ಗುರುವಾರ , ಸೆಪ್ಟೆಂಬರ್ 16, 2021
24 °C
ಒಳಹರಿವಿನ ಪ್ರಮಾಣ ಹೆಚ್ಚಳ; 30 ಸಾವಿರ ಕ್ಯುಸೆಕ್‌ ನೀರು ಹೊರಗೆ

ಕಬಿನಿ‌ ಜಲಾಶಯ ಮುಂಭಾಗದ ಸೇತುವೆ ಮುಳುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಎಚ್.ಡಿ.ಕೋಟೆ: ಕಬಿನಿ ಜಲಾಶಯದ ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದು, ಅಣೆಕಟ್ಟೆಯಿಂದ 30 ಸಾವಿರ ಕ್ಯುಸೆಕ್ ನೀರನ್ನು ಹೊರಗೆ ಬಿಡಲಾಗಿದೆ. ಇದರಿಂದ ಜಲಾಶಯ ಮುಂಭಾಗದ ಸೇತುವೆ ಮುಳುಗಡೆಯಾಗಿದೆ.

‘ಕೇರಳದ ವೈನಾಡು ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, 22 ಸಾವಿರ ಕ್ಯುಸೆಕ್‌ ನೀರು ಹರಿದುಬರುತ್ತಿದೆ. ಜಲಾಶಯದ ಗರಿಷ್ಠ ಮಟ್ಟ 2,284 ಅಡಿ ಇದ್ದು, ಈಗ 2,281.5 ಅಡಿಯಷ್ಟು ಭರ್ತಿಯಾಗಿದೆ. ಒಳಹರಿವು ಹೆಚ್ಚಾಗಿರುವುದರಿಂದ ನದಿಗೆ 30 ಸಾವಿರ ಕ್ಯುಸೆಕ್‌ ನೀರನ್ನು ಬಿಡಲಾಗುತ್ತಿದೆ’ ಎಂದು ಜಲಾಶಯದ ಇಇ ಸುರೇಶ್ ಬಾಬು ತಿಳಿಸಿದರು.

ಹ್ಯಾಂಡ್ ಪೋಸ್ಟ್‌ನಿಂದ ಎನ್.ಬೇಗೂರಿಗೆ ಸಂಪರ್ಕ ಕಡಿತಗೊಂಡಿದೆ. ಬಿದರಹಳ್ಳಿ, ತೆರಣಿಮುಂಟಿ, ನಂಜನಾಥ ಪುರ, ಕಂದೇಗಾಲ, ಮೊಸರಹಳ್ಳ, ಬಸಾಪುರ, ಕಳಸೂರು, ಕೆಂಚನಹಳ್ಳಿ, ಮೂರ್ ಬಂದ್, ಭೀಮನಕೊಲ್ಲಿ ಎನ್.ಬೇಗೂರು, ಜಕ್ಕಳ್ಳಿ, ಬೀರಂಬಳ್ಳಿ, ಗಂಡತ್ತೂರು ಗ್ರಾಮಗಳಿಗೆ ಸಂಚಾರ ವ್ಯವಸ್ಥೆ ಬಂದ್‌ ಆಗಿದೆ.

‘ಕೆಲ ಗ್ರಾಮಗಳಿಗೆ ತೆರಳಲು ದ್ವಿಚಕ್ರ ವಾಹನ ಹಾಗೂ ಪಾದಚಾರಿಗಳಿಗೆ ಅಣೆಕಟ್ಟೆ ಮೇಲೆ ಸಂಚರಿಸಲು ಅವಕಾಶ ನೀಡಲಾಗಿದೆ. ಲಘು ಮತ್ತು ಭಾರಿ ವಾಹನಗಳ ಸಂಚಾರವನ್ನು ನಿರ್ಬಂರ್ಧಿಸಲಾಗಿದೆ’ ಎಂದು ಕಬಿನಿ ಜಲಾಶಯದ ಸಹಾಯಕ ಕಾರ್ಯ ಪಾಲಕ ಎಂಜಿನಿಯರ್‌ ಜನಾರ್ದನ್‌ ತಿಳಿಸಿದರು.

‘ಜಲಾಶಯ ಮುಂಭಾಗದ ಸೇತುವೆ ಮುಳುಗಡೆಯಾದರೆ 25ಕ್ಕೂ ಹೆಚ್ಚು ಗ್ರಾಮಗಳಿಗೆ ಸಂಪರ್ಕ ಕಡಿತಗೊಳ್ಳುತ್ತದೆ. ಕಳೆದ ವರ್ಷ ಸೇತುವೆ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದ್ದರು. ಆದರೆ, ಕಾಮಗಾರಿ ಇನ್ನೂ ಆರಂಭಗೊಂಡಿಲ್ಲ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಬೀರಂಬಳ್ಳಿ ಪ್ರಭಾಕರ ಆರೋಪಿಸಿದರು.

‘50 ಕುಟುಂಬಗಳಿಗೆ ಸಂಕಷ್ಟ’

‘ಜಲಾಶಯದಿಂದ ಹೊರಹರಿವು ಜಾಸ್ತಿಯಾದರೆ ಬಿದರಹಳ್ಳಿ ಸರ್ಕಲ್‌ನ 50 ಕುಟುಂಬಗಳಿಗೆ ಸಂಕಷ್ಟ ಕಟ್ಟಿಟ್ಟಬುತ್ತಿ. ಪ್ರವಾಹದಿಂದ ನಲುಗುವಂತಾಗುತ್ತದೆ’ ಎಂದು ಗ್ರಾಮದ ಮಣಿ ಅಳಲು ತೋಡಿಕೊಂಡರು.

‘ಎರಡು ವರ್ಷಗಳ ಹಿಂದೆ ಜಲಾಶಯದ ನೀರಿನ ಮಟ್ಟ ಜಾಸ್ತಿಯಾಗಿ ಮನೆಗಳು ಜಲಾವೃತಗೊಂಡಿದ್ದವು. ಮನೆ ಕಳೆದುಕೊಂಡವರಿಗೆ ಪುನರ್ವಸತಿ ಕಲ್ಪಿಸುವುದಾಗಿ ಸರ್ಕಾರ ಆಶ್ವಾಸನೆ ನೀಡಿತ್ತು. ಆದರೆ, ಈವರೆಗೂ ಯಾವುದೇ ಸೌಲಭ್ಯ ಕಲ್ಪಿಸಿಲ್ಲ’ ಎಂದು ಮಹೇಶ ಆರೋಪಿಸಿದರು.

* ನದಿ ಪಾತ್ರದ ಜನರು ಸುರಕ್ಷಿತ ಪ್ರದೇಶಗಳಿಗೆ ತೆರಳಬೇಕು. ಮುನ್ನೆಚ್ಚರಿಕೆ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

–ಎಸ್.ಎನ್.ನರಗುಂದ, ತಹಶೀಲ್ದಾರ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು