ಬಡವರ ಮೂಗಿಗೆ ತುಪ್ಪ ಸವರಿದ ಕಾಂಗ್ರೆಸ್‌: ಶಾಸಕ ಎನ್‌. ಮಹೇಶ್‌ ಆರೋಪ

ಬುಧವಾರ, ಏಪ್ರಿಲ್ 24, 2019
34 °C
ಬಹುಜನ ಸಮಾಜ ಪಕ್ಷದ ಮುಖಂಡರ ಸಭೆಯಲ್ಲಿ ಶಾಸಕ ಎನ್‌. ಮಹೇಶ್‌ ಆರೋಪ

ಬಡವರ ಮೂಗಿಗೆ ತುಪ್ಪ ಸವರಿದ ಕಾಂಗ್ರೆಸ್‌: ಶಾಸಕ ಎನ್‌. ಮಹೇಶ್‌ ಆರೋಪ

Published:
Updated:

ಮೈಸೂರು: ಬಡತನ ತೊಲಗಿಸಿ ದೇಶ ಉಳಿಸಿ ಎಂದು ಇಂದಿರಾಗಾಂಧಿ ಘೋಷಿಸಿದ 48 ವರ್ಷಗಳ ನಂತರವೂ ಬಡತನ ನಿರ್ಮೂಲನೆ ಆಗಿಲ್ಲ. ಈಗ, ಅವರ ಮೊಮ್ಮಗ ರಾಹುಲ್‌ ಗಾಂಧಿ, ಅಧಿಕಾರಕ್ಕೆ ಬಂದರೆ 5 ವರ್ಷಗಳಲ್ಲಿ ಬಡತನ ನಿರ್ಮೂಲನೆ ಮಾಡುವುದಾಗಿ ಬಡವರ ಮೂಗಿಗೆ ತುಪ್ಪ ಸವರುತ್ತಿದ್ದಾರೆ ಎಂದು ಶಾಸಕ ಎನ್‌. ಮಹೇಶ್‌ ದೂರಿದರು.

ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ವತಿಯಿಂದ ನಗರದಲ್ಲಿ ಗುರುವಾರ ಆಯೋಜಿಸಿದ್ದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರು 1971ರಲ್ಲಿ ‘ಗರೀಬಿ ಹಠಾವೊ ದೇಶ್‌ ಬಚಾವೊ’ ಎಂಬ ಘೋಷಣೆ ಮೊಳಗಿಸಿದ್ದರು. ಇದನ್ನು ನಂಬಿದ್ದ ಬಡವರು ಕಾಂಗ್ರೆಸ್‌ಗೆ ಮತ ಹಾಕಿದ್ದರು. ಈಗ ರಾಹುಲ್‌ ಗಾಂಧಿ ಅವರು ಚುನಾವಣಾ ಪ್ರಣಾಳಿಕೆಯಲ್ಲಿ, ಐದು ವರ್ಷಗಳಲ್ಲಿ ಬಡತನ ರೇಖೆಗಿಂತ ಕೆಳಗಿರುವ 5 ಕೋಟಿ ಕುಟುಂಬಗಳಿಗೆ ತಿಂಗಳಿಗೆ ₹6 ಸಾವಿರದಂತೆ ವರ್ಷಕ್ಕೆ ₹72 ಸಾವಿರ ನೀಡುವುದಾಗಿ ಘೋಷಿಸಿದ್ದಾರೆ. ಈ ಹಣ ಪಡೆದ ತಕ್ಷಣ ಜನರು ಬಡತನದಿಂದ ಮೇಲೆ ಬರುತ್ತಾರೆಯೇ ಎಂದು ಪ್ರಶ್ನಿಸಿದರು.

ದೇಶದಲ್ಲಿ ಕಾಂಗ್ರೆಸ್‌ ಪಕ್ಷವು 55ರಿಂದ 60 ವರ್ಷಗಳವರೆಗೆ ಆಳ್ವಿಕೆ ನಡೆಸಿದೆ. ಸಾಮಾನ್ಯವಾಗಿ ರಾಜಪ್ರಭುತ್ವದಲ್ಲಿ ಇದನ್ನು ಕಾಣಬಹುದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ 50 ವರ್ಷಗಳವರೆಗೆ ಒಂದೇ ಪಕ್ಷಕ್ಕೆ ಮತ ನೀಡಿದ್ದಾರೆ ಎಂದರೆ, ಆ ಪ್ರಭುತ್ವ ಚಲನಶೀಲತೆಯಿಂದ ಕೂಡಿಲ್ಲ ಎಂದರ್ಥ. ನಿಂತ ಪ್ರಜಾಪ್ರಭುತ್ವದಿಂದ ಪರಿಣಾಮಕಾರಿ ಬದಲಾವಣೆಗಳು ಕಂಡುಬರುವುದಿಲ್ಲ. ರಾಜಕೀಯ ವ್ಯವಸ್ಥೆ ನಿಂತ ನೀರಾದರೆ ಸಾಮಾಜಿಕ, ಆರ್ಥಿಕ ವ್ಯವಸ್ಥೆಯೂ ಸ್ಥಗಿತಗೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟರು.

ಕಾಂಗ್ರೆಸ್‌ನವರು ಮೋಸಗಾರರು, ಕಪಟಿಗಳು ಎಂಬುದಕ್ಕೆ ಅವರ ಯೋಜನೆಗಳೇ ಸಾಕ್ಷಿ. ರಾತ್ರಿ ಕಂಡ ಬಾವಿಗೆ ಹಗಲು ಬೀಳುವಷ್ಟು ಕುರುಡರಾದರೆ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯುವುದಿಲ್ಲ ಎಂದು ಎಚ್ಚರಿಸಿದರು.

ಮೋದಿ ವಿರುದ್ಧ ವಾಗ್ದಾಳಿ: ‘ಕಾಂಗ್ರೆಸ್‌ ಪಕ್ಷದ ದುರಾಡಳಿತ, ಭ್ರಷ್ಟಾಚಾರವನ್ನು ಮುಂದಿಟ್ಟುಕೊಂಡು 2014ರ ಚುನಾವಣೆ ಎದುರಿಸಿದ್ದ ಬಿಜೆಪಿಯು ಹೊಸ ಭರವಸೆ ಮೂಡಿಸಿತ್ತು. ವಿದೇಶಿ ಬ್ಯಾಂಕ್‌ಗಳಲ್ಲಿ ಇಟ್ಟಿರುವ ಕಾಳಧನವನ್ನು ತಂದು ಎಲ್ಲರ ಖಾತೆಗಳಿಗೆ ₹15 ಲಕ್ಷ ಹಾಕಲಾಗುವುದು. ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಪ್ರಣಾಳಿಕೆಯಲ್ಲಿ ಘೋಷಿಸಿದ್ದರು. ಆದರೆ, ಪ್ರಧಾನಿ ಮೋದಿಯವರು ಜನರ ಖಾತೆಗೆ ₹15 ಹಾಕಲಿಲ್ಲ. ಉದ್ಯೋಗಗಳನ್ನೂ ಸೃಷ್ಟಿಸಲಿಲ್ಲ. ಇಂದಿರಾಗಾಂಧಿ ಅವರ ಇನ್ನೊಂದು ರೂಪವೇ ನರೇಂದ್ರ ಮೋದಿ’ ಎಂದು ದೂರಿದರು.

ಮೈಸೂರು– ಕೊಡಗು ಲೋಕಸಭಾ ಕ್ಷೇತ್ರದ ಬಿಎಸ್‌ಪಿ ಅಭ್ಯರ್ಥಿ ಡಾ.ಬಿ.ಚಂದ್ರ, ಚುನಾವಣಾ ಉಸ್ತುವಾರಿ ಸೋಸಲೆ ಸಿದ್ದರಾಜು, ಬಿಎಸ್‌ಪಿ ಜಿಲ್ಲಾ ಘಟಕದ ಅಧ್ಯಕ್ಷ ಪ್ರಭುಸ್ವಾಮಿ, ನಗರ ಘಟಕದ ಅಧ್ಯಕ್ಷ ಎಂ.ಬಸವರಾಜು, ಪಕ್ಷದ ಮುಖಂಡರಾದ ಬೇಗಂ, ರಾಹುಲ್‌, ಶಿವಮಾದು, ಮಹದೇವ್‌, ಕುಮಾರ್‌, ಚಂದ್ರು, ಶ್ರೀನಿವಾಸ್‌, ನಾಗರಾಜ್‌ ಇದ್ದರು.

10ಕ್ಕೆ ಮಾಯಾವತಿ ಸಮಾವೇಶ
ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಏ.10ರಂದು ಬೆಳಿಗ್ಗೆ 11ಕ್ಕೆ ನಡೆಯುವ ಸಮಾವೇಶದಲ್ಲಿ ಮಾಯಾವತಿ ಪಾಲ್ಗೊಳ್ಳಲಿದ್ದಾರೆ. ಅವರು ಏ.9ರಂದು ಸಂಜೆ ಮೈಸೂರಿಗೆ ಬಂದು ಉಳಿದುಕೊಳ್ಳುತ್ತಾರೆ. ಮರು ದಿನ ಸಮಾವೇಶ ಮುಗಿಸಿಕೊಂಡು ಚೆನ್ನೈಗೆ ಹೊರಡಲಿದ್ದಾರೆ. ಕಾರ್ಯಕ್ರಮದಲ್ಲಿ ಸುಮಾರು 1 ಲಕ್ಷ ಜನರು ಸೇರುವ ನಿರೀಕ್ಷೆ ಇದೆ ಎಂದು ಎನ್‌.ಮಹೇಶ್‌ ಹೇಳಿದರು.

ಅದೇ ಮೈದಾನದಲ್ಲಿ ಏ.8ರಂದು ನಡೆಯುವ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ. ಆ ಕಾರ್ಯಕ್ರಮಕ್ಕೆ ಎಷ್ಟು ಮಂದಿ ಪಾಲ್ಗೊಳ್ಳಲಿದ್ದಾರೋ ಅಷ್ಟೇ ಜನರು ಮಾಯಾವತಿ ಕಾರ್ಯಕ್ರಮದಲ್ಲೂ ಪಾಲ್ಗೊಳ್ಳಬೇಕು. ಏಕೆಂದರೆ, ಮೋದಿ ಹಾಲಿ ಪ್ರಧಾನಿಯಾದರೆ, ಮಾಯಾವತಿ ಭಾವಿ ಪ್ರಧಾನಿ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !