಥಾನ ಹಾಗೂ ಛತ್ತೀಸಗಡದಲ್ಲಿ ಮಾತ್ರ ಕಾಂಗ್ರೆಸ್ ಅಧಿಕಾರದಲ್ಲಿದೆ. ಉಳಿದೆಲ್ಲ ರಾಜ್ಯಗಳಲ್ಲೂ ತನ್ನ ಅಸ್ತಿತ್ವಕ್ಕಾಗಿ ಪರದಾಡುತ್ತಿದೆ. ನಾಯಕತ್ವದ ಕೊರತೆಯಿಂದ ಆ ಪಕ್ಷದಲ್ಲಿ ಸಂಪೂರ್ಣ ಗೊಂದಲಮಯ ಸ್ಥಿತಿ ಇದೆ. ಅಂಥವರಿಗೆ ನಮ್ಮ ಸರ್ಕಾರದ ಬಗ್ಗೆ ಮಾತನಾಡಲು ಯಾವುದೇ ವಿಷಯಗಳಿಲ್ಲ ಹಾಗೂ ನೈತಿಕತೆಯೂ ಇಲ್ಲ. ಕರ್ನಾಟಕದಲ್ಲೂ ಸಂಪೂರ್ಣ ನೆಲ ಕಚ್ಚಿದೆ’ ಎಂದು ವಾಗ್ದಾಳಿ ನಡೆಸಿದರು.

‘ಅಧಿಕಾರದಲ್ಲಿದ್ದಾಗ ಕರ್ನಾಟಕವನ್ನು ಕಾಂಗ್ರೆಸ್‌ನವರು ಎಟಿಎಂನಂತೆ ಬಳಸಿಕೊಂಡಿದ್ದರು. ಈಗ ಮತ್ತದೇ ಗುಂಗಿನಲ್ಲಿದ್ದಾರೆ. ಅಧಿಕಾರಕ್ಕಾಗಿ ‌ಹವಣಿಸುತ್ತಿದ್ದಾರೆ. ಆದರೆ, ಯಾವುದೇ ಕಾರಣಕ್ಕೂ ನಾವು ಕರ್ನಾಟಕವನ್ನು ಎಟಿಎಂ ಆಗಿ ಮಾಡಿಕೊಳ್ಳಲು ಬಿಡುವುದಿಲ್ಲ’ ಎಂದು ಗುಡುಗಿದರು.

ಪರಿವಾರ ಸಂಪ್ರದಾಯವಿಲ್ಲ:‘ಕಾಂಗ್ರೆಸ್, ಎನ್‌ಸಿಪಿ, ಸಮಾಜವಾದಿ ಪಕ್ಷ ಸೇರಿದಂತೆ ಬಹುತೇಕ ಪಕ್ಷಗಳಲ್ಲಿ ಪರಿವಾರದ ನಾಯಕತ್ವದ ಹಾಗೂ ಅವರಿಗೆ ಮಣೆ ಹಾಕುವ ಸಂಪ್ರದಾಯವಿದೆ. ಆದರೆ, ಬಿಜೆಪಿಯಲ್ಲಿ ಅಂತಹ ಯಾವುದೇ ಸಂಪ್ರದಾಯ‌ ಇಲ್ಲ’ ಎಂದರು.

ಕಾಂಗ್ರೆಸ್ ನೆಲ ಕಚ್ಚಿಸುತ್ತೇವೆ: ‘ಡಬಲ್ ಎಂಜಿನ್ ಸರ್ಕಾರಗಳ ಬಗ್ಗೆ ಉತ್ತಮ ಅಭಿಪ್ರಾಯವಿದೆ. ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಬಸವರಾಜ ಬೊಮ್ಮಾಯಿ ಕಾರ್ಯನಿ ರ್ವಹಿಸುತ್ತಿದ್ದಾರೆ. ಈ ನಾಯಕತ್ವದಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಅನ್ನು ನೆಲ ಕಚ್ಚುವಂತೆ ಮಾಡುತ್ತೇವೆ’ ಎಂದರು.

‘‌ಕಾಂಗ್ರೆಸ್ ಪಕ್ಷವು ಜಾತಿ- ಧರ್ಮವನ್ನು ಒಡೆಯುವ ಕಾರ್ಯದಲ್ಲಿ ತೊಡಗಿದೆ. ಹಿಜಾಬ್ ವಿವಾದವನ್ನು ಬೆಂಬಲಿಸಿದವರೆ ಕಾಂಗ್ರೆಸ್ಸಿಗರು.‌ ಸಿದ್ದರಾಮಯ್ಯ ಸೇರಿದಂತೆ ಅನೇಕ ನಾಯಕರು ಎಸ್‌ಡಿಪಿಐ, ಪಿಎಫ್ಐ ಮೊದಲಾದ ಸಂಘಟನೆಗಳಿಗೆ ಬೆಂಬಲ‌ ಕೊಡುತ್ತಾ ಬಂದಿದ್ದಾರೆ’ ಎಂದು ಆರೋಪಿಸಿದರು.

‘ನಮ್ಮ ಸರ್ಕಾರ ಸೂಕ್ಷ್ಮ ವಿಷಯಗಳನ್ನು ಕಾನೂನು ಚೌಕಟ್ಟಿನಲ್ಲಿ ಸಮರ್ಥವಾಗಿ ನಿಭಾಯಿಸಿದೆ' ಎಂದು ಪ್ರತಿಕ್ರಿಯಿಸಿದರು.

ಮಹದಾಯಿ ಚಿಂತಿಸಬೇಡಿ: ‘ಮಹ ದಾಯಿ ವಿವಾದ ಅಂತರರಾಜ್ಯ ಹಾಗೂ ದೊಡ್ಡದಾದ ವಿಷಯ ಆಗಿರುವುದರಿಂದ ಅದನ್ನು ಸೂಕ್ಷ್ಮವಾಗಿ ನಿಭಾಯಿಸಲಾಗುತ್ತಿದೆ.
ಆದಷ್ಟು ಬೇಗ ವಿವಾದಕ್ಕೆ ಪರಿಹಾರ ಸಿಗಲಿದೆ. ನೀವು (ಮಾಧ್ಯಮದವರು) ಚಿಂತಿಸಬೇಡಿ’ ಎಂದು ಅರುಣ್‌ ಸಿಂಗ್‌ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು