ಭಾನುವಾರ, ನವೆಂಬರ್ 29, 2020
25 °C
ಮಾರುಕಟ್ಟೆಯಲ್ಲಿ ಕೆ.ಜಿ.ಗೆ ₹33 ದರ; ಜಯಪುರ ಭಾಗದ ಬೆಳೆಗಾರರಲ್ಲಿ ಹರ್ಷ

ರೈತರಿಂದ ಎಲೆಕೋಸು ನೇರ ಖರೀದಿ

ಬಿಳಿಗಿರಿ.ಆರ್ Updated:

ಅಕ್ಷರ ಗಾತ್ರ : | |

Prajavani

ಜಯಪುರ: ಲಾಕ್‌ಡೌನ್‌ ವೇಳೆ ಸಂಕಷ್ಟ ಅನುಭವಿಸಿದ್ದ ತರಕಾರಿ ಬೆಳೆಗಾರರು, ಈಗ ಉತ್ತಮ ಬೆಲೆ ಸಿಗುತ್ತಿರುವುದರಿಂದ ಕೊಂಚ ನಿರಾಳರಾಗಿದ್ದಾರೆ.

ಜಯ‍ಪುರ ಭಾಗದ ರೈತರು ಹೆಚ್ಚಾಗಿ ಎಲೆಕೋಸು ಬೆಳೆದಿದ್ದು, ಮಾರುಕಟ್ಟೆಯಲ್ಲಿ ಕೆ.ಜಿ.ಗೆ ₹33 ದರ ಇರುವುದರಿಂದ ಖುಷಿಯಾಗಿದ್ದಾರೆ.

ಈರುಳ್ಳಿ ದರ ಹೆಚ್ಚಳವಾಗಿ ರುವುದರಿಂದ ಹೊರ ರಾಜ್ಯದ ವರ್ತಕರು ಎಲೆಕೋಸು ಖರೀದಿಗೆ ಮುಗಿ ಬೀಳುತ್ತಿದ್ದಾರೆ. ಹೋಟೆಲ್‌ಗಳಲ್ಲೂ ಈರುಳ್ಳಿ ಬದಲಾಗಿ ಎಲೆಕೋಸನ್ನು ಹೆಚ್ಚಾಗಿ ಬಳಕೆ ಮಾಡುತ್ತಿರುವುದರಿಂದ ಸಹಜವಾಗಿ ಬೇಡಿಕೆ ಹೆಚ್ಚಾಗಿದೆ. 

ಮಾರುಕಟ್ಟೆಯಲ್ಲಿ ಎಲೆಕೋಸು ಆವಕ ಕಡಿಮೆ ಆಗಿರುವುದರಿಂದ ಡಿಢೀರನೆ ಬೆಲೆ ಹೆಚ್ಚಳವಾಗಿ ರೈತರಿಗೆ ವರವಾಗಿದೆ.

‘ಜಯಪುರ ಹೋಬಳಿಯಾದ್ಯಂತ 150 ಎಕರೆಗೂ ಅಧಿಕ ಪ್ರದೇಶದಲ್ಲಿ ಎಲೆಕೋಸು ಬೆಳೆಯಲಾಗಿದೆ. ಬೆಲೆ ಹೆಚ್ಚಳ ಆಗಿರುವುದರಿಂದ ರೈತರು ನರ್ಸರಿಗಳಿಂದ ಸಸಿಗಳನ್ನು ಖರೀದಿಸಿ ನಾಟಿ ಮಾಡುತ್ತಿದ್ದಾರೆ’ ಎಂದು ದಾರಿಪುರ ಚಾಮುಂಡೇಶ್ವರಿ ನರ್ಸರಿ ಮಾಲೀಕ ಗುರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಲಾಕ್‌ಡೌನ್‌ ವೇಳೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ತರಕಾರಿ ಬೆಳೆದು ನಷ್ಟ ಅನುಭವಿಸಿದ್ದೆ. ಮತ್ತೆ ಸಾಲ ಮಾಡಿ ಒಂದು ಎಕರೆಯಲ್ಲಿ ಎಲೆಕೋಸು ಬೆಳೆದೆ. ಉತ್ತಮ ದರ ಸಿಕ್ಕಿರುವುದರಿಂದ ವರ್ತಕರೇ ಹೊಲಗಳಿಗೆ ಬಂದು ಎಪಿಎಂಸಿ ನಿಗದಿಪಡಿಸಿದ ದರಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ. ಕೃಷಿಗೆ ಖರ್ಚು ಮಾಡಿದ ಆದಾಯ ಸಿಕ್ಕಿರುವುದರಿಂದ ಸಂತೋಷವಾಗಿದೆ’ ಎಂದು ಡಿ.ಸಾಲುಂಡಿ ಗ್ರಾಮದ ರೈತ ಬಸವೇಗೌಡ ತಿಳಿಸಿದರು.

‌‘ಎಲೆಕೋಸಿನ ಆವಕ ಕಡಿಮೆ ಯಾಗಿದ್ದು, ವರ್ತಕರಿಂದ ಬೇಡಿಕೆ ಹೆಚ್ಚಾಗಿದೆ. ಆದ್ದರಿಂದ ಕೆ.ಜಿ.ಗೆ ₹33 ದರ ಸಿಕ್ಕಿರುವುದರಿಂದ ರೈತರು ಖುಷಿಪಟ್ಟಿದ್ದಾರೆ. ತರಕಾರಿ ಬೆಲೆ ಪ್ರತಿದಿನ ಏರಿಳಿತ ಆಗುತ್ತಿರುತ್ತದೆ’ ಎಂದು ಮೈಸೂರು ಬಂಡಿಪಾಳ್ಯ ತರಕಾರಿ ಮಾರುಕಟ್ಟೆ ವ್ಯವಸ್ಥಾಪಕ ನಾಗರಾಜು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.