ಭಾನುವಾರ, ಸೆಪ್ಟೆಂಬರ್ 26, 2021
25 °C

ಅರುಣ್‌ ಸಿಂಗ್‌ ಬಂದಿರುವುದು ಹಣ ಸಂಗ್ರಹಕ್ಕೆ: ಕುಮಾರಸ್ವಾಮಿ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಬಿಜೆಪಿ ಉಸ್ತುವಾರಿ ಅರುಣ್‌ಸಿಂಗ್ ರಾಜ್ಯಕ್ಕೆ ಬಂದಿದ್ದು ಹಣ ಸಂಗ್ರಹಕ್ಕೆ ಮಾತ್ರ. ಹಣ ವಸೂಲಿಗಾಗಿ ಅವರು ಆಗಾಗ್ಗೆ ರಾಜ್ಯಕ್ಕೆ ಬರುತ್ತಿರುತ್ತಾರೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.

‘ಅವರು ಬಂದು ಕೇವಲ ಸೂಟ್‌ಕೇಸ್‌ ತೆಗೆದುಕೊಂಡರೆ ಹೋದರೆ ಸಾಲದು. ರಾಜ್ಯದ ಯೋಜನೆಗಳ ಕುರಿತೂ ಮಾತನಾಡಬೇಕು. ಜೆಡಿಎಸ್‌ನ್ನು ಮುಳುಗುವ ಹಡಗು ಎಂದು ಲಘುವಾಗಿ ಹೇಳಿದ್ದಾರೆ. ಆದರೆ, ಜೆಡಿಎಸ್‌ನ ‘ಫ್ಯೂಸ್‌’ ತೆಗೆಯಲು ಯಾರಿಂದಲೂ ಸಾಧ್ಯವಿಲ್ಲ. ಕೇಂದ್ರದಿಂದ ಬರುವ ಇಂತಹ ದಲ್ಲಾಳಿಗಳಿಗೆ ರಾಜ್ಯದ ನಾಯಕರು ವಾಸ್ತವ ಸ್ಥಿತಿಯನ್ನು ಮನದಟ್ಟು ಮಾಡಿಸಬೇಕು’ ಎಂದು ಇಲ್ಲಿ ಬುಧವಾರ ಸುದ್ದಿಗಾರರಿಗೆ ಹೇಳಿದರು.

ಮೇಕೆದಾಟು ಯೋಜನೆ ಸೇರಿದಂತೆ ಬಹುತೇಕ ಯೋಜನೆಗಳನ್ನು ಜಾರಿಗೊಳಿಸದ ರಾಜ್ಯ ಸರ್ಕಾರದ ಸಚಿವರಿಗೆ ಮೂಳೆಗಳೇ ಇಲ್ಲ. ಎಂಜಿನ್ ಕೆಟ್ಟಿತೆಂದು ನಾಯಕತ್ವ ಬದಲಾವಣೆ ಮೂಲಕ ಮತ್ತೊಂದು ಎಂಜಿನ್ ಜೋಡಿಸಿದ್ದಾರೆ. ಆದರೆ, ಬೋಗಿಗಳೆಲ್ಲ ಕೊಳೆತಿವೆ. ಇಂತಹವರಿಂದ ಏನನ್ನು ನಿರೀಕ್ಷಿಸಲು ಸಾಧ್ಯ ಎಂದು ಪ್ರಶ್ನಿಸಿದರು.

ಎಚ್.ಡಿ.ದೇವೇಗೌಡ ಅವರು ಬಸವರಾಜ ಬೊಮ್ಮಾಯಿ ಅವರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ ಎಂಬುದು ಸುಳ್ಳು. ಇನ್ನೂ ಕೆಲವು ಸಚಿವರು ತಮ್ಮ ಕಚೇರಿಗಳಿಗೆ ಹೋಗಿಲ್ಲ. ಸರ್ಕಾರ ‘ಟೇಕ್‌ ಆಫ್‌’ ಆಗಿದೆ ಎಂದು ಹೇಳುವ ಸಮಯ ಇದಲ್ಲ ಎಂದರು.

ಇದನ್ನೂ ಓದಿ– ಮೈಸೂರಲ್ಲಿ ಅರುಣ್‌ ಸಿಂಗ್‌: ಜೆಡಿಎಸ್ ಜೊತೆ ಬಿಜೆಪಿ ಹೊಂದಾಣಿಕೆ ಇಲ್ಲವೆಂದ ಸಚಿವರು

‘ಮುಂಬರುವ ವಿಧಾನಸಭಾ ಚುನಾವಣೆಯ ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಸೆ. 28ಕ್ಕೆ ಬಿಡುಗಡೆಯಾಗಲಿದೆ. ‘ಮಿಷನ್ 123’ ನನ್ನ ಸ್ಪಷ್ಟ ಗುರಿ. ಇದಕ್ಕಾಗಿ 100ಕ್ಕೂ ಅಧಿಕ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಂಡಿದ್ದು,  ಬಿಡದಿಯಲ್ಲಿ ಇವರಿಗೆಲ್ಲ ಸದ್ಯದಲ್ಲೇ ಕಾರ್ಯಾಗಾರ ನಡೆಸಲಾಗುವುದು’ ಎಂದು ಹೇಳಿದರು.

‘ಜೆಡಿಎಸ್‌ ಬಾಗಿಲು ದೊಡ್ಡದಾಗಿಯೇ ತೆರೆದಿದೆ. ಬರುವವರಿಗೆ ಸ್ವಾಗತ, ಹೋಗುವವರಿಗೆ ಶುಭ ಹಾರೈಸುತ್ತೇವೆ. ಜಿ.ಟಿ.ದೇವೇಗೌಡ 2 ವರ್ಷದ ಹಿಂದೆಯೇ ಪಕ್ಷ ಬಿಟ್ಟಿದ್ದರು. ಕೈಗೆಟುಕದ ದ್ರಾಕ್ಷಿ ಹುಳಿ ಎನ್ನುವವರಿಗೆ ಏನೂ ಹೇಳಲು ಸಾಧ್ಯವಿಲ್ಲ’ ಎಂದು ವ್ಯಂಗ್ಯವಾಡಿದರು.

ಬಿಜೆಪಿಯವರು ಜನಾಶೀರ್ವಾದ ಯಾತ್ರೆ ಮಾಡಿ, ಗೌರಿಗಣೇಶ ಹಬ್ಬಕ್ಕೆ ನಿರ್ಬಂಧ ಹೇರುವುದು ಸರಿಯಲ್ಲ. ಹಬ್ಬವನ್ನು ಮುಕ್ತವಾಗಿ ಆಚರಿಸಲು ಬಿಡಬೇಕು ಎಂದರು.

ಹಗುರವಾಗಿ ಮಾತನಾಡುವುದು ತರವಲ್ಲ: ಅರುಣ್‌ಸಿಂಗ್‌
ಚನ್ನರಾಯಪಟ್ಟಣ:
‘ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡರ ಬಗ್ಗೆ ಗೌರವವಿದೆ. ಅವರ ಪುತ್ರ ಎಚ್‌.ಡಿ.ಕುಮಾರಸ್ವಾಮಿ ಅವರು ಇನ್ನೊಬ್ಬರ ಬಗ್ಗೆ ಹಗುರವಾಗಿ ಮಾತನಾಡಬಾರದು’ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್‌ ಕಿವಿಮಾತು ಹೇಳಿದರು.

‘ರಾಜ್ಯ ಬಿಜೆಪಿ ಉಸ್ತುವಾರಿ ಹಣ ವಸೂಲಿಗಾಗಿ ಆಗಾಗ್ಗೆ ರಾಜ್ಯಕ್ಕೆ ಬರುತ್ತಿರುತ್ತಾರೆ’ ಎಂಬ ಎಚ್.ಡಿ. ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿ ಸಿಂಗ್, ಕುಮಾರಸ್ವಾಮಿ ಈ ರೀತಿ ಹೇಳಿಕೆ ನೀಡಬಾರದಿತ್ತು. ಗುಜರಾತ್ ಮಾದರಿಯಲ್ಲಿ ರಾಜ್ಯದಲ್ಲಿ ಪಕ್ಷ ಸಂಘಟಿಸಲಾಗುವುದು. ತಳಮಟ್ಟದಿಂದ ಪಕ್ಷವನ್ನು ಸದೃಢವಾಗಿ ಸಂಘಟಿಸಲು ಒತ್ತು ನೀಡಲಾಗುವುದು. ಕಾಂಗ್ರೆಸ್ ಮತ್ತು ಜೆಡಿಎಸ್ ಅನಗತ್ಯವಾಗಿ ಬಿಜೆಪಿಯನ್ನು ಟೀಕಿಸುತ್ತಿವೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು