ಮತದಾರರಿಗೆ ಆಮಿಷ: ಚುನಾವಣಾ ಆಯೋಗಕ್ಕೆ ದೂರು–ಬಿ.ಎಸ್.ಯಡಿಯೂರಪ್ಪ

ಸೋಮವಾರ, ಏಪ್ರಿಲ್ 22, 2019
33 °C
ಕಾರ್ಯಕರ್ತರ ಸಭೆಯಲ್ಲಿ ಹೇಳಿಕೆ; ವಿ.ಶ್ರೀನಿವಾಸ ಪ್ರಸಾದ್‌ ಪರ ಪ್ರಚಾರ

ಮತದಾರರಿಗೆ ಆಮಿಷ: ಚುನಾವಣಾ ಆಯೋಗಕ್ಕೆ ದೂರು–ಬಿ.ಎಸ್.ಯಡಿಯೂರಪ್ಪ

Published:
Updated:
Prajavani

ನಂಜನಗೂಡು: ‘ಮಂಡ್ಯದಲ್ಲಿ ಮತದಾರರಿಗೆ ಹಣ ಹಂಚುವ ಸಂಬಂಧ ಸಂಸದ ಶಿವರಾಮೇಗೌಡ ಪುತ್ರ ಚೇತನ್‌ ಗೌಡ ಹಾಗೂ ಜೆಡಿಎಸ್‌ ಮುಖಂಡ ರಮೇಶ್‌ ನಡುವೆ ದೂರವಾಣಿ ಸಂಭಾಷಣೆ ನಡೆದಿದ್ದು, ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ನಗರದ ವಿದ್ಯಾವರ್ಧಕ ಮೈದಾನದಲ್ಲಿ ಭಾನುವಾರ ನಡೆದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ₹150 ಕೋಟಿ ಖರ್ಚು ಮಾಡಿ ಮತದಾರರನ್ನು ಖರೀದಿ ಮಾಡುತ್ತೇವೆ. ಪ್ರತಿ ಬೂತ್‌ಗೆ ₹5 ಲಕ್ಷ ಹಣ ಹಂಚಿಕೆ ಮಾಡಲಾಗುತ್ತದೆ ಎಂಬ ವಿಚಾರ ಇವರಿಬ್ಬರ ದೂರವಾಣಿ ಸಂಭಾಷಣೆಯಿಂದ ಬಹಿರಂಗಗೊಂಡಿದೆ. ಹಾಸನದಲ್ಲಿ ತನ್ನ ಮಗನನ್ನು ಗೆಲ್ಲಿಸಲು ಸಚಿವ ರೇವಣ್ಣ ₹75 ಕೋಟಿ ಖರ್ಚು ಮಾಡುತ್ತಿದ್ದಾರೆ. ಹಣ, ಹೆಂಡ, ಅಧಿಕಾರ ಬಳಸಿ ವಾಮಮಾರ್ಗದಿಂದ ಚುನಾವಣೆ ಗೆಲ್ಲಲು ಹೊರಟಿದ್ದಾರೆ’ ಎಂದು ಆರೋಪಿಸಿದರು.

ಆದಾಯ ತೆರಿಗೆ ಇಲಾಖೆ ದಾಳಿ ನಡೆಸುವ ಹಿಂದಿನ ದಿನ, ದಾಳಿ ನಡೆಸುವ ಬಗ್ಗೆ ಬಹಿರಂಗಪಡಿಸಿದ್ದಾರೆ. ಈ ಮೂಲಕ ವಂಚಕರು ಸಾವಿರಾರು ಕೋಟಿ ರೂಪಾಯಿ ಕಪ್ಪುಹಣವನ್ನು ಬೇರೆಡೆಗೆ ಸಾಗಿಸಿದ್ದಾರೆ. ಗೋಪ್ಯತೆ ಪ್ರಮಾಣವನ್ನು ಕುಮಾರಸ್ವಾಮಿ ಮುರಿದಿದ್ದಾರೆ ಎಂದು ದೂರಿದರು.

‘ನಮ್ಮ ಅಭ್ಯರ್ಥಿ ವಿ.ಶ್ರೀನಿವಾಸ ಪ್ರಸಾದ್‌ರಂತಹ ವ್ಯಕ್ತಿ ಮತ್ತೆ ಸಿಗುವುದಿಲ್ಲ. ಚುನಾವಣೆಗೆ ನಿಲ್ಲುವುದಿಲ್ಲ ಎಂದಿದ್ದ ಅವರನ್ನು ಬಲವಂತದಿಂದ ಚುನಾವಣೆಗೆ ನಿಲ್ಲಿಸಿದ್ದೇನೆ. ಕ್ಷೇತ್ರದಲ್ಲಿ ವೀರಶೈವರ ಮಧ್ಯೆ ಜಾತಿಯ ವಿಷಬೀಜ ಭಿತ್ತಿ ದಾರಿ ತಪ್ಪಿಸುವ ಪ್ರಯತ್ನ ನಡೆಯುತ್ತಿದೆ. ವೀರಶೈವರು ವಿರೋಧಿಗಳ ಮಸಲತ್ತಿಗೆ ಬಲಿಯಾಗದೆ ಶ್ರೀನಿವಾಸ ಪ್ರಸಾದ್ ಅವರನ್ನು ಹೆಚ್ಚಿನ ಬಹುಮತದಿಂದ ಗೆಲ್ಲಿಸಿಕೊಡಬೇಕು’ ಎಂದು ಮನವಿ ಮಾಡಿದರು.

ಸಭೆಯಲ್ಲಿ ಲೋಕಸಭಾ ಕ್ಷೇತ್ರದ ಉಸ್ತುವಾರಿ ರಾಜೇಂದ್ರ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೋಟೆ ಎಂ.ಶಿವಣ್ಣ, ಶಾಸಕ ಬಿ.ಹರ್ಷವರ್ಧನ್, ಜಿ.ಪಂ ಸದಸ್ಯರಾದ ಮಂಗಳಾ ಸೋಮಶೇಖರ್, ದಯಾನಂದಮೂರ್ತಿ, ಮುಖಂಡರಾರ ಭಾರತೀಶಂಕರ್, ಕುಂಬರಳ್ಳಿ ಸುಬ್ಬಣ್ಣ, ಚಿಕ್ಕರಂಗನಾಯ್ಕ, ಕಾ.ಪು.ಸಿದ್ದಲಿಂಗಸ್ವಾಮಿ, ಜಯದೇವ್, ಕೆಂಡಗಣ್ಣಪ್ಪ, ಯು.ಎನ್.ಪದ್ಮನಾಭ ರಾವ್, ಬಾಲಚಂದ್ರ, ಸಂಜಯ್ ಶರ್ಮ, ಕಪಿಲೇಶ್, ಕೃಷ್ಣಪ್ಪಗೌಡ ಉಪಸ್ಥಿತರಿದ್ದರು.

‘ತಲೆತಿರುಕನಂತೆ ಹೇಳಿಕೆ ನೀಡಿದ ಸಿ.ಎಂ’

‘ಎರಡು ಹೊತ್ತು ಊಟಕ್ಕೆ ಗತಿಯಿಲ್ಲದವರು ಸೇನೆಗೆ ಸೇರುತ್ತಾರೆ. ಪುಲ್ವಾಮಾದಲ್ಲಿ ದಾಳಿ ನಡೆಸುವ ಬಗ್ಗೆ ನನಗೆ 2 ವರ್ಷಗಳ ಹಿಂದೆಯೇ ಮಾಹಿತಿ ಲಭ್ಯವಾಗಿತ್ತು. ಭಯೋತ್ಪಾದಕರ ವಿರುದ್ಧ ಭಾರತೀಯ ಸೇನೆ ನಡೆಸಿದ ನಿರ್ದಿಷ್ಟ ದಾಳಿ ಬಗ್ಗೆ ಸಾಕ್ಷ್ಯ ನೀಡಿ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಲೆತಿರುಕನಂತೆ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ದಾಳಿ ರಹಸ್ಯ ತಿಳಿದಿದ್ದರೆ ರಾಷ್ಟ್ರಪತಿ ಗಮನಕ್ಕೆ ತರಬಹುದಿತ್ತು. ಯೋಧರ ಬಗ್ಗೆ ಕೇವಲವಾಗಿ ಮಾತನಾಡುವ ಮೂಲಕ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಸೈನಿಕರನ್ನು ಅಪಮಾನಗೊಳಿಸಿದ್ದಾರೆ ಎಂದು ಯಡಿಯೂರಪ್ಪ ಹರಿಹಾಯ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !