3
ಜನರಿಲ್ಲದೆ ಬಿಕೋ ಎನ್ನುತ್ತಿದೆ ನಂಜನಗೂಡು ಹೊಸ ಬಸ್‌ ನಿಲ್ದಾಣ

ಬಸ್‌ ಬರುತ್ತದೆ, ಪ್ರಯಾಣಿಕರ ಸುಳಿವು ಇಲ್ಲ

Published:
Updated:
ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿರುವ ನಂಜನಗೂಡು ಹೊಸ ಬಸ್ ನಿಲ್ದಾಣ

ಮೈಸೂರು: ಒಂದರ ಹಿಂದೆ ಒಂದರಂತೆ ಬರುವ ಬಸ್ಸುಗಳು ನಿಲ್ದಾಣದಲ್ಲಿ ಕೆಲಹೊತ್ತು ನಿಲ್ಲುತ್ತವೆ. ಬಸ್ಸಿನಿಂದ ಇಳಿಯುವ ನಿರ್ವಾಹಕ ಸಂಚಾರ ನಿಯಂತ್ರಕರ ಬಳಿ ತೆರಳಿ ‘ಎಂಟ್ರಿ’ ಮಾಡಿಸಿ ವಾಪಸ್ ಬಸ್ಸನ್ನೇರಿ ‘ರೈಟ್’ ಎನ್ನುತ್ತಿದ್ದಂತೆಯೇ ಅಲ್ಲಿಂದ ಹೊರಡುತ್ತದೆ. ಬಸ್ಸಿನಿಂದ ಯಾವೊಬ್ಬ ಪ್ರಯಾಣಿಕ ಇಳಿಯುವುದಿಲ್ಲ ಅಥವಾ ಹತ್ತುವುದಿಲ್ಲ.

ನಂಜನಗೂಡು ಪಟ್ಟಣದಲ್ಲಿ ಚಾಮರಾಜನಗರ ಬೈಪಾಸ್‌ ರಸ್ತೆ ಸಮೀಪ ನಿರ್ಮಿಸಲಾಗಿರುವ ಹೈಟೆಕ್ ಬಸ್‌ ನಿಲ್ದಾಣದಲ್ಲಿ ಕೆಲಹೊತ್ತು ನಿಂತರೆ ಈ ದೃಶ್ಯ ಕಂಡುಬರುತ್ತದೆ. ಉದ್ಘಾಟನೆಯಾಗಿ ಏಳು ತಿಂಗಳಾದರೂ ಹೊಸ ಬಸ್ ನಿಲ್ದಾಣ ಇನ್ನೂ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ಆರಂಭಿಸಿಲ್ಲ.

ಇಲ್ಲಿಗೆ ಪ್ರತಿದಿನ 100ಕ್ಕೂ ಅಧಿಕ ಬಸ್ಸುಗಳು ಬರುತ್ತವೆ. ಆದರೆ ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿದೆ. ಈ ನಿಲ್ದಾಣಕ್ಕೆ ಬರುವ ಬಹುತೇಕ ಬಸ್ಸುಗಳಲ್ಲಿ ಒಂದಿಬ್ಬರು ಪ್ರಯಾಣಿಕರು ಮಾತ್ರ ಇಳಿಯುವರು. ಬಸ್‌ ಹತ್ತುವವರ ಸಂಖ್ಯೆ ಅದಕ್ಕಿಂತಲೂ ಕಡಿಮೆ. ಈ ನಿಲ್ದಾಣದಲ್ಲಿ ಏಕಕಾಲದಲ್ಲಿ 8 ರಿಂದ 10 ಮಂದಿ ಕಾಣಸಿಗುವುದು ತೀರಾ ವಿರಳ.

ತಾಲ್ಲೂಕು ಕೇಂದ್ರದಲ್ಲಿರುವ ಬಸ್ ನಿಲ್ದಾಣ ಸದಾ ಪ್ರಯಾಣಿಕರಿಂದ ಗಿಜಿಗುಡುತ್ತಿರುತ್ತದೆ. ಬಸ್ಸುಗಳು ನಿಲ್ದಾಣದೊಳಗೆ ಬರುತ್ತಿದ್ದಂತೆಯೇ ಪ್ರಯಾಣಿಕರು ಓಡೋಡಿ ಹೋಗಿ ಹತ್ತುವರು. ನಿಲ್ದಾಣದಲ್ಲಿರುವ ವಾಣಿಜ್ಯ ಮಳಿಗೆಗಳ ಮುಂದೆ ವ್ಯಾಪಾರದ ಭರಾಟೆ ಇರುತ್ತದೆ. ಆದರೆ ಈ ನಿಲ್ದಾಣದ ಪರಿಸ್ಥಿತಿ ತೀರಾ ಭಿನ್ನವಾಗಿದೆ. ದಿನದ ಯಾವ ಹೊತ್ತಲ್ಲಿ ಹೋದರೂ ಇಲ್ಲಿ ಖಾಲಿ ಖಾಲಿ.

ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನವರಿ 11ರಂದು ನಂಜನಗೂಡಿನಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಹಲವು ಕೋಟಿ ಮೊತ್ತದ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ₹ 8.5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಬಸ್ ನಿಲ್ದಾಣ ಕೂಡಾ ಅಂದು ಉದ್ಘಾಟನೆಗೊಂಡಿತ್ತು.

ಈಗ ಇರುವ ನಿಲ್ದಾಣದ ಮೇಲಿನ ಒತ್ತಡ ಕಡಿಮೆ ಮಾಡುವುದಕ್ಕಾಗಿ ಹೊಸ ನಿಲ್ದಾಣ ನಿರ್ಮಿಸಲಾಗಿದೆ. ಆದರೆ ಪ್ರಯಾಣಿಕರು ಇದರ ಬಳಕೆಗೆ ಉತ್ಸಾಹ ತೋರದಿರುವುದು ಸಂಬಂಧಪಟ್ಟವರ ಚಿಂತೆಗೆ ಕಾರಣವಾಗಿದೆ. ಹೊಸ ನಿಲ್ದಾಣವು ಪಟ್ಟಣದಿಂದ ಅಲ್ಪ ಹೊರಭಾಗದಲ್ಲಿರುವುದು ಜನರು ಇತ್ತ ಸುಳಿಯದಿರುವುದಕ್ಕೆ ಇದೂ ಒಂದು ಕಾರಣ.

ಆರಂಭದ ಕೆಲವು ತಿಂಗಳುಗಳಿಗೆ ಹೋಲಿಸಿದರೆ ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರ ಪ್ರತಿಕ್ರಿಯೆ ಚೆನ್ನಾಗಿಯೇ ಇದೆ. ನಾಲ್ಕೈದು ತಿಂಗಳಲ್ಲಿ ಈ ನಿಲ್ದಾಣ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡುವ ವಿಶ್ವಾಸವಿದೆ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಅಶೋಕ್‌ಕುಮಾರ್ ತಿಳಿಸಿದರು. ಹೊಸ ನಿಲ್ದಾಣದಲ್ಲಿ ಪಿಕ್‌ ಅಪ್‌ ಪಾಯಿಂಟ್‌ ಇದ್ದು, ಹಳೆಯ ಬಸ್ ನಿಲ್ದಾಣಕ್ಕೆ ಬರುವ ಬಸ್ಸುಗಳು ಕಡ್ಡಾಯವಾಗಿ ಅಲ್ಲಿಗೂ ಹೋಗಬೇಕು ಎಂದು ಚಾಲಕರು ಮತ್ತು ನಿರ್ವಾಹಕರಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಕಾಂಕ್ರೀಟ್‌ ಕಾಮಗಾರಿಗೆ ಟೆಂಡರ್: ಬಸ್ ನಿಲ್ದಾಣ ಹೈಟೆಕ್‌ ಆಗಿದ್ದರೂ ಆವರಣದ ಒಳಗೆ ಕಾಂಕ್ರೀಟ್‌ ಹಾಸು ಇಲ್ಲ. ಮಣ್ಣುಹಾಕಿ ಸಮತಟ್ಟು ಮಾಡಲಾಗಿದೆ. ಮಳೆಬಂದರೆ ಕೆಸರು ಹಾಗೂ ಮಳೆಯಿಲ್ಲದಿದ್ದರೆ ದೂಳಿನ ಸಮಸ್ಯೆ ಉಂಟಾಗುತ್ತದೆ. ನೀರು ಸಿಂಪಡಿಸಿ ದೂಳು ಏಳದಂತೆ ನೋಡಿಕೊಳ್ಳಲಾಗುತ್ತದೆ.

ಬಸ್ ನಿಲ್ದಾಣದಲ್ಲಿ ಕಾಂಕ್ರೀಟ್ ನೆಲಹಾಸು ನಿರ್ಮಾಣಕ್ಕೆ ₹ 2 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಶೀಘ್ರದಲ್ಲಿ ಟೆಂಡರ್‌ ಪ್ರಕ್ರಿಯೆ ನಡೆಯಲಿದೆ. ಎರಡು ಮೂರು ತಿಂಗಳುಗಳಲ್ಲಿ ಕಾಂಕ್ರೀಟ್‌ ಹಾಕುವ ಕೆಲಸ ಆರಂಭವಾಗಲಿದೆ ಎಂದು ಅಶೋಕ್‌ಕುಮಾರ್ ಮಾಹಿತಿ ನೀಡಿದರು.

ಹಳೆಯ ನಿಲ್ದಾಣ ಮುಚ್ಚುವುದಿಲ್ಲ: ಹೊಸ ಬಸ್ ನಿಲ್ದಾಣ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಿದರೂ ಹಳೆಯ ಬಸ್ ನಿಲ್ದಾಣವನ್ನು ಮುಚ್ಚುವುದಿಲ್ಲ. ಎಕ್ಸ್‌ಪ್ರೆಸ್‌ ಮತ್ತು ಅಂತರರಾಜ್ಯ ಬಸ್ಸುಗಳನ್ನು ಹೊಸ ನಿಲ್ದಾಣದಿಂದಲೂ, ಗ್ರಾಮಾಂತರ ಪ್ರದೇಶಗಳಿಗೆ ಸಂಚರಿಸುವ ಬಸ್ಸುಗಳನ್ನು ಹಳೆಯ ನಿಲ್ದಾಣದಿಂದ ಕಾರ್ಯಾಚರಣೆ ನಡೆಸುವ ಯೋಜನೆಯಿದೆ ಎಂದು ಹೇಳಿದರು.

ವಾಣಿಜ್ಯ ಮಳಿಗೆಗಳು ತೆರೆದಿಲ್ಲ

ಬಸ್ ನಿಲ್ದಾಣದಲ್ಲಿ ಆರು ವಾಣಿಜ್ಯ ಮಳಿಗೆಗಳು, ಎರಡು ಕ್ಯಾಂಟೀನ್‌ ಮತ್ತು ಒಂದು ಡಿಪಾರ್ಟ್‌ಮೆಂಟಲ್ ಸ್ಟೋರ್‌ಗೆ ಅವಕಾಶವಿದೆ. ಆದರೆ ಯಾವುದೂ ಬಾಗಿಲು ತೆರೆದಿಲ್ಲ. ಜನರ ಓಡಾಟವಿಲ್ಲದ ಕಾರಣ ಇಲ್ಲಿ ವ್ಯಾಪಾರ ನಡೆಸಲು ಯಾರೂ ಮುಂದೆ ಬರುತ್ತಿಲ್ಲ. ವಾಣಿಜ್ಯ ಮಳಿಗೆಗಳನ್ನು ಬಾಡಿಗೆ ನೀಡುವ ಸಂಬಂಧ ಟೆಂಡರ್‌ ಕರೆಯಲಾಗಿದೆ. ನಿರೀಕ್ಷಿತ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದರು. ಹಳೆಯ ನಿಲ್ದಾಣದಲ್ಲಿರುವ ವಾಣಿಜ್ಯ ಮಳಿಗೆಗಳ ಮಾಲೀಕರಿಗೆ ಹೊಸ ನಿಲ್ದಾಣದಲ್ಲಿ ಮಳಿಗೆಗಳನ್ನು ತೆರೆಯುವಂತೆ ತಿಳಿಸಲಾಗಿದೆ ಎಂದರು.

ಕುಡಿಯುವ ನೀರಿನ ಘಟಕ

ನಂಜನಗೂಡು ಶಾಸಕ ಬಿ.ಹರ್ಷವರ್ಧನ್ ಅವರು ಕೆಲ ದಿನಗಳ ಹಿಂದೆ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ನಿಲ್ದಾಣದ ಆವರಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ತೆರೆಯಲು ಕ್ರಮವಹಿಸುವುದಾಗಿ ಅವರು ಭರವಸೆ ನೀಡಿದ್ದರು. ಹೊಸ ಬಸ್ ನಿಲ್ದಾಣ ಪೂರ್ಣವಾಗಿ ಕಾರ್ಯಾರಂಭ ಮಾಡುವವರೆಗೂ ನಗರಕ್ಕೆ ಬಂದು ಹೋಗುವ ಎಲ್ಲ ಬಸ್‌ಗಳೂ ಇಲ್ಲಿಗೆ ಬಂದು ಹೋಗುವಂತೆ ವ್ಯವಸ್ಥೆ ಮಾಡಲಾಗಿದೆ ಎಂದಿದ್ದರು.

ನಗರಕ್ಕೆ ಬಂದು ಹೋಗುವ ಎಲ್ಲ ಬಸ್ಸುಗಳೂ ಹೊಸ ನಿಲ್ದಾಣಕ್ಕೆ ಬರುವ ವ್ಯವಸ್ಥೆ ಮಾಡಿದ್ದೇವೆ. ಈ ನಿಲ್ದಾಣ ನಾಲ್ಕೈದು ತಿಂಗಳುಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಲಿದೆ
ಅಶೋಕ್ ಕುಮಾರ್, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !