ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಎಂದರೆ ಬಿಜೆಪಿ, ಜೆಡಿಎಸ್‌ಗೆ ಭಯ: ಧ್ರುವನಾರಾಯಣ ಹೇಳಿಕೆ

ಬಿಜೆಪಿಗೆ 16 ಸ್ಥಾನ: ಸಚಿವ ಎಸ್‌.ಟಿ.ಸೋಮಶೇಖರ್‌
Last Updated 6 ಡಿಸೆಂಬರ್ 2021, 13:31 IST
ಅಕ್ಷರ ಗಾತ್ರ

ಮೈಸೂರು: ‘ಜೆಡಿಎಸ್‌ನ ನಾಯಕರುಕಾಂಗ್ರೆಸ್‌ಗೆ ಸೇರುತ್ತಿರುವುದು, ಜಿ.ಟಿ.ದೇವೇಗೌಡ, ಸಂದೇಶ್‌ ನಾಗರಾಜ್ ಪಕ್ಷಕ್ಕೆ ಬೆಂಬಲ ಸೂಚಿಸಿರುವುದು ಜೆಡಿಎಸ್‌ ಹಾಗೂ ಬಿಜೆಪಿಗರಲ್ಲಿ ಭಯ ಹುಟ್ಟಿಸಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ ಹೇಳಿದರು.

ಇಲ್ಲಿನ ಪುರಭವನದಲ್ಲಿ ಅಂಬೇಡ್ಕರ್ ಪರಿನಿರ್ವಾಣ ಪ್ರಯುಕ್ತ ಸೋಮವಾರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್‌ಗೆ ಜನ ಬೆಂಬಲ ಇರುವುದರಿಂದ ಪರಿಷತ್‌ ಚುನಾವಣೆಯಲ್ಲಿ ಬಿಜೆಪಿ ಜೊತೆ ಕೈ ಜೋಡಿಸಲು ಜೆಡಿಎಸ್‌ ಮುಂದಾಗಿದೆ’ ಎಂದರು.

‘ಸಂದೇಶ್‌ ನಾಗರಾಜ್‌ ಪಕ್ಷವನ್ನು ಬೆಂಬಲಿಸುವುದಾಗಿ ಬಹಿರಂಗ ಹೇಳಿಕೆ ನೀಡಿದ್ದಾರೆ. ಶಾಸಕ ಜಿ.ಟಿ.ದೇವೇಗೌಡ ಕೂಡ ಸಂದರ್ಭ ನೋಡಿ ಪಕ್ಷವನ್ನು ಸೇರಲಿದ್ದಾರೆ. ಹೀಗಾಗಿಯೇ ಜೆಡಿಎಸ್‌– ಬಿಜೆಪಿ ಒಂದಾಗುತ್ತಿವೆ’ ಎಂದು ಹೇಳಿದರು.

‘ಹಾನಗಲ್‌, ಸಿಂದಗಿ ಉಪಚುನಾವಣೆಯಲ್ಲಿ ಎಚ್‌.ಡಿ.ಕುಮಾರಸ್ವಾಮಿ ಅವರು ಆರ್‌ಎಸ್‌ಎಸ್‌ ಅನ್ನು ಬಹಿರಂಗವಾಗಿ ಟೀಕಿಸುತ್ತೇನೆ ಎಂದು ಹೇಳಿಯೇ ವಾಗ್ದಾಳಿ ನಡೆಸಿದ್ದರು. ಮುಸ್ಲಿಮರ ಮತ ಸೆಳೆದು ಬಿಜೆಪಿಗೆ ಅನುಕೂಲ ಮಾಡಿಕೊಡುವುದು ಹಿಂದಿನ ಉದ್ದೇಶವಾಗಿತ್ತು. ಮುಸ್ಲಿಮರು ಕುರಿಗಳಲ್ಲ. ಪ್ರಜ್ಞಾವಂತ ಮತದಾರರು ಜೆಡಿಎಸ್‌ ತಿರಸ್ಕರಿಸಿದರು. ಸಾವಿರ ಮತವಷ್ಟೇ ಪಡೆಯಲು ಸಾಧ್ಯವಾಯಿತು’ ಎಂದು ವ್ಯಂಗ್ಯವಾಡಿದರು.

‘ಸಿಂದಗಿಯಲ್ಲಿ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ವಾರ ಕಾಲ ವಾಸ್ತವ್ಯ ಹೂಡಿ ಪ್ರಚಾರ ನಡೆಸಿದರೂ ಠೇವಣಿ ಕಳೆದುಕೊಳ್ಳಬೇಕಾಯಿತು. ಕಾಂಗ್ರೆಸ್‌ಗೆ ದೇವೇಗೌಡರ ಮೇಲೆ ಗೌರವವಿದೆ. ಆದರೆ, ಅವರು ಅವಕಾಶವಾದಿ ರಾಜಕಾರಣ ಮಾಡುತ್ತಿದ್ದಾರೆ. ಕುಟುಂಬದವರನ್ನು ಮಾತ್ರ ಬೆಳೆಸುತ್ತಿದ್ದಾರೆ. ಮಕ್ಕಳಾಯಿತು, ಇದೀಗ ಮೊಮ್ಮಕ್ಕಳು ಕಣದಲ್ಲಿದ್ದಾರೆ’ ಎಂದು ಟೀಕಿಸಿದರು.

ಸಾಮಾಜಿಕ ನ್ಯಾಯ: ‘ಕಾಂಗ್ರೆಸ್‌ ಒಳ್ಳೆಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಆಯ್ಕೆಯ‌ಲ್ಲಿಯೂ ಸಾಮಾಜಿಕ ನ್ಯಾಯ ನೀಡಲಾಗಿದೆ. ಪರಿಶಿಷ್ಟ, ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇವರ ಗೆಲುವಿಗೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿಪಕ್ಷದ ನಾಯಕರು, ಕಾರ್ಯಕರ್ತರು ರಾಜ್ಯದಾದ್ಯಂತ ಪ್ರಚಾರ ನಡೆಸಿದ್ದಾರೆ ಎಂದು ಧ್ರುವನಾರಾಯಣ ಹೇಳಿದರು.

ಅಧಿಕಾರ ವಿಕೇಂದ್ರಿಕರಣದ ವಿರೋಧಿ ಬಿಜೆಪಿ: ಪಂಚಾಯಿತಿಗಳನ್ನು ಮೋದಿ ಸದೃಢಗೊಳಿಸುತ್ತಿದ್ದಾರೆ ಎಂಬ ಪ್ರತಾಪಸಿಂಹ ಹೇಳಿಕೆಯನ್ನು ಟೀಕಿಸಿದ ಧ್ರುವನಾರಾಯಣ, ‘ಅಧಿಕಾರ ವಿಕೇಂದ್ರೀಕರಣಕ್ಕಾಗಿ ಪಂಚಾಯತ್‌ರಾಜ್‌ ವ್ಯವಸ್ಥೆ ಜಾರಿಗೊಳಿಸಿದ್ದು ಕಾಂಗ್ರೆಸ್‌ನ ರಾಜೀವ್‌ ಗಾಂಧಿ, ಪಿ.ವಿ.ನರಸಿಂಹರಾವ್‌. ಪಂಚಾಯತ್‌ರಾಜ್‌ ವ್ಯವಸ್ಥೆ ಸದೃಢವಾಗಿ ಬೆಳೆಯಲು ಕಾಂಗ್ರೆಸ್‌ ಕಾರಣ ಎಂಬುದನ್ನು ಪ್ರತಾಪಸಿಂಹ ಅರಿಯಬೇಕು. ವಿಕೇಂದ್ರೀಕರಣದ ವಿರೋಧಿ ಬಿಜೆಪಿ. ಹೀಗಾಗಿಯೇ ಪಂಚಾಯತ್‌ ರಾಜ್‌ ಮಸೂದೆಗೆ ರಾಜ್ಯಸಭೆಯಲ್ಲಿ ಆಗ ಬಿಜೆಪಿಗರು ಬೆಂಬಲ ನೀಡಿರಲಿಲ್ಲ’ ಎಂದು ಕುಟುಕಿದರು.

ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಗಳನ್ನು ನಡೆಸದೇ ಮತದಾನ ಮೊಟಕುಗೊಳಿಸಿದ್ದು ಬಿಜೆಪಿ ಸರ್ಕಾರ. ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಅನುದಾನವೇ ಬಿಡುಗಡೆಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

14ಕ್ಕೂ ಹೆಚ್ಚು ಸ್ಥಾನ ನಿಶ್ಚಿತ: ಕಳೆದ ಬಾರಿಯ ವಿಧಾನ ಪರಿಷತ್‌ ಚುನಾವಣೆಯಲ್ಲಿ 25ರಲ್ಲಿ 14 ಸ್ಥಾನಗಳನ್ನು ಕಾಂಗ್ರೆಸ್ ಪಡೆದಿತ್ತು. ಈ ಬಾರಿಯೂ ಉತ್ತಮ ಸಾಧನೆ ಮಾಡಲಿದೆ. ಹೆಚ್ಚಿನ ಮತಗಳ ಅಂತರದಿಂದ ಗೆಲುವು ಪಡೆಯುವ ಗುರಿಯೊಂದಿಗೆ ಪ್ರಚಾರ ನಡೆಸಿದ್ದೇವೆ. ಮೈಸೂರು ಮತ್ತು ಚಾಮರಾಜನಗರದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಕಾಂಗ್ರೆಸ್ ಬಲಿಷ್ಠವಾಗಿದೆ. ಶೇ 100 ಗೆಲುವು ನಿಶ್ಚಿತ ಎಂದು ಧ್ರುವನಾರಾಯಣ ಹೇಳಿದರು.

ಚಾಮರಾಜನಗರದಲ್ಲಿ ಜೆಡಿಎಸ್‌ಗೆ ನೆಲೆಯೇ ಇಲ್ಲ. ಮೈಸೂರಿನ ಕೆ.ಆರ್.ನಗರ, ಪಿರಿಯಾಪಟ್ಟಣ, ಹುಣಸೂರು, ಚಾಮುಂಡೇಶ್ವರಿಯಲ್ಲಿ ಬಿಜೆಪಿಗೆ ನೆಲೆಯೇ ಇಲ್ಲ‌. ಎರಡೂ ಜಿಲ್ಲೆಯಲ್ಲಿ ಅತಿ ಹೆಚ್ಚು ಕಾಂಗ್ರೆಸ್ ಬೆಂಬಲಿತ ಪಂಚಾಯತ್ ಸದಸ್ಯರು ಇದ್ದಾರೆ. ಗೆಲುವಿಗೆ ಯಾವುದೇ ಅಡ್ಡಿಯೂ ಇಲ್ಲ.ಮೊದಲ ಸುತ್ತಿನ ಮತ ಎಣಿಕೆಯಲ್ಲಿಯೇ ಅತ್ಯಂತ ಅಂತರದಿಂದ ಗೆಲುವು ಸಾಧಿಸಲಿದ್ದೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

‘ಯಾವುದೇ ಒಡಂಬಡಿಕೆ ಆಗಿಲ್ಲ’: ‘ಜೆಡಿಎಸ್‌ ಮತ್ತು ಬಿಜೆಪಿ ನಡುವೆ ಯಾವುದೇ ಒಡಂಬಡಿಕೆ ಆಗಿಲ್ಲ. ಮೈಸೂರು– ಚಾಮರಾಜನಗರದಲ್ಲಿ ಎರಡೂ ಪಕ್ಷಗಳ ಅಭ್ಯರ್ಥಿಗಳು ಇರುವುದರಿಂದ ಮಾತುಕತೆಯ ಮಾತೆಲ್ಲಿ ಬಂತು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಹೇಳಿದರು.

ಬಿಜೆಪಿ 15ರಿಂದ 16 ಸ್ಥಾನಗಳಲ್ಲಿ ಗೆಲುವು ದಾಖಲಿಸಲಿದೆ. ಮಂಡ್ಯದಲ್ಲೂ ಪಕ್ಷದ ಅಭ್ಯರ್ಥಿ ಬಿ.ಸಿ.ಮಂಜು ಜಯ ಕಾಣಲಿದ್ದಾರೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT