ಬಂದ್‌: ಕೆಎಸ್‌ಆರ್‌ಟಿಸಿಗೆ ₹1.25 ಕೋಟಿ ನಷ್ಟ

7
ಬಿಕೊ ಎಂದ ಬಸ್‌ ನಿಲ್ದಾಣ, ಪರದಾಡಿದ ಪ್ರಯಾಣಿಕರು

ಬಂದ್‌: ಕೆಎಸ್‌ಆರ್‌ಟಿಸಿಗೆ ₹1.25 ಕೋಟಿ ನಷ್ಟ

Published:
Updated:

ಮೈಸೂರು: ಭಾರತ ಬಂದ್ ಪ್ರಯುಕ್ತ ಕೆಎಸ್‌ಆರ್‌ಟಿಸಿಗೆ ₹1.25 ಕೋಟಿ ನಷ್ಟ ಸಂಭವಿಸಿದೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ. ಗ್ರಾಮಾಂತರ ವಿಭಾಗಕ್ಕೆ ಸುಮಾರು ₹ 1 ಕೋಟಿ ಹಾಗೂ ನಗರ ವಿಭಾಗಕ್ಕೆ ₹ 25 ಲಕ್ಷ ಉಂಟಾಗಿದೆ.

ಗ್ರಾಮಾಂತರ ವಿಭಾಗದಿಂದ ರಸ್ತೆಗಿಳಿಯಬೇಕಿದ್ದ 630 ಬಸ್‌ಗಳ ಪೈಕಿ ಸೋಮವಾರ 300 ಬಸ್‌ಗಳು ಸಂಚಾರ ನಡೆಸಿಲ್ಲ ಎಂದು ಗ್ರಾಮಾಂತರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ವಾಸು ತಿಳಿಸಿದರು.

‌ನಗರ ಬಸ್‌ನಿಲ್ದಾಣದಿಂದ ಹೊರಡಬೇಕಿದ್ದ ಸುಮಾರು 400 ಬಸ್‌ಗಳ ಪೈಕಿ 370 ಬಸ್‌ಗಳು ರಸ್ತೆಗಿಳಿಯಲಿಲ್ಲ ಎಂದು ನಗರ ಬಸ್‌ನಿಲ್ದಾಣದ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್ ಹೇಳಿದರು.

ಖಾಸಗಿ ಬಸ್‌ಗಳೂ ಸಂಚಾರದಿಂದ ದೂರ ಉಳಿದವು. ಇದರಿಂದ ನಗರದ ವಿವಿಧ ಬಡಾವಣೆಗಳಿಗೆ ತೆರಳಬೇಕಾದ ಪ್ರಯಾಣಿಕರು ಪರದಾಡಿದರು.

ಗ್ರಾಮಾಂತರ ಬಸ್‌ನಿಲ್ದಾಣ ಹಾಗೂ ನಗರ ಬಸ್‌ನಿಲ್ದಾಣಗಳು ಬಿಕೊ ಎಂದವು. ಸದಾ ಪ್ರಯಾಣಿಕರಿಂದ ಗಿಜಿಗುಡುತ್ತಿದ್ದ ನಿಲ್ದಾಣಗಳಲ್ಲಿ ಬೆರಳೆಣಿಕೆಯಷ್ಟು ಮಂದಿ ಮಾತ್ರ ಇದ್ದರು.

ನಸುಕಿನಿಂದಲೇ ಬಸ್‌ಗಳು ಡಿಪೊದಿಂದ ಹೊರಬರಲಿಲ್ಲ. ಚಾಲಕರು ಹಾಗೂ ನಿರ್ವಾಹಕರು ಕೆಲಸವಿಲ್ಲದೆ ಕುಳಿತುಕೊಳ್ಳಬೇಕಾಯಿತು. ನಿಲ್ದಾಣಕ್ಕೆ ಬಂದ ಪ್ರಯಾಣಿಕರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಾಪಸ್ ತಮ್ಮ ಮನೆಗಳಿಗೆ ತೆರಳಬೇಕಾಯಿತು. ಕೆಲವರು ರೈಲು ನಿಲ್ದಾಣದತ್ತ ಹೊರಟರು.

ಬಂದ್‌ ವಿಷಯ ಅರಿತಿದ್ದ ಬಹುತೇಕ ಮಂದಿ ಸಾರ್ವಜನಿಕರು ತಮ್ಮ ಪ್ರಯಾಣವನ್ನು ಮುಂದೂಡಿದ್ದರು. ತೀರಾ ಅನಿವಾರ್ಯವಾಗಿ ತೆರಳಬೇಕಾದವರು ಮಾತ್ರ ನಿಲ್ದಾಣಕ್ಕೆ ಬಂದಿದ್ದರು. ಇವರಲ್ಲಿ ಸಂಬಂಧಿಕರೊಬ್ಬರ ಅಂತಿಮ ದರ್ಶನಕ್ಕೆ ಹೋಗಬೇಕಾದವರು, ಕಾಯಿಲೆ ಬಿದ್ದವರಿಗೆ ಹಣ ನೀಡಲು, ಮದುವೆ ಸಮಾರಂಭಕ್ಕೆ ಹೋಗುವವರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು.

ಹೊರರಾಜ್ಯದಿಂದ ಬಂದಿದ್ದ ಪ್ರಯಾಣಿಕರು ನಿಲ್ದಾಣದಲ್ಲಿ ಪರದಾಡಿದರು. ತಡರಾತ್ರಿ ಬಸ್‌ ಹತ್ತಿ ನಸುಕಿಗೆ ಬಂದವರಿಗೆ ಉಪಾಹಾರ ಸಿಗದೆ ಹೈರಾಣಾದರು. ಬೇಕರಿಯಲ್ಲಿನ ಬನ್‌, ಬ್ರೆಡ್‌ಗಳನ್ನು ಸೇವಿಸಿ ಕಾಲ ಕಳೆದರು. ಮಧ್ಯಾಹ್ನದ ವೇಳೆಗೂ ಉಪಾಹಾರ ಮಂದಿರಗಳು ತೆರೆಯದೆ ಇದ್ದುದರಿಂದ ಹಸಿವಿನಿಂದ ಬಳಲಿದರು.

ಮೊಬೈಲ್‌ ಟೈಂಪಾಸ್‌

ಮೊಬೈಲ್‌ ಹಿಡಿದುಕೊಂಡು ಬಹುತೇಕ ಮಂದಿ ಚಾಟಿಂಗ್ ಹಾಗೂ ವಿವಿಧ ರೀತಿಯ ಆಟದಲ್ಲಿ ತೊಡಗಿಸಿಕೊಳ್ಳುವ ಮೂಲಕ ಕಾಲ ಕಳೆದರು. ಮೊಬೈಲ್ ಚಾರ್ಜ್ ಮಾಡಲು ಕೆಲವರು ಚಾರ್ಜರ್ ಪಾಯಿಂಟ್‌ ಹುಡುಕಾಡುತ್ತಿದ್ದರು. ಕೆಲವರು ನಿದ್ದೆಗೆ ಜಾರಿದರೆ, ಸ್ನೇಹಿತರ ಜತೆಗೂಡಿ ಬಂದಿದ್ದವರು ಹರಟೆಯಲ್ಲಿ ತೊಡಗಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !