ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗಾರಿಕೆ ಬೆಳವಣಿಗೆಗೆ ನೆರವಾದ ಎಚ್‌ಕೆಸಿಸಿಐ

ವಿಚಾರ ಸಂಕಿರಣದಲ್ಲಿ ಉದ್ಯಮಿ ಎಸ್‌.ಎಸ್‌.ಪಾಟೀಲ ಕಡಗಂಚಿ ಅಭಿಪ್ರಾಯ
Last Updated 2 ಏಪ್ರಿಲ್ 2018, 6:47 IST
ಅಕ್ಷರ ಗಾತ್ರ

ಕಲಬುರ್ಗಿ: ಜಿಲ್ಲೆಯೂ ಸೇರಿದಂತೆ ಈ ಭಾಗದ ಜಿಲ್ಲೆಗಳಲ್ಲಿ ಕೈಗಾರಿಕೆಗಳ ಸ್ಥಾಪನೆ ಹಾಗೂ ಅವುಗಳ ಬೆಳವಣಿಗೆಗೆ ಹೈದರಾಬಾದ್‌ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಘ(ಎಚ್‌ಕೆಸಿಸಿಐ)ವು ಶ್ರಮಿಸುತ್ತಿದೆ ಎಂದು ಉದ್ಯಮಿ ಎಸ್‌.ಎಸ್‌.ಪಾಟೀಲ ಕಡಗಂಚಿ ಹೇಳಿದರು.ಹೈದರಾಬಾದ್ ಕರ್ನಾಟಕ ಜನಪರ ಸಂಘರ್ಷ ಸಮಿತಿಯು ಅಂಜುಮ್–ತರಖಿ–ಉರ್ದು–ಎ–ಹಿಂದ್ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಹೈ.ಕ ಪ್ರದೇಶದ ಅಭಿವೃದ್ಧಿಯಲ್ಲಿ ಎಚ್‌ಕೆಸಿಸಿಐ ಪಾತ್ರ’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘1956ರಲ್ಲಿ ಹೇಮಚಂದ ಖೇಣಿ ಅವರು ಎಚ್‌ಕೆಸಿಸಿಐ ಸ್ಥಾಪಿಸಿದರು. ಸಣ್ಣ ಕೊಠಡಿಯಲ್ಲಿ ಸಂಸ್ಥೆಯ ಚಟುವಟಿಕೆಗಳು ನಡೆಯುತ್ತಿದ್ದವು. ಜಿಲ್ಲೆಯ ಶಿಕ್ಷಣ ಪ್ರೇಮಿಗಳು, ಉದ್ಯಮಿಗಳು ಬಂದು ಚರ್ಚೆ ನಡೆಸುತ್ತಿದ್ದರು. ಕ್ರಮೇಣ ಸಂಸ್ಥೆಯು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಹಕ್ಕೊತ್ತಾಯ ಮಾಡುವಷ್ಟರ ಮಟ್ಟಿಗೆ ಬೆಳೆಯಿತು’ ಎಂದು ತಿಳಿಸಿದರು.

ಎಚ್‌ಕೆಸಿಸಿಐ ಮಾಜಿ ಅಧ್ಯಕ್ಷ ಉಮಾಕಾಂತ ನಿಗ್ಗುಡಗಿ ಮಾತನಾಡಿ, ‘ಹೈ.ಕ ಭಾಗಕ್ಕೆ ಸಂಬಂಧಿಸಿದ ಯೋಜನೆಗಳನ್ನು ರೂಪಿಸುವಲ್ಲಿ ಎಚ್‌ಕೆಸಿಸಿಐ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ. ಐಟಿ ಪಾರ್ಕ್‌, ಜವಳಿ ಪಾರ್ಕ್, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ರೈಲ್ವೆ ವಿಭಾಗ, ಕಲಬುರ್ಗಿ–ಬೀದರ್ ರೈಲ್ವೆ ಮಾರ್ಗ ಹಾಗೂ ರಾಯಚೂರಿನಲ್ಲಿ ಐಐಐಟಿ ಸ್ಥಾಪನೆ ಎಚ್‌ಕೆಸಿಸಿಐ ಪ್ರಯತ್ನದಿಂದ ಕೈಗೂಡಿವೆ’ ಎಂದು ಹೇಳಿದರು.‘ಸಂಸ್ಥೆ ಪಕ್ಷಾತೀತವಾಗಿ ಕೆಲಸ ಮಾಡುತ್ತಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಪ್ರಸ್ತಾವಗಳನ್ನು ಸಲ್ಲಿಸುತ್ತಿದೆ. ಇದರ ಕಾರ್ಯವ್ಯಾಪ್ತಿ ಇನ್ನಷ್ಟು ವಿಸ್ತಾರಗೊಳ್ಳಬೇಕಾಗಿದೆ’ ಎಂದರು. 

ಸಮಿತಿಯ ಅಧ್ಯಕ್ಷ ಲಕ್ಷ್ಮಣ್ ದಸ್ತಿ ಮಾತನಾಡಿ,‘ಈ ಭಾಗಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸುವ ಪ್ರಯತ್ನವನ್ನು ಎಚ್‌ಕೆಸಿಸಿಐ ಮಾಡಬೇಕು. ಇದಕ್ಕಾಗಿ ಕಾಲಮಿತಿ ಹಾಗೂ ಶಿಸ್ತುಬದ್ಧ ಕ್ರಿಯಾಯೋಜನೆ ರೂಪಿಸಿಕೊಳ್ಳಬೇಕು. ಬೃಹತ್‌ ಉದ್ಯಮಗಳು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳು ಸ್ಥಾಪನೆ ಆಗುವಂತೆ ನೋಡಿಕೊಳ್ಳಬೇಕು’ ಎಂದರು. ‘ಏಮ್ಸ್‌ ಸ್ಥಾಪನೆ, 371(ಜೆ) ಅಡಿಯಲ್ಲಿ ವಿಶೇಷ ಪ್ಯಾಕೇಜ್‌ ಮಂಜೂರು ಹಾಗೂ ಪ್ರತ್ಯೇಕ ಸಚಿವಾಲಯ ತೆರೆಯುವುದು, ಕೇಂದ್ರ ಸರ್ಕಾರದಿಂದ ವಿಶೇಷ ಅನುದಾನ ಬಿಡುಗಡೆ, ತೊಗರಿ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿಗೆ ಎಚ್‌ಕೆಸಿಸಿಐ ಪ್ರಯತ್ನಿಬೇಕು’ ಎಂದು ಸಲಹೆ ನೀಡಿದರು.

ಎಚ್‌ಕೆಸಿಸಿಐ ಅಧ್ಯಕ್ಷ ಅಮರನಾಥ ಪಾಟೀಲ, ಉಪಾಧ್ಯಕ್ಷ ಶರಣಬಸಪ್ಪ ಪಪ್ಪಾ, ಕಾರ್ಯದರ್ಶಿ ಶಶಿಕಾಂತ ಬಿ.ಪಾಟೀಲ ಹಾಗೂ ಪದಾಧಿಕಾರಿಗಳನ್ನು ಸನ್ಮಾನಿಸಲಾ
ಯಿತು. ಉದ್ಯಮಿ ಉತ್ತಮಚಂದ ಸಿಂಗ್ವಿ, ಮಜಹರ್ ಹುಸೇನ್ ಇದ್ದರು.

**

ಎಚ್‌ಕೆಸಿಸಿಐ ಹಾಗೂ ಎಚ್‌ಕೆಇಎಸ್‌ ಈ ಭಾಗದ ಕಣ್ಣುಗಳಿದ್ದಂತೆ. ಶಿಕ್ಷಣ, ಕೈಗಾರಿಕೆಗಳ ಪ್ರಗತಿಗೆ ಕೊಡುಗೆ ನೀಡಿವೆ – ಉಮಾಕಾಂತ ನಿಗ್ಗುಡಗಿ, ಎಚ್‌ಕೆಸಿಸಿಐ ಮಾಜಿ ಅಧ್ಯಕ್ಷ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT