ಭಾನುವಾರ, ಸೆಪ್ಟೆಂಬರ್ 15, 2019
30 °C

‘ಎರವಲು ಬಿಡಿ; ನಮ್ಮದನ್ನು ಹುಡುಕಿ’– ಸಚಿವ ಜೆ.ಸಿ.ಮಾಧುಸ್ವಾಮಿ

Published:
Updated:
Prajavani

ಮೈಸೂರು: ‘ನಮಗೂ ವ್ಯಾಮೋಹ ಹೆಚ್ಚಿದೆ. ನಮ್ಮದೇನಿಲ್ಲ. ನಮ್ಮನ್ನಾಳಿದವರ ಸಂಸ್ಕೃತಿಯೇ ಶ್ರೇಷ್ಠ ಎಂಬ ಮನಸ್ಥಿತಿ ಮೈಗೂಡುತ್ತಿದೆ. ಮೊದಲು ಬೇರೆಯವರದನ್ನು ಎರವಲು ಪಡೆಯುವುದನ್ನು ಬಿಡಿ; ನಮ್ಮದ್ದನ್ನು ಹುಡುಕಿ’ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

‘ನಮ್ಮದ್ದಕ್ಕೆ ಪೋಷಿಸಿ. ಪಾಲಿಶ್‌ ಮಾಡಿ ಹೊಳಪು ನೀಡಿ. ಆಗ ಅರಿವಾಗುತ್ತದೆ ಯಾರದ್ದು ಶ್ರೇಷ್ಠ ಎಂಬುದು’ ಎಂದು ಭಾನುವಾರ ಮುಸ್ಸಂಜೆ ನಗರದಲ್ಲಿ ನಡೆದ ‘ಭಾರತ ಒಂದು ಮರುಶೋಧನೆ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ತಿಳಿಸಿದರು.

‘ನಮ್ಮೊಳಗಿನ ಶಕ್ತಿಯನ್ನು ಮೊದಲು ನಾವೇ ಕಂಡುಕೊಳ್ಳಬೇಕಿದೆ. ನಂತರ ಮುನ್ನುಗ್ಗಿದರೆ ಎತ್ತರದ ಬೆಟ್ಟವೂ ನಮ್ಮ ಕಾಲ ಕೆಳಗಿರುತ್ತದೆ’ ಎಂದು ಹೇಳಿದರು.

‘ಆಡಳಿತದಲ್ಲಿ ಕನ್ನಡ ಭಾಷೆ ಮರೆಯಾಗುವ ಸ್ಥಿತಿಯಲ್ಲಿದೆ. ಹೊರಗಿನಿಂದ ಬರುವ ಯಾವೊಬ್ಬ ಅಧಿಕಾರಿಯೂ ಕನ್ನಡವನ್ನು ಕಲಿಯಲ್ಲ. ನಮ್ಮವರು ಸಮರ್ಪಕವಾಗಿ ಬಳಸಲ್ಲ. ತಾಯ್ನುಡಿಯ ಉಳಿವಿಗೆ ಎಲ್ಲರೂ ಶ್ರಮಿಸಬೇಕಿದೆ’ ಎಂದು ಮಾಧುಸ್ವಾಮಿ ಹೇಳಿದರು.

‘ಪ್ರಕಾಶನ, ಸಿನಿಮಾ, ರಾಜಕಾರಣ ಎಲ್ಲವೂ ಒಂದೇ ಆಗಿವೆ. ಒಂದೆರೆಡು ಪುಸ್ತಕ ಮಾರಾಟವಾಗುತ್ತವೆ. ಸಿನಿಮಾ ಯಶಸ್ವಿಯಾಗುತ್ತವೆ. ನಾವೂ ಅಷ್ಟೇ ಮೂರ್ನಾಲ್ಕು ಬಾರಿ ಗೆಲ್ಲುತ್ತೇವೆ. ಉಳಿದಂತೆ ಸೋಲಿನ ಸರಪಳಿ ಇದ್ದೇ ಇರುತ್ತದೆ. ಯಾವಾಗಲೂ ಒಂದೇ ರೀತಿಯಿರಲ್ಲ’ ಎಂದು ಪ್ರಕಾಶನದ ಸಂಕಷ್ಟವನ್ನು ಸಚಿವರು ಬಿಚ್ಚಿಟ್ಟರು.

ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ ಮಾತನಾಡಿ ‘ನಮ್ಮ ಇತಿಹಾಸದಲ್ಲಿ ಸತ್ಯಾಂಶವಿಲ್ಲ. ಪ್ರಭುತ್ವದ ಹೊಗಳಿಕೆ, ವಿಜೃಂಭಣೆಯೇ ಹೆಚ್ಚಿದೆ. ಸತ್ಯದ ಹೊಳಹುವಿನ ದಾರಿ ಹಿಡಿದು, ಹುಡುಕಿದಾಗ ಮಾತ್ರ ಇತಿಹಾಸದ ನೈಜ ಚಿತ್ರಣ ಹೊರಬೀಳಲಿದೆ. ಚರಿತ್ರೆ ಎಂಬುದು ಒಂದು ದೃಷ್ಟಿಕೋನದ ಅಧ್ಯಯನವಲ್ಲ. ಅಂತರಶಿಸ್ತೀಯ, ಬಹು ಆಯಾಮದ ಅಧ್ಯಯನ’ ಎಂದು ಹೇಳಿದರು.

ಮಾಜಿ ಶಾಸಕ ತೋಂಟದಾರ್ಯ, ಪತ್ರಕರ್ತೆ ಶಾಂತಮ್ಮ, ಕೃತಿಯ ಲೇಖಕ ರವಿ ಹಂಜ್, ಪ್ರಕಾಶಕ ಡಿ.ಎನ್.ಲೋಕಪ್ಪ ಮಾತನಾಡಿದರು. ಸುತ್ತೂರಿನ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

Post Comments (+)