ಶನಿವಾರ, ಡಿಸೆಂಬರ್ 7, 2019
24 °C
‘ಜೆಟ್ಟಿಹುಂಡಿ: ಚರಿತ್ರೆಯ ಹೆಜ್ಜೆಗಳು’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಬಾಲ್ಯ–ಹಳ್ಳಿಯ ಜೀವನ ನೆನಪಿಸಿಕೊಂಡ ಸಿದ್ದರಾಮಯ್ಯ

ನಮ್ ದೊಡ್ಡಪ್ಪನೇ ಕೋಳಿ ಕಳ್ಳನಿದ್ದ: ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ನಮ್ ದೊಡ್ಡಪ್ಪನೇ ಕೋಳಿ ಕಳ್ಳನಿದ್ದ. ಕದ್ದ ಕೋಳಿಯ ಮಾಂಸವನ್ನು ರಾತ್ರಿ ತಿನ್ತಿದ್ದ. ಬೆಳಗೆದ್ದ ಕೂಡಲೇ ಕೋಳಿ ಕಳೆದುಕೊಂಡ ಮನೆಯ ಹೆಂಗಸರ ಜತೆ ತಾನೂ ಕೂತು ಎಲ್ಲರನ್ನೂ ಬೈತಿದ್ದ’ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಭಾನುವಾರ ಇಲ್ಲಿ ತಮ್ಮ ಬಾಲ್ಯದ ಜೀವನ ನೆನಪಿಸಿಕೊಂಡರು.

ಬಸವರಾಜು ಸಿ.ಜೆಟ್ಟಿಹುಂಡಿ ರಚಿತ ‘ಜೆಟ್ಟಿಹುಂಡಿ: ಚರಿತ್ರೆಯ ಹೆಜ್ಜೆಗಳು’ ಪುಸ್ತಕ ಬಿಡುಗಡೆ ಮಾಡಿ ತಮ್ಮ ಹಳ್ಳಿ ಜೀವನದ ಹಲವು ನೆನಪುಗಳನ್ನು ಸಭಿಕರೊಂದಿಗೆ ಹಂಚಿಕೊಂಡರು.

‘ಮುಖ್ಯಮಂತ್ರಿ ಆಗುವ ತನಕವೂ ಎರಡು ವರ್ಷಕ್ಕೊಮ್ಮೆ ನಡೆಯುವ ನಮ್ಮೂರ ಜಾತ್ರೆಯಲ್ಲಿ ವೀರ ಮಕ್ಕಳ ಕುಣಿತ ಕುಣಿಯುತ್ತಿದ್ದೆ. ಯಾರಾದರೂ ಟೀಕೆ ಮಾಡ್ಯಾರು ಎಂದು ಸಿ.ಎಂ ಆದ ಬಳಿಕ ನಿಲ್ಲಿಸಿದೆ’ ಎಂದು ಹೇಳಿದರು.

‘ಈಗ ಹಳ್ಳಿಗಳಲ್ಲಿ ಯಾವ ಆಚರಣೆಯೂ ಇಲ್ಲ. ಹಬ್ಬದ ಸಂದರ್ಭ ಆಡುತ್ತಿದ್ದ ದೇಸಿ ಆಟಗಳು ನಿಂತಿವೆ. ಇಸ್ಪೀಟ್ ಜೋರಾಗಿದೆ. ಕುಡುಕರ ಕಿರಿಕಿರಿ ಹೆಚ್ಚಿದೆ. ಹಳ್ಳಿ ಬದುಕಿನ ಚಿತ್ರಣವನ್ನು ಹತ್ತಿರದಿಂದಲೇ ನೋಡಿದ್ದಕ್ಕೆ ನಾನು ಮುಖ್ಯಮಂತ್ರಿಯಾಗಿದ್ದಾಗ ಅನ್ನಭಾಗ್ಯ, ಶೂ ಭಾಗ್ಯ, ವಿದ್ಯಾಸಿರಿ ಯೋಜನೆ ಜಾರಿಗೊಳಿಸಿದೆ’ ಎಂದು ತಿಳಿಸಿದರು.

‘1983ರಲ್ಲಿ ಚುನಾವಣೆಗೆ ನಿಂತಾಗ ಹಳ್ಳಿಗಳ ಜನರೇ ಎಲೆ–ಅಡಿಕೆ ಜತೆ ದುಡ್ಡು ಕೊಡ್ತಿದ್ದರು. ಆಗ ₹ 63,000 ಖರ್ಚಾಗಿತ್ತು. ಒಂದು ಚುನಾವಣೆ ಮುಗಿದ ಬಳಿಕ ಜನರು ಕೊಟ್ಟ ₹ 2 ಲಕ್ಷ ದುಡ್ಡು ಉಳಿದಿತ್ತು. ಸ್ನೇಹಿತರ ಸಲಹೆಯಂತೆ ಸಾಲ ಮಾಡಿ ಒಂದು ಮನೆ ಕಟ್ಟಿಕೊಂಡೆ. ಅದನ್ನು ಮಾರಿ ಮತ್ತೊಂದು ಕಟ್ಟಿದೆ. ಆ ಮನೆಯನ್ನೂ ಮಾರಿದೆ. ಮಾರಿದರೂ ನನ್ನ ಮೇಲೆ ಪ್ರಕರಣವಿದೆ’ ಎಂದರು.

‘ಈಗ ಚುನಾವಣಾ ಚಿತ್ರಣವೇ ಬದಲಾಗಿದೆ. ಜನರು ಹಾಳಾಗಿಲ್ಲ. ನಾವೇ ಹಾಳು ಮಾಡಿದ್ದೇವೆ. ರಂಗಪ್ಪ ನೀನು ಚುನಾವಣೆಗೆ ನಿಂತಿದ್ದಲ್ಲಪ್ಪ. ಈಗಿನ ಚುನಾವಣೆ ಹೆಂಗಪ್ಪ?’ ಎಂದು ಸಿದ್ದರಾಮಯ್ಯ, ಜೆಡಿಎಸ್‌ನಿಂದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜ ಕ್ಷೇತ್ರದ ಅಭ್ಯರ್ಥಿಯಾಗಿದ್ದ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್‌.ರಂಗಪ್ಪ ಅವರನ್ನು ಕಿಚಾಯಿಸುತ್ತಿದರು. ರಂಗಪ್ಪ ವೇದಿಕೆಯಲ್ಲೇ ಕೈಮುಗಿದರು.

ಸಾಹಿತಿ ಸಿ.ಪಿ.ಕೃಷ್ಣಕುಮಾರ್‌, ಕಾ.ತ.ಚಿಕ್ಕಣ್ಣ, ಪ್ರೊ.ಸಿ.ನಾಗಣ್ಣ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಎನ್‌.ಎಂ.ತಳವಾರ, ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್‌ಕುಮಾರ್ ಮಾತನಾಡಿದರು.

ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಸೋಮಶೇಖರ್‌, ಕುಲಸಚಿವ ಡಾ.ಆರ್.ಶಿವಪ್ಪ, ಮಣಿಪ್ರಕಾಶನದ ಮಂಜೇಗೌಡ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)