ಮಂಗಳವಾರ, ನವೆಂಬರ್ 24, 2020
26 °C
ಸಫಾರಿಯತ್ತ ವನ್ಯಪ್ರೇಮಿಗಳ ಚಿತ್ತ: ಕಾಡು ಸುತ್ತುವ ಹವ್ಯಾಸಿಗಳಿಗೆ ಖುಷಿ

ಮೈಸೂರು: ಕಾಕನಕೋಟೆ ಸಫಾರಿಯಲ್ಲಿ ಕಪ್ಪು ಚಿರತೆ

ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಮೈಸೂರು ಹಾಗೂ ಕೊಡಗು ಜಿಲ್ಲೆಯನ್ನೊಳಗೊಂಡಿರುವ ನಾಗರಹೊಳೆ ಅಭಯಾರಣ್ಯ ಇದೀಗ ಸಫಾರಿಗೆ ತೆರೆದುಕೊಂಡಿದೆ. ಕಾಡಿನ ಹಸಿರನ್ನು, ವನ್ಯಮೃಗಗಳನ್ನು ಹತ್ತಿರದಿಂದ ಕಣ್ತುಂಬಿಕೊಳ್ಳಲು ಇಲ್ಲಿಗೆ ಬರುತ್ತಿರುವ ಹವ್ಯಾಸಿಗಳು, ಕಾಡು ಪ್ರಿಯರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ನಾಗರಹೊಳೆ ಅಭಯಾರಣ್ಯದ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯೇ ನಿರ್ವಹಿಸುವ ಮೂರು ಸಫಾರಿ ಕೇಂದ್ರಗಳು ಸೇರಿದಂತೆ ಜಂಗಲ್ ಲಾಡ್ಜ್‌ ರೆಸಾರ್ಟ್‌ ನಿರ್ವಹಿಸುವ ಸಫಾರಿ ಕೇಂದ್ರವೂ ಸಹ ಇದೀಗ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ಆರಂಭಿಸಿವೆ.

ಮುಂಜಾನೆ–ಮುಸ್ಸಂಜೆಯ ಸಫಾರಿಗೆ ಆನ್‌ಲೈನ್‌ನಲ್ಲಿ ಟಿಕೆಟ್‌ ಬುಕ್ಕಿಂಗ್‌ ಮಾಡಿಕೊಂಡು ಬರುವವರ ಸಂಖ್ಯೆ ಹೆಚ್ಚಿದೆ. ಕೆಲವೊಮ್ಮೆ ಟಿಕೆಟ್‌ ದೊರಕದಾಗಿದೆ. ಸಫಾರಿ ಕೇಂದ್ರಕ್ಕೆ ನೇರವಾಗಿ ಬರುವವರಿಗೂ ಸಹ, ಸಫಾರಿಗೆ ತೆರಳುವ ವಾಹನದಲ್ಲಿ ಸೀಟು ಲಭ್ಯವಿದ್ದರೆ ಆಫ್‌ಲೈನ್‌ನಲ್ಲಿ ನೀಡಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಕಪ್ಪು ಚಿರತೆ ಕಂಡು ಖುಷಿಪಟ್ಟರು: ‘ಎಂಟು ವರ್ಷಗಳಿಂದ ನಾಗರಹೊಳೆಯ ಅಭಯಾರಣ್ಯಕ್ಕೆ ವನ್ಯಜೀವಿಗಳ ಛಾಯಾಗ್ರಹಣಕ್ಕೆಂದೇ ಬರುತ್ತಿರುವೆ. ಒಂದು ತಿಂಗಳಿಗೂ ಹೆಚ್ಚಿನ ಅವಧಿಯಿಂದಲೂ ಸಫಾರಿ ಜೋನ್‌ನಿಂದ ದೂರವಾಗಿದ್ದ ಕಪ್ಪು ಚಿರತೆ (ಬ್ಲಾಕ್‌ ಪ್ಯಾಂಥರ್‌) ಸೋಮವಾರ ಗೋಚರಿಸಿತು. ನಮ್ಮ ತಂಡದಲ್ಲಿದ್ದ ಸದಸ್ಯರ ಸಂತಸಕ್ಕೆ ಪಾರವೇ ಇರಲಿಲ್ಲ’ ಎಂದು ಬೆಂಗಳೂರಿನ ಹವ್ಯಾಸಿ ವನ್ಯಜೀವಿ ಛಾಯಾಗ್ರಾಹಕ ಹರಿಪ್ರಸಾದ್‌ ವಸಿಷ್ಠ ತಿಳಿಸಿದರು.

‘ಚಿರತೆಗಳ ನಡುವಿನ ಕಾಳಗದಲ್ಲಿ ಗಾಯಗೊಂಡು, ಕಣ್ಣಿನ ಬಳಿ ರಕ್ತ ಸುರಿಸುತ್ತಿದ್ದ ಕಪ್ಪು ಚಿರತೆಯನ್ನು ತಿಂಗಳಿಗೂ ಹಿಂದೆ ನೋಡಿದ್ದೆ. ಬಳಿಕ, ಸಫಾರಿಗೆ ತೆರಳಿದ್ದ ಯಾರೊಬ್ಬರ ಕಣ್ಣಿಗೂ ಕಂಡಿರಲಿಲ್ಲ. ಇದೀಗ ಗಾಯ ವಾಸಿಯಾದ ಬ್ಲಾಕ್ ಪ್ಯಾಂಥರ್ ನೋಡಿ ಖುಷಿಯಾಯ್ತು’ ಎಂದು ಅವರು ಹೇಳಿದರು.


ಕಾಕನಕೋಟೆ ಸಫಾರಿಯಲ್ಲಿ ಗೋಚರಿಸಿದ ಕಪ್ಪು ಚಿರತೆ

ಆಗಾಗ್ಗೆ ಕಾಣಿಸಿದೆ: ಆರ್‌ಎಫ್‌ಒ

‘ಕಾಡಿನೊಳಗೆ ತಮ್ಮ ವ್ಯಾಪ್ತಿಗಾಗಿ ವನ್ಯ ಪ್ರಾಣಿಗಳ ನಡುವೆ ಕಾಳಗ ನಡೆಯುವುದು ಸಹಜ. ಕಾಕನಕೋಟೆಯ ಸಫಾರಿ ವಲಯದಲ್ಲಿ ಕಪ್ಪು ಚಿರತೆ ಬಹು ದಿನಗಳಿಂದ ಕಾಣಿಸಿಕೊಳ್ಳದಿದ್ದರೂ, ದಮ್ಮನಕಟ್ಟೆ ಅರಣ್ಯದಲ್ಲಿ ಎರಡ್ಮೂರು ಬಾರಿ ಕಾಣಿಸಿಕೊಂಡಿದೆ’ ಎಂದು ಆರ್‌ಎಫ್‌ಒ ಸಿದ್ದರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಾಕನಕೋಟೆ ಸಫಾರಿ ಕೇಂದ್ರದಲ್ಲಿ ಮೂರು ಬಸ್‌ಗಳಿವೆ. ನಿತ್ಯವೂ 100ಕ್ಕೂ ಹೆಚ್ಚು ಜನರು ಸಫಾರಿಗಾಗಿ ಭೇಟಿ ನೀಡುತ್ತಿದ್ದಾರೆ. ಜಂಗಲ್‌ ಲಾಡ್ಜ್‌ ರೆಸಾರ್ಟ್‌ನ ಸಫಾರಿ ಕೇಂದ್ರದಲ್ಲಿ 200 ಜನರು ಕಾಡೊಳಗೆ ಸುತ್ತು ಹಾಕುತ್ತಾರೆ. ದಿನದಿಂದ ದಿನಕ್ಕೆ ಈ ಸಂಖ್ಯೆ ಹೆಚ್ಚುತ್ತಿದೆ’ ಎಂದರು.

ಕಪ್ಪು ಚಿರತೆಯ ವ್ಯಾಪ್ತಿ ತುಂಬಾ ದೊಡ್ಡದು. ಸೋಮವಾರ ಕಾಣಿಸಿಕೊಂಡಿದ್ದು, ಕಾಕನಕೋಟೆ ಸಫಾರಿಗೆ ತೆರಳಿದ್ದವರಿಗೆ ಖುಷಿ ಕೊಟ್ಟಿದೆ
-ಮಹೇಶ್‌ಕುಮಾರ್‌, ಹುಲಿ ಯೋಜನಾ ನಿರ್ದೇಶಕ, ನಾಗರಹೊಳೆ ಅಭಯಾರಣ್ಯ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.