ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್ಎನ್ಎಲ್ ರಕ್ಷಣೆಗೆ ನೌಕರರ ಒಗ್ಗಟ್ಟು

ಖಾಸಗಿ ಕಂಪನಿಗಳ ಜೊತೆಗೆ ಬಿಎಸ್ಎನ್ಎಲ್ ಪ್ರಬಲ ಸ್ಪರ್ಧೆ
Last Updated 9 ಜೂನ್ 2019, 19:45 IST
ಅಕ್ಷರ ಗಾತ್ರ

ಮೈಸೂರು: ‘ಪ್ರಸ್ತುತದಲ್ಲಿ ಗ್ರಾಹಕರು ಅನ್ಯ ದೇಶಿ ದೂರವಾಣಿ ಸಂಸ್ಥೆಗಳ ಚಂದಾದಾರರಾಗುತ್ತಿದ್ದಾರೆ. ಹೀಗಾಗಿ, ಸರ್ಕಾರಿ ಸಂಸ್ಥೆಯಾದ ಬಿಎಸ್ಎನ್ಎಲ್ ಖಾಸಗಿ ಕಂಪನಿಗಳ ಜೊತೆ ಸ್ಪರ್ಧೆ ನಡೆಸಬೇಕಾದ ಸನ್ನಿವೇಶ ಉಂಟಾಗಿದೆ’ ಎಂದು ಬಿಎಸ್ಎನ್ಎಲ್ ಬೆಂಗಳೂರು ಶಾಖೆಯ ಮುಖ್ಯ ವ್ಯವಸ್ಥಾಪಕ ಸುಶೀಲ್ ಕುಮಾರ್ ಮಿಶ್ರಾ ವಿಷಾದ ವ್ಯಕ್ತಪಡಿಸಿದರು.

ಬಿಎಸ್ಎನ್ಎಲ್ ಕೇಂದ್ರ ಕಚೇರಿಯಲ್ಲಿ ಭಾನುವಾರ ರಾಷ್ಟ್ರೀಯ ಟೆಲಿಕಾಂ ನೌಕರರ ಒಕ್ಕೂಟವು ಹಮ್ಮಿಕೊಂಡಿದ್ದ ಮೂರು ದಿನಗಳ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸಂಸ್ಥೆಯಲ್ಲಿನ ಆಂತರಿಕ ಸಮಸ್ಯೆಗಳನ್ನು ಮೊದಲು ಬಗೆಹರಿಸಿಕೊಳ್ಳಬೇಕು. ಎಲ್ಲರೂ ಒಗ್ಗೂಡಿ ಬಾಹ್ಯ ಒತ್ತಡಗಳನ್ನು ಕೂಲಂಕಷವಾಗಿ ವಿಶ್ಲೇಷಿಸಿದಾಗ ನಮ್ಮ ಗುರಿ–ಯೋಜನೆಗಳನ್ನು ಯಶಸ್ಸುಗೊಳಿಸಬಹುದು’ ಎಂದು ಅಭಿಪ್ರಾಯಪಟ್ಟರು.

ನವದೆಹಲಿಯ ರಾಷ್ಟ್ರೀಯ ದೂರವಾಣಿ ನೌಕರರ ಒಕ್ಕೂಟದ ‌(ಎನ್ಎಫ್‌ಟಿ) ಬಿಎಸ್ಎನ್ಎಲ್ ಪ್ರಧಾನ ಕಾರ್ಯದರ್ಶಿ ಚಂದೇಶ್ವರ್ ಸಿಂಗ್ ಮಾತನಾಡಿ, ‘ನಾವು ಯಾವುದೇ ಸರ್ಕಾರದ ಪರ ಕೆಲಸ ಮಾಡುತ್ತಿಲ್ಲ. ಜನ ಸೇವೆಯೇ ಸಂಸ್ಥೆಯ ಮುಖ್ಯ ಗುರಿ. ಕೇಂದ್ರದಲ್ಲಿ ನೂತನ ದೂರಸಂಪರ್ಕ ಮಂತ್ರಿಯಾಗಿರುವ ರವಿಶಂಕರ್ ಪ್ರಸಾದ್ ಅವರು ಬಿಎಸ್ಎನ್ಎಲ್ ಸಂಸ್ಥೆಯ ಅಭಿವೃದ್ಧಿಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಆದರೆ, ಸಂಸ್ಥೆಯ ಕಾರ್ಯವೈಖರಿಗಳಿಗೆ ತೊಂದರೆ ಕೊಡುವುದು ಹಾಗೂ ಸರ್ಕಾರಿ ಸೌಲಭ್ಯಗಳಲ್ಲಿ ಕಡಿತಗೊಳಿಸಲು ಕೇಂದ್ರ ಸರ್ಕಾರ ಮುಂದಾದರೆ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಇದಕ್ಕೆ ಪೂರಕವಾಗಿ ಮಾತನಾಡಿದ ಮೈಸೂರು ವೃತ್ತದ ಬಿಎಸ್ಎನ್ಎಲ್ ಪ್ರಧಾನ ಸಹಾಯಕ ವ್ಯವಸ್ಥಾಪಕ ಕೆ.ಎಲ್.ಜೈರಾಂ, ‘ಸರ್ಕಾರ ಎಲ್ಲ ಟೆಲಿಕಾಂ ಕಂಪನಿಗಳ ಸೇವೆಗಳ ಬೆಲೆಯನ್ನು ನಿರ್ಧರಿಸಬೇಕು. ಇದರಿಂದ ಎಲ್ಲ ಸಂಸ್ಥೆಗಳಿಗೆ ಅನುಕೂಲವಾಗುವುದು. ಜಿಯೊ ಕಂಪನಿಯ ಹಾವಳಿ ಹೆಚ್ಚಾಗಿದ್ದು, ಬಿಎಸ್ಎನ್ಎಲ್ ಪ್ರತಿಸ್ಪರ್ಧೆ ನೀಡಲು ಸಜ್ಜಾಗುತ್ತಿದೆ. ಸಂಸ್ಥೆಯಲ್ಲಿ ನೂತನವಾಗಿ ಸೇರಿರುವ ನೌಕರರಿಗೆ ಹೊಸ ತಂತ್ರಜ್ಞಾನದ ಬಗ್ಗೆ ಅರಿವನ್ನು ಮೂಡಿಸಿ, ಉತ್ತಮ ಗ್ರಾಹಕ ಸೇವಾ ಯೋಜನೆಗಳನ್ನು ಜಾರಿ ತರಲಾಗುವುದು. ಇದಕ್ಕೆ ಎಲ್ಲ ಬಿಎಸ್ಎನ್ಎಲ್ ಶಾಖೆಗಳ ಮತ್ತು ಸರ್ಕಾರಗಳ ಸಹಕಾರ ಅಗತ್ಯವಿದೆ’ ಎಂದರು.

ಸಮಿತಿಯ ಉಪ ಕಾರ್ಯದರ್ಶಿ ಕೆ.ಎಸ್.ಶೇಷಾದ್ರಿ ಮಾತನಾಡಿ, ‘ಭಾರತೀಯ ಟೆಲಿಕಾಂ ಸಂಸ್ಥೆಯ ರಕ್ಷಣೆ ಎಂದರೆ ಅದು ದೇಶದ ರಕ್ಷಣೆಯಾಗಿದೆ. ನಮ್ಮಲ್ಲಿ ಅಖಂಡತೆ ಇದ್ದಲ್ಲಿ ಗುಣಮಟ್ಟದ ಸೇವೆಗಳನ್ನು ದೇಶದೆಲ್ಲೆಡೆ ವಿಸ್ತರಿಸಬಹುದು’ ಎಂದು ಹೇಳಿದರು.

ಮೂರು ದಿನಗಳ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯಕಾರ್ಯಕ್ರಮಕ್ಕೆ ನವದೆಹಲಿಯ ಎನ್ಎಫ್‌ಟಿ ಬಿಎಸ್ಎನ್ಎಲ್‌ನ ಅಧ್ಯಕ್ಷ ಇಸ್ಲಾಂ ಅಹ್ಮದ್, ಬಿಎಸ್ಎನ್ಎಲ್ ಬೆಂಗಳೂರು ವೃತ್ತ ಅಧ್ಯಕ್ಷ ಎಸ್.ವಿ.ಅರಳಿ, ವೃತ್ತ ಕಾರ್ಯದರ್ಶಿ ಎ.ಸಿ.ಕೃಷ್ಣ ರೆಡ್ಡಿ, ಬಿಎಸ್ಎನ್ಎಲ್‌ನ ಶಾಖಾ ಅಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT