ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಚಾರಿಕತೆಯಿಂದ ಮತ ಚಲಾಯಿಸಿ: ಬ್ರಾಹ್ಮಣ ಸಮುದಾಯಕ್ಕೆ ದಿನೇಶ್ ಗುಂಡೂರಾವ್‌ ಮನವಿ

Last Updated 15 ಏಪ್ರಿಲ್ 2019, 20:29 IST
ಅಕ್ಷರ ಗಾತ್ರ

ಮೈಸೂರು: ‘ಸರ್ವೇ ಜನಾಃ ಸುಖಿನೋ ಭವಂತು’ ಎಂದು ಹೇಳುವ ಬ್ರಾಹ್ಮಣರು ಇದನ್ನು ಬಾಯಿ ಮಾತಿಗೆ ಸೀಮಿತ ಮಾಡಿಕೊಳ್ಳಬಾರದು. ಎಲ್ಲರ ಶ್ರೇಯಸ್ಸನ್ನು ಬಯಸುವ ಕಾಂಗ್ರೆಸ್‌ ಅಭ್ಯರ್ಥಿಗೆ ಮತ ಹಾಕುವ ಮೂಲಕ ವೈಚಾರಿಕತೆ ಹಾಗೂ ಸೃಜನಶೀಲತೆ ಮೆರೆಯಬೇಕು ಎಂದು ಕೆಪಿಸಿಸಿ ರಾಜ್ಯ ಘಟಕದ ಅಧ್ಯಕ್ಷ ದಿನೇಶ್ ಗುಂಡೂರಾವ್‌ ಮನವಿ ಮಾಡಿದರು.

ಬ್ರಾಹ್ಮಣ ಸಮುದಾಯದ ಮುಖಂಡರು ಸೋಮವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಬಾಯಿಯಲ್ಲಿ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹೇಳಿ ಒಂದು ವರ್ಗಕ್ಕೆ ಮಾತ್ರ ಹಿತ ಬಯಸುವ ಬಿಜೆಪಿ ಪರ ಕೆಲಸ ಮಾಡಬಾರದು. ಬ್ರಾಹ್ಮಣರೆಲ್ಲಾ ಬಿಜೆಪಿಗೆ ಮತ ಹಾಕುತ್ತಾರೆ ಎಂಬ ಭಾವನೆ ಸಮಾಜದಲ್ಲಿ ಇದೆ. ಇದು ಸತ್ಯಕ್ಕೆ ದೂರವಾದ ಮಾತು ಎಂಬುದನ್ನು ಬ್ರಾಹ್ಮಣರು ತೋರಿಸಿಕೊಡಬೇಕಿದೆ. ಬ್ರಾಹ್ಮಣರು ಬಿಜೆಪಿಯ ಸ್ವತ್ತೂ ಅಲ್ಲ ಎನ್ನುವುದು ಈ ಚುನಾವಣೆಯಲ್ಲಿ ತೋರಿಸಿಕೊಡಬೇಕಿದೆ’ ಎಂದು ಅವರು ಹೇಳಿದರು.

ವಿಜಯಶಂಕರ್‌ ನಡತೆಯಲ್ಲಿ ಬ್ರಾಹ್ಮಣ: ವಿಜಯಶಂಕರ್‌ ಜಾತಿಯಲ್ಲಿ ಬ್ರಾಹ್ಮಣ ಅಲ್ಲದೇ ಇರಬಹುದು. ಆದರೆ, ನಡತೆಯಲ್ಲಿ ಅವರು ಬ್ರಾಹ್ಮಣರೇ ಎಂದು ವಿಶ್ಲೇಷಿಸಿದರು.

ಕರ್ಮದಲ್ಲಿ ಅವರು ಬ್ರಾಹ್ಮಣ. ಭಯ, ಭಕ್ತಿ, ಸೌಮ್ಯ ಸ್ವಭಾವ, ಸರಳ ವ್ಯಕ್ತಿತ್ವವಿದೆ. ಆಡಂಬರವಿಲ್ಲ. ಉದ್ರೇಕದ ಮಾತನಾಡುವುದಿಲ್ಲ. ಸ್ಥಿತಪ್ರಜ್ಞ ವ್ಯಕ್ತಿ. ಇದಕ್ಕೆ ಸಂಪೂರ್ಣ ವಿರುದ್ಧವಾಗಿರುವ ಬಿಜೆಪಿಯ ಪ್ರತಾಪ ಸಿಂಹ ಸಂಸದ ಹುದ್ದೆಗೆ ಕಪ್ಪುಚುಕ್ಕಿಯಾಗಿದ್ದಾರೆ. ಘನತೆ ಹಾಗ ಗೌರವದಿಂದ ನಡೆದುಕೊಳ್ಳುವುದು ಅವರ ಜಾಯಮಾನದಲ್ಲೇ ಇಲ್ಲ ಎಂದು ಕುಟುಕಿದರು.

‘ಬ್ರಾಹ್ಮಣರಿಗೆ ಕಾಂಗ್ರೆಸ್‌ ಮನ್ನಣೆ ನೀಡಿದೆ. ಬಿಜೆಪಿಯ ಕೈಯಲ್ಲಿ ಅದು ಸಾಧ್ಯವಾಗಿಲ್ಲ. ಬ್ರಾಹ್ಮಣರ ಅಭಿವೃದ್ಧಿ ನಿಗಮ ಸ್ಥಾಪನೆಯಾಗಿದ್ದು ಕಾಂಗ್ರೆಸ್‌ನಿಂದ. ನಿಗಮದಲ್ಲಿ ಈಗಾಗಲೇ ₹ 25 ಕೋಟಿ ಇದೆ. ಅದನ್ನು ₹ 100 ಕೋಟಿಗೆ ಏರಿಸಲಾಗುತ್ತಿದೆ. ಈ ಕೆಲಸ ಬಿಜೆಪಿಗೆ ಮುಂಚೆ ಏಕೆ ಮಾಡಲಾಗಲಿಲ್ಲ. ಅಲ್ಲದೇ, ಈಗ ವಿಧಾನಸಭೆಯ ಅಧ್ಯಕ್ಷ ರಮೇಶ್‌ ಕುಮಾರ್ ಬ್ರಾಹ್ಮಣ. ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ಸಚಿವ. ಕೆಪಿಸಿಸಿ ರಾಜ್ಯ ಘಟಕದ ಅಧ್ಯಕ್ಷನಾದ ನಾನು ಬ್ರಾಹ್ಮಣ. ಬ್ರಾಹ್ಮಣರಿಗೆ ಸಿಕ್ಕಿರುವ ಮನ್ನಣೆ ಇದಲ್ಲವೇ’ ಎಂದು ಅವರು ಪ್ರಶ್ನಿಸಿದರು.

ಎಲ್ಲ ಸಮುದಾಯಗಳನ್ನು ಸೇರಿಸಿಕೊಂಡು ದೇಶ ಕಟ್ಟಬೇಕು. ಒಂದೇ ಒಂದು ಸಮುದಾಯದಿಂದ ದೇಶ ಕಟ್ಟಲು ಸಾಧ್ಯವೇ ಇಲ್ಲ. ಅಲ್ಲದೇ, ಬಿಜೆಪಿಗೆ ಮತ ನೀಡದವರನ್ನು ಪಾಕಿಸ್ತಾನಕ್ಕೆ ಕಳುಹಿಸಿ ಎಂದು ಬಿಜೆಪಿಯವರು ಹೇಳುತ್ತಾರೆ. ಇದಕ್ಕಿಂತ ಆತಂಕದ ವಿಚಾರವೇನು? ಇಂತಹ ದೇಶ ಒಡೆಯುವ ವಿಚಾರಗಳನ್ನು ಬ್ರಾಹ್ಮಣರು ತಿರಸ್ಕರಿಸಬೇಕು. ತಾತ್ಕಾಲಿಕ ಅಧಿಕಾರಕ್ಕೆ ಮಾರು ಹೋಗದೇ ನಿಜವಾದ ಅರ್ಥದಲ್ಲಿ ದೇಶಕಟ್ಟುವ ಕೆಲಸಕ್ಕೆ ಕೈ ಜೋಡಿಸಬೇಕು ಎಂದು ಅವರು ಕೋರಿದರು.

ಸಭೆಯಲ್ಲಿ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಆರ್‌.ಮೂರ್ತಿ, ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಬ್ರಾಹ್ಮಣ ಸಮುದಾಯದ ಮುಖಂಡ ಕೆ.ರಘುರಾಮ್‌ ವಾಜಪೇಯಿ, ಮುಖಂಡರಾದ ವೀಣಾ, ನಾರಾಯಣಸ್ವಾಮಿ, ಜೇಸುದಾಸ್, ಕೃಷ್ಣ, ಲೋಕೇಶ್‌ ರಾವ್‌, ಡಿ.ಎಸ್‌.ರವಿಶಂಕರ್, ಐಶ್ವರ್ಯಾ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT