ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ನಗರ, ಕೊಡಗಿನಲ್ಲಿ ಬಿಜೆಪಿ ಬಲವರ್ಧನೆ

ಚಾಮುಂಡೇಶ್ವರಿ ಕ್ಷೇತ್ರದಲ್ಲೂ ಮೈತ್ರಿ ಅಭ್ಯರ್ಥಿ ಸಿ.ಎಚ್‌.ವಿಜಯಶಂಕರ್‌ಗೆ ಹಿನ್ನಡೆ
Last Updated 23 ಮೇ 2019, 19:10 IST
ಅಕ್ಷರ ಗಾತ್ರ

ಮೈಸೂರು: ಕೊಡಗಿನ ಮತದಾರರ ಜತೆ ಮೈಸೂರು ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಗಳ ಮತದಾರರು ಕೂಡಾ ಕೈಹಿಡಿದ ಕಾರಣ ಪ್ರತಾಪ ಸಿಂಹ ಅವರು ಸತತ ಎರಡನೇ ಬಾರಿ ಸಂಸತ್ತಿಗೆ ಆಯ್ಕೆಯಾಗಿದ್ದಾರೆ.

ಕೊಡಗಿನ ಎರಡು ವಿಧಾನಸಭಾ ಕ್ಷೇತ್ರಗಳು ಬಿಜೆಪಿಯ ಶಕ್ತಿ ಕೇಂದ್ರ ಎನಿಸಿದ್ದವು. ಆದ್ದರಿಂದ ಮೈಸೂರಿನ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಎಷ್ಟು ಮತಗಳು ಲಭಿಸಬಹುದು ಎಂಬುದರ ಮೇಲೆ ಈ ಬಾರಿ ಅಭ್ಯರ್ಥಿಗಳ ಸೋಲು–ಗೆಲುವಿನ ಲೆಕ್ಕಾಚಾರ ಮಾಡಲಾಗಿತ್ತು.

ಮಡಿಕೇರಿ ಮತ್ತು ವಿರಾಜಪೇಟೆ ವಿಧಾನಸಭೆ ಕ್ಷೇತ್ರಗಳಲ್ಲದೆ, ಚಾಮುಂಡೇಶ್ವರಿ, ಕೃಷ್ಣರಾಜ ಮತ್ತು ಚಾಮರಾಜ ಕ್ಷೇತ್ರಗಳಲ್ಲೂ ಪ್ರತಾಪ ಸಿಂಹ ಅವರು ಮುನ್ನಡೆ ಗಳಿಸಿ ಭಾರಿ ಅಂತರದ ಗೆಲುವು ಒಲಿಸಿಕೊಂಡಿದ್ದಾರೆ.

ಮೈತ್ರಿ ಅಭ್ಯರ್ಥಿ ಸಿ.ಎಚ್‌.ವಿಜಯಶಂಕರ್‌ ಅವರು ನರಸಿಂಹರಾಜ, ಪಿರಿಯಾಪಟ್ಟಣ ಮತ್ತು ಹುಣಸೂರು ವಿಧಾನಸಭಾ ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಗಳಿಸಿದ್ದಾರೆ. ಇದರಲ್ಲಿ ನರಸಿಂಹರಾಜದಲ್ಲಿ ಕಾಂಗ್ರೆಸ್‌ ಶಾಸಕರಿದ್ದರೆ, ಪಿರಿಯಾಪಟ್ಟಣ ಮತ್ತು ಹುಣಸೂರಿನಲ್ಲಿ ಜೆಡಿಎಸ್‌ನ ಶಾಸಕರು ಇದ್ದಾರೆ.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರತಾಪ ಸಿಂಹ ಅವರು 22,150 ಮತಗಳ ಮುನ್ನಡೆ ಪಡೆದಿರುವುದು ಅಚ್ಚರಿ ಮೂಡಿಸಿದೆ. ಮೈಸೂರಿನಲ್ಲಿ ಮೈತ್ರಿ ಸರಿಯಾಗಿ ಕೆಲಸ ಮಾಡಿಲ್ಲ ಎಂಬುದಕ್ಕೆ ವಿಜಯಶಂಕರ್‌ ಅವರು ಇಲ್ಲಿ ಹಿನ್ನಡೆ ಅನುಭವಿಸಿದ್ದೇ ಸಾಕ್ಷಿ ಎಂದು ವಿಶ್ಲೇಷಿಸಲಾಗುತ್ತಿದೆ.

ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರು ಕೊನೆಯ ಕ್ಷಣದಲ್ಲಿ ಈ ಕ್ಷೇತ್ರದಲ್ಲಿ ಜಂಟಿ ಪ್ರಚಾರ ಕೈಗೊಂಡಿದ್ದರು. ಆದರೆ ಇವರ ಜಂಟಿ ಪ್ರಚಾರ ಮತದಾರರ ಮೇಲೆ ಯಾವುದೇ ಪರಿಣಾಮ ಉಂಟುಮಾಡಲಿಲ್ಲ.

ಮತದಾನದ ಕೆಲದಿನಗಳ ಬಳಿಕ ಜಿ.ಟಿ.ದೇವೇಗೌಡ ಅವರು ‘ಚಾಮುಂಡೇಶ್ವರಿ ಕ್ಷೇತ್ರದ ಉದ್ಬೂರು ಒಳಗೊಂಡಂತೆ ಕೆಲವೆಡೆ ಜೆಡಿಎಸ್‌ನ ಮತಗಳು ಬಿಜೆಪಿಗೆ ಬಿದ್ದಿವೆ’ ಎಂದು ಹೇಳಿದ್ದರು. ಈ ಹೇಳಿಕೆ ವಿವಾದದ ರೂಪ ಪಡೆದುಕೊಂಡಿತ್ತು. ಆ ಬಳಿಕ ಎರಡೂ ಪಕ್ಷಗಳ ನಾಯಕರ ನಡುವೆ ಮಾತಿನ ಸಮರವೇ ನಡೆದಿತ್ತು.

ಮೈಸೂರು ನಗರ ಮತ್ತು ಕೊಡಗಿನಲ್ಲಿ ಬಿಜೆಪಿಯ ಬಲ ಮತ್ತಷ್ಟು ಹೆಚ್ಚಿದೆ ಎಂಬುದನ್ನು ಈ ಚುನಾವಣೆ ತೋರಿಸಿಕೊಟ್ಟಿದೆ. ವಿರಾಜಪೇಟೆಯಲ್ಲಿ ಪ್ರತಾಪ ಸಿಂಹ 41,497 ಮತಗಳ ಮುನ್ನಡೆ ಪಡೆದರೆ, ಮಡಿಕೇರಿಯಲ್ಲಿ 47,969 ಮತಗಳ ಮೇಲುಗೈ ಸಾಧಿಸಿದರು.

ನರಸಿಂಹರಾಜ ಕ್ಷೇತ್ರದಲ್ಲಿ ವಿಜಯಶಂಕರ್‌ ನಿರೀಕ್ಷೆಯಂತೆಯೇ ಭಾರಿ ಮುನ್ನಡೆ ತಮ್ಮದಾಗಿಸಿಕೊಂಡರು. ಇಲ್ಲಿ ಅವರು ಬಿಜೆಪಿ ಅಭ್ಯರ್ಥಿಗಿಂತ 42 ಸಾವಿರದಷ್ಟು ಅಧಿಕ ಮತಗಳನ್ನು ಪಡೆದರು. ಪಿರಿಯಾಪಟ್ಟಣದಲ್ಲಿ 23 ಸಾವಿರ ಹಾಗೂ ಹುಣಸೂರಿನಲ್ಲಿ 3,700 ಕ್ಕೂ ಅಧಿಕ ಮತಗಳಿಂದ ಮುನ್ನಡೆ ಗಳಿಸಿದರು. ಆದರೆ ಇತರ ಕ್ಷೇತ್ರಗಳಲ್ಲಿ ಭಾರಿ ಹಿನ್ನಡೆ ಅನುಭವಿಸಿದ್ದು ಅವರಿಗೆ ಮುಳುವಾಗಿ ಪರಿಣಮಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT