ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿವಾರವಾದಕ್ಕೆ ತಿಲಾಂಜಲಿ ಇಟ್ಟಿದ್ದೇವೆ, ನಮ್ಮದು ರಾಷ್ಟ್ರವಾದ: ಕಟೀಲ್

ಮೈಸೂರಿನಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದಿಂದ ‍ಪ್ರಶಿಕ್ಷಣ ಶಿಬಿರ ಆರಂಭ
Last Updated 12 ಸೆಪ್ಟೆಂಬರ್ 2022, 8:44 IST
ಅಕ್ಷರ ಗಾತ್ರ

ಮೈಸೂರು: ‘ಬಿಜೆಪಿಯು ಪರಿವಾರವಾದ ಇಟ್ಟುಕೊಂಡು ಬಂದದ್ದಲ್ಲ. ರಾಷ್ಟ್ರವಾದ ನಮ್ಮ ಗುರಿ. ಹೀಗಾಗಿ, ಪರಿವಾರವಾದಕ್ಕೆ ತಿಲಾಂಜಲಿ ಇಟ್ಟಿದ್ದೇವೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಹೇಳಿದರು.

ಬಿಜೆಪಿ ರಾಜ್ಯ ಅಲ್ಪಸಂಖ್ಯಾತ ಮೋರ್ಚಾದಿಂದ ನಗರದ ಖಾಸಗಿ ಹೋಟೆಲ್‌ನಲ್ಲಿ ಹಮ್ಮಿಕೊಂಡಿರುವ 2 ದಿನಗಳ ಪ್ರಶಿಕ್ಷಣ ಶಿಬಿರವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಸಾಮಾನ್ಯರನ್ನು ಗುರುತಿಸಿ ನಾಯಕನನ್ನಾಗಿ ಬೆಳೆಸುತ್ತೇವೆ. ರಾಜಕಾರಣ ಬದುಕಿಗೆ ದಾರಿಯಲ್ಲ. ಇದು ಈಶ್ವರಿಯ ಕಾರ್ಯ ಎಂದು ನಂಬಿದವರು ನಾವು. ಜಾತಿ, ಮತ, ಪಂಥ ಮುರಿದು ತಾಯಿ ಭಾರತಾಂಬೆಯನ್ನು ಮಾತ್ರ ಆರಾಧಿಸುತ್ತೇವೆ‘ ಎಂದರು.

‘ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರ ನಿರ್ಮಾಣ ನಮ್ಮ ಪರಿಕಲ್ಪನೆ. ಸ್ವಾತಂತ್ರ್ಯ ನಂತರ ಭಾರತ ಹೇಗಿರಬೇಕು ಎಂಬ ಪರಿಕಲ್ಪನೆಯನ್ನು ಗಾಂಧೀಜಿ ಕೊಟ್ಟಿದ್ದರು. ಸುದೀರ್ಘ ಅವಧಿಗೆ ಕಾಂಗ್ರೆಸ್ ಆಳಿದರೆ ಮನೆ ಮನೆಗಳಲ್ಲಿ ರಾವಣರು ನಿರ್ಮಾಣವಾಗುತ್ತಾರೆ ಎನ್ನುವುದು ಗಾಂಧೀಜಿಗೆ ಗೊತ್ತಿತ್ತು. ಹೀಗಾಗಿ ರಾಮರ ಅವಶ್ಯವಿದೆ ಎಂದು ಬಯಸಿದ್ದರು. ಆದ್ಮರಿಂದ ರಾಜ್ಯದ ಪರಿಕಲ್ಪನೆ ಕೊಟ್ಟರು. ರಾಮ ರಾಜ್ಯವಾಗಲು ಮನೆ ಮನೆಗಳಲ್ಲಿ ರಾಮ ಇರಬೇಕು, ಆಗ ಮಾತ್ರ ಕಾಂಗ್ರೆಸ್ ನಿರ್ಮಾಣ ಮಾಡುವ ರಾವಣರನ್ನು ಸೋಲಿಸಲು ಸಾಧ್ಯ ಎಂದಿದ್ದರು. ಹೀಗಾಗಿ, ರಾಮರ ನಿರ್ಮಾಣದ ಕಾರ್ಯದ ಮೂಲಕ ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ಬಿಜೆಪಿ ತೊಡಗಿದೆ’ ಎಂದು ತಿಳಿಸಿದರು.

ಬದುಕಿಗಾಗಿ ರಾಜಕಾರಣ ಅಲ್ಲ

‘ನಮ್ಮ ಸಿದ್ಧಾಂತಗಳು ಶ್ರೇಷ್ಠವಾದವು. ಬದುಕಿಗಾಗಿ ರಾಜಕಾರಣ ಆಯ್ಕೆ ಅಥವಾ ಬದುಕನ್ಜೇ ರಾಜಕಾರಣ ಮಾಡಿಕೊಳ್ಳುವುದು ನಮ್ಮ ಸಿದ್ಧಾಂತವಲ್ಲ. ಪರಮವೈಭವ ಸ್ಥಿತಿಗೆ ತಾಯಿ ಭಾರತಾಂಬೆಯನ್ನು ತೆಗೆದುಕೊಂಡು ಹೋಗುವುದು ನಮ್ಮ ಸಿದ್ಧಾಂತ’ ಎಂದು ಪ್ರತಿಪಾದಿಸಿದರು.

‘ಯಾರನ್ನೋ ಪ್ರಧಾನಿ, ಮುಖ್ಯಮಂತ್ರಿ, ಸಾಮಾನ್ಯ ಕಾರ್ಯಕರ್ತನನ್ನು ಸಂಸದ, ಅಧ್ಯಕ್ಷರನ್ನಾಗಿ ಮಾಡುವುದು ನಮ್ಮ ಗುರಿಯಲ್ಲ. ವಿಶ್ವ ಗುರುವಾಗಿ ಭಾರತ ನಿರ್ಮಾಣ ನಮ್ಮ ಚಿಂತನೆ–ಸಂಕಲ್ಪ. ಇದಕ್ಕೆ ಸಾಧನವಾಗಿ ರಾಜಕಾರಣವನ್ನು ಬಳಸಿಕೊಳ್ಳುತ್ತಿದ್ದೇವೆ. ಪರಿಣಾಮ, ಜನಸಂಘವು ಬಿಜೆಪಿಯಾಗಿ ಜಗತ್ತಿನ ಅತಿದೊಡ್ಡ ಪಕ್ಷವಾಗಿ ಬೆಳೆದಿದೆ’ ಎಂದರು.

ಸಿದ್ಧಾಂತದಲ್ಲಿ ರಾಜಿಯಾಗಿಲ್ಲ

‘ಜನಸಂಘ ಪ್ರಾರಂಭವಾದಾಗ ಯಾವ ವಿಚಾರಧಾರೆ–ಸಿದ್ಧಾಂತ ಇದ್ದವೋ ಈಗಲೂ ಇವೆ. ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಅಧಿಕಾರ ಹಿಡಿದ ಮೇಲೂ ಸಿದ್ಧಾಂತದಲ್ಲಿ ರಾಜಿಯಾಗಿಲ್ಲ. ರಾಜಕಾರಣದ ಸುದೀರ್ಘ ಪಯಣದಲ್ಲಿ ಸಿದ್ಧಾಂತದಲ್ಲಿ ರಾಜಿ ಮಾಡಿಕೊಳ್ಳದ ಏಕೈಕ ಪಕ್ಷವಿದ್ದರೆ ಬಿಜೆಪಿ’ ಎಂದು ತಿಳಿಸಿದರು.

‘ಸಚ್ಚಾರಿತ್ರ್ಯವಂತ ರಾಜಕಾರಣ ಸೃಷ್ಟಿ ನಮ್ಮ ಗುರಿ. ವಾಜಪೇಯಿ ಆಡಳಿತದಲ್ಲಿರಲಿ, ಎಂಟು ವರ್ಷಗಳಿಂದ ನರೇಂದ್ರ ಮೋದಿ ಆಡಳಿತದಲ್ಲಿರಲಿ ಒಂದೂ ಕಳಂಕವಿಲ್ಲ. ಭ್ರಷ್ಟಾಚಾರದ ಆರೋಪವಿಲ್ಲದ ಸಚಿವ ಸಂಪುಟ ಹಾಗೂ ಸಂಸದರಿದ್ದರೆ ಮೋದಿ ಕಾಲದಲ್ಲಿ ಮಾತ್ರ’ ಎಂದು ಪ್ರತಿಪಾದಿಸಿದರು.

‘ಜನಸಂಘದಿಂದ ಈವರೆಗೂ ಕಾರ್ಯಪದ್ಧತಿ ಮತ್ತು ಸಿದ್ಧಾಂತದಲ್ಲಿ ರಾಜಿ ಮಾಡಿಕೊಂಡಿಲ್ಲ. ಜನಸಂಘದ ಕಾಲದಲ್ಲೂ ಅಭ್ಯಾಸ ವರ್ಗ ನಡೆಸುತ್ತಿದ್ದೆವು. ಈಗಲೂ ಮಾಡುತ್ತಿದ್ದೇವೆ. ರಾಜಕಾರಣದ ಅತ್ಯಂತ ಸ್ವರ್ಣ ಯುಗದಲ್ಲಿ ಬಿಜೆಪಿ ಇದ್ದು, ಕೇಂದ್ರ–ರಾಜ್ಯದಲ್ಲಿ ನಮ್ಮದೇ ಸರ್ಕಾರವಿದ್ದರೂ ಕಾರ್ಯಪದ್ಧತಿಯಲ್ಲಿ ರಾಜಿಯಾಗಿಲ್ಲ. ನಮ್ಮನ್ನು ತುಳಿಯುತ್ತಾರೆ, ಕಾಲೆಳೆಯುತ್ತಾರೆ ಎನ್ನುವ ಮಾತುಗಳು ರಾಜಕಾರಣದಲ್ಲಿ ಸಹಜ. ಆದರೆ, ಸಾಮಾನ್ಯ ಕಾರ್ಯಕರ್ತನನ್ನೂ ಅತ್ಯುನ್ನತ ಸ್ಥಾನಕ್ಕೆ ತೆಗೆದುಕೊಂಡು ಹೋಗುವುದು ಬಿಜೆಪಿಯಲ್ಲಿ ಮಾತ್ರ ಸಾಧ್ಯ’ ಎಂದರು.

‘ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಾಂಗ್ರೆಸ್‌ನವರು ಭಾರತ ಮಾತೆಗೆ ಜೈಕಾರ ಕೂಗುತ್ತಿದ್ದರು. ಅಧಿಕಾರಕ್ಕೆ ಬಂದ ಮೇಲೆ ಭಾರತಾಂಬೆಗೆ ಜೈ ಹೇಳಲಿಲ್ಲ. ಗಾಂಧಿ ಕುಟುಂಬಕ್ಕೆ ಜೈ ಎಂದರು. ಕುಟುಂಬವಾದ ಇಟ್ಟುಕೊಂಡು ಬಂದವರವರು. ಆದರೆ, ನಮ್ಮದು ವ್ಯಕ್ತಿ ಆಧಾರಿತ ಪಕ್ಷವಲ್ಲ; ತತ್ವ ಆಧಾರಿತವಾದುದು. ತತ್ವ ಪೂಜೆ ಮಾಡುತ್ತೇವೆ. ಆದ್ದರಿಂದ, ಜಗತ್ತಿನ ಅತಿ ದೊಡ್ಡ ಪಕ್ಷದ ಸದಸ್ಯ ಎನ್ನುವ ಹೆಮ್ಮೆ ಕಾರ್ಯಕರ್ತರಲ್ಲಿರಬೇಕು’ ಎಂದು ತಿಳಿಸಿದರು.

ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣ

‘ಕಾಂಗ್ರೆಸ್‌ನಲ್ಲಿ ಗಾಂಧಿ ಕುಟುಂಬದ ವಿಳಾಸವಿದ್ದರೆ ಮಾತ್ರ ಅಧಿಕಾರ. ಕಾಂಗ್ರೆಸ್‌ ಮುಕ್ತ ಭಾರತ ನಿರ್ಮಾಣವಾಗಿದೆ. ಲೋಕಸಭೆಯಲ್ಲಿ ವಿರೋಧ ಪಕ್ಷವಾಗಲೂ ನಾಲಾಯಕ್ ಆಗಿದೆ. ಅಲ್ಲಿನ ನಾಯಕರೆಲ್ಲರೂ ಹೊರ ಹೋಗಿದ್ದಾರೆ. ಜಿ–23 ಹೊರಗಿದೆ. ಕಾಂಗ್ರೆಸ್ ಒಳಗೂ ಮುಕ್ತವಾಗುತ್ತಿದೆ. ಆದರೆ, ಬಿಜೆಪಿ ಬೆಳೆಯುತ್ತಲೇ ಇದೆ. ಒಂದು ಕಾಲದಲ್ಲಿ ಇಂದಿರಾ–ಇಂಡಿಯಾ ಎನ್ನುತ್ತಿದ್ದರು. ಲೈಟ್ ಕಂಬ ನಿಲ್ಲಿಸಿದ್ದರೂ ಗೆಲ್ಲುತ್ತೇವೆ ಎಂಬ ವಿಶ್ವಾಸ ಆ ಪಕ್ಷದವರಲ್ಲಿತ್ತು. ಈಗ ರಾಹುಲ್ ಗಾಂಧಿ ಕೇರಳಕ್ಕೆ ಓಡಿ ಬರಬೇಕಾಯಿತು. ಸಿದ್ದರಾಮಯ್ಯ ಬಾದಾಮಿಗೆ ಹೋಗಬೇಕಾಯಿತು. ಕ್ಷೇತ್ರವೇ ಇಲ್ಲದಂತಹ ಸ್ಥಿತಿ ಅವರಿಗೆ ಬಂದಿದೆ. ಕುಟುಂಬವಾದದ ರಾಜಕಾರಣದಿಂದ ಕಾಂಗ್ರೆಸ್ ಸರ್ವನಾಶವಾಶಗುತ್ತಿದೆ’ ಎಂದು ವಿಶ್ಲೇಷಿಸಿದರು.

‘ದೇಶದಲ್ಲಿ ಅಲ್ಪಸಂಖ್ಯಾತರನ್ನು ಕಾಂಗ್ರೆಸ್‌ನವರು ಬಿಜೆಪಿಯಿಂದ ದೂರ ಇಟ್ಟಿದ್ದರು. ಅಲ್ಪಸಂಖ್ಯಾತರ ಭೂತ ಬಿಜೆಪಿ ಎಂದು ಬಿಂಬಿಸಿದ್ದರು. ಇದರಿಂದ, ಗಾಂಧಿ ಕುಟುಂಬ ಹಾಗೂ ಅಲ್ಲಿನ ನಾಯಕರ ಉದ್ದಾರವಾಯಿತೇ ಹೊರತು ಅಲ್ಪಸಂಖ್ಯಾತರ ಅಭಿವೃದ್ಧಿ ಆಗಲೇ ಇಲ್ಲ’ ಎಂದು ಟೀಕಿಸಿದರು.

‘ರಾಷ್ಟ್ರೀಯ ವಿಚಾರಧಾರೆ ಇರುವ ಪ್ರತಿಯೊಬ್ಬರಿಗೂ ಗೌರವ ಕೊಡುತ್ತೇವೆ. ಭಾರತಾಂಬೆ ಪೂಜಿಸುವವರು ದೇಶದ ಪ್ರಜೆ ಎನ್ನುವಂತಹ ಕಲ್ಪನೆ ಬಿಜೆಪಿಯದ್ದು. ವಿರೋಧಿಸುವವರು, ದುಷ್ಕೃತ್ಯ ಎಸಗುವವರು ಹಾಗೂ ಪಾಕಿಸ್ತಾನಕ್ಕೆ ಜೈ ಎನ್ನುವವರನ್ನು ವಿರೋಧಿಸಿಯೇ ತೀರುತ್ತೇವೆ’ ಎಂದರು.

‘ತಮ್ಮನ್ನು ಕೇವಲ ಬ್ಯಾಂಕ್‌ ಆಗಿ ಮಾಡಿಕೊಂಡಿದ್ದರು ಎನ್ನುವುದು ಅಲ್ಪಸಂಖ್ಯಾತರಿಗೆ ಅರ್ಥವಾಗಿದೆ. ಹೀಗಾಗಿ ಅವರು ಕಾಂಗ್ರೆಸ್‌ನಿಂದ ಹೊರ ಬರುತ್ತಿದ್ದಾರೆ’ ಎಂದು ತಿಳಿಸಿದರು.
‘ಮುಸ್ಲಿಮರು, ಕ್ರೈಸ್ತರನ್ನೂ ಗುರುತಿಸುವ ಕೆಲಸವನ್ನು ಪಕ್ಷ ಮಾಡಿದೆ. ಹತ್ತಾರು ಹುದ್ದೆಗಳನ್ನು ನೀಡಿದೆ. ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಹತ್ತಾರು ಯೋಜನೆಗಳನ್ನು ಜಾರಿಗೊಳಿಸಿದೆ. ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ₹ 500 ಕೋಟಿ ಬಿಡುಗಡೆ ಮಾಡಿದ್ದಾರೆ. ಹಿಂದಿನ ಕಾಂಗ್ರೆಸ್ ಸರ್ಕಾರ ಮಾಡಿರಲಿಲ್ಲ. ವ್ಯಕ್ತಿಗಿಂತ ಪಕ್ಷ, ಪಕ್ಷಕ್ಕಿಂತ ದೇಶ ಶ್ರೇಷ್ಠ ಎನ್ನುವುದನ್ನು ಅಲ್ಪಸಂಖ್ಯಾತ ಮೋರ್ಚಾದ ಕಾರ್ಯಕರ್ತರು ಮರೆಯಬಾರದು’ ಎಂದರು.

ರಾಜ್ಯ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಸೈಯದ್ ಸಲಾಂ ಅಧ್ಯಕ್ಷತೆ ವಹಿಸಿದ್ದರು. ಸಂಸದ ಪ್ರತಾಪ ಸಿಂಹ, ವಿಧಾನಪರಿಷತ್‌ ಸದಸ್ಯ ರವಿಕುಮಾರ್, ಮೇಯರ್ ಶಿವಕುಮಾರ್, ಉಪ ಮೇಯರ್ ಡಾ.ಜಿ.ರೂಪಾ, ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ಎಂ.ರಾಜೇಂದ್ರ, ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ರಾಷ್ಟ್ರೀಯ ಖಜಾಂಚಿ ಡಾ.ಮೊಹಸಿನ್, ಮುಖಂಡ ಮುಕ್ತಾರ್ ಪಠಾಣ್, ಹಜ್ ಸಮಿತಿ ಅಧ್ಯಕ್ಷ ಕಚೇರಿವಾಲಾ, ನಗರ ಮೋರ್ಚಾ ಅಧ್ಯಕ್ಷ ಕಲೀಂ ಪಾಷಾ, ನೂರ್ ಭಾಷಾ, ನಗರ ಘಟಕದ ಅಧ್ಯಕ್ಷ ಟಿ.ಎಸ್.ಶ್ರೀವತ್ಸ, ಗ್ರಾಮಾಂತರ ಘಟಕದ ಅಧ್ಯಕ್ಷೆ ಮಂಗಳಾ ಸೋಮಶೇಖರ್ ಇದ್ದರು.

ಹಿಂದುಳಿದ ವರ್ಗಗಳ ಮೋರ್ಚಾ ನಗರ ಘಟಕದ ಅಧ್ಯಕ್ಷ ಜೋಗಿ ಮಂಜು ಪ್ರಾರ್ಥಿಸಿದರು. ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಅನೀಲ್ ಥಾಮಸ್ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT