ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ‘ರಸ್ತೆಗೆ ಬಿ.ವಿ.ಕಾರಂತರ ಹೆಸರಿಡಿ’

ರಂಗಾಯಣದ ಕಲಾವಿದರು, ಹವ್ಯಾಸಿ ಕಲಾವಿದರು, ರಂಗಕರ್ಮಿಗಳಿಂದ ಅಭಿಯಾನ
Last Updated 31 ಡಿಸೆಂಬರ್ 2020, 14:49 IST
ಅಕ್ಷರ ಗಾತ್ರ

ಮೈಸೂರು: ವಿನೋಬಾ ರಸ್ತೆಯಿಂದ (ಕಲಾಮಂದಿರ) ಕುಕ್ಕರಹಳ್ಳಿ ಕೆರೆಗೆ ಹೋಗುವ ರಸ್ತೆಗೆ ‘ಪದ್ಮಶ್ರೀ ಬಿ.ವಿ.ಕಾರಂತ ರಸ್ತೆ’ ಎಂದು ನಾಮಕರಣ ಮಾಡುವಂತೆ ಒತ್ತಾಯಿಸಿ ರಂಗಾಯಣದ ಕಲಾವಿದರು, ಮೈಸೂರು ಹವ್ಯಾಸಿ ಕಲಾ ತಂಡಗಳ ವೇದಿಕೆ ಸದಸ್ಯರು ಹಾಗೂ ರಂಗಕರ್ಮಿಗಳು ಗುರುವಾರ ಅಭಿಯಾನ ಹಮ್ಮಿಕೊಂಡಿದ್ದರು.

ರಂಗಾಯಣದ ಪ್ರವೇಶದ್ವಾರದಲ್ಲಿ ಸಮಾಗಮಗೊಂಡಿದ್ದ ವೃತ್ತಿ ಕಲಾವಿದರು, ಹವ್ಯಾಸಿ ಕಲಾವಿದರು, ರಂಗಾಸಕ್ತರು ಬಿ.ವಿ.ಕಾರಂತರು ಸಂಯೋಜಿಸಿದ್ದ ರಂಗಗೀತೆಗಳನ್ನು ಹಾಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.

ಹುಣಸೂರು ರಸ್ತೆಯಿಂದ ಕುಕ್ಕರಹಳ್ಳಿ ಕೆರೆ ಕಡೆಗೆ ಹೋಗುವ ವೃತ್ತಕ್ಕೆ ‘ಬಿ.ವಿ.ಕಾರಂತ ವೃತ್ತ’ ಹಾಗೂ ರಸ್ತೆಗೆ ‘ಬಿ.ವಿ.ಕಾರಂತ ರಸ್ತೆ’ ಎಂದು ನಾಮಕರಣ ಮಾಡುವಂತೆ ಆಗ್ರಹಿಸಿದರು.

ರಂಗಾಯಣದ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ಮಾತನಾಡಿ, ‘ಭಾರತೀಯ ರಂಗಭೂಮಿಯಲ್ಲಿ ರಂಗಭೀಷ್ಮ ಎಂದೇ ಕರೆಸಿಕೊಂಡ ಬಿ.ವಿ.ಕಾರಂತರು, ರಂಗಾಯಣವನ್ನು ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ಹೆಸರನ್ನು ಈ ರಸ್ತೆಗೆ ನಾಮಕರಣ ಮಾಡುವಂತೆ ಮಹಾನಗರ ಪಾಲಿಕೆಗೆ ಮೂರು ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ, ಇದಕ್ಕೆ ಉತ್ತರಿಸುವ ಸೌಜನ್ಯವನ್ನೂ ಪಾಲಿಕೆ ಅಧಿಕಾರಿಗಳು ತೋರಿಸಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಇತ್ತೀಚೆಗೆ ಪಾಲಿಕೆ ಕೌನ್ಸಿಲ್‌ ಸಭೆ ನಡೆದರೂ, ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಹೀಗಾಗಿ, ಮತ್ತೊಮ್ಮೆ ಮೇಯರ್‌, ಪಾಲಿಕೆ ಆಯುಕ್ತರು ಹಾಗೂ ಈ ಭಾಗದ ಶಾಸಕರಿಗೆ ಮನವಿ ಸಲ್ಲಿಸುತ್ತೇವೆ. ನಮ್ಮ ಬೇಡಿಕೆ ಈಡೇರಿಸದಿದ್ದರೆ, ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುತ್ತೇವೆ. ಈ ಸಂಬಂಧ ಬಳಗವನ್ನು ರಚಿಸಿ, ಹೋರಾಟದ ರೂಪುರೇಷೆ ಸಿದ್ಧಪಡಿಸುತ್ತೇವೆ’ ಎಂದರು.

ಮೈಸೂರು ಹವ್ಯಾಸಿ ಕಲಾ ತಂಡಗಳ ವೇದಿಕೆ ಅಧ್ಯಕ್ಷ ಎಚ್‌.ಎಸ್‌.ಸುರೇಶ್‌ ಬಾಬು ಮಾತನಾಡಿ, ‘ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರ ಬಿಂದು ಈ ರಸ್ತೆ. ಇಲ್ಲಿ ಕಲಾಮಂದಿರ ಹಾಗೂ ರಂಗಾಯಣದಂತಹ ಪ್ರತಿಷ್ಠಿತ ಸಂಸ್ಥೆಗಳು ಇವೆ. ಇಲ್ಲಿಗೆ ರಂಗಕರ್ಮಿಗಳು, ಕಲಾವಿದರು, ರಂಗಾಸಕ್ತರು ಭೇಟಿ ನೀಡುತ್ತಾರೆ, ಹರಟುತ್ತಾರೆ. ಹೀಗಾಗಿ, ಕಾರಂತರ ಹೆಸರನ್ನು ಈ ರಸ್ತೆಗೆ ಇಡುವವರೆಗೂ ಹೋರಾಟವನ್ನು ಮುಂದುವರಿಸುತ್ತೇವೆ’ ಎಂದು ಹೇಳಿದರು.

ರಂಗಾಯಣದ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಕಲಾವಿದೆ ಅನಿತಾ ಕಾರ್ಯಪ್ಪ ಇದ್ದರು.

‘ಪ್ರತಿಷ್ಠಿತ ಸಂಸ್ಥೆಯಾಗಲು ಕಾರಂತರು ಕಾರಣ’

ಬಿ.ವಿ.ಕಾರಂತರು ತನ್ನ 12ನೇ ವಯಸ್ಸಿನಲ್ಲೇ ಊರನ್ನು ಬಿಟ್ಟು ಮೈಸೂರಿನ ಗುಬ್ಬಿ ಕಂಪನಿಗೆ ಬಂದು ಸೇರಿಕೊಂಡಿದ್ದರು. ರೆಪರ್ಟರಿಯನ್ನೂ ಸಹ ಮೈಸೂರಿನಲ್ಲೇ ಸ್ಥಾಪಿಸಿದ್ದರು. ಇಂದು ಇದು ಪ್ರತಿಷ್ಠಿತ ಸಂಸ್ಥೆಯಾಗಿ ಬೆಳೆದಿದೆ ಎಂದು ರಂಗಕರ್ಮಿ ಜಯರಾಂ ಪಾಟೀಲ ತಿಳಿಸಿದರು.

***

ಬಿ.ವಿ.ಕಾರಂತರು ಇಲ್ಲದಿದ್ದರೆ ರಂಗಾಯಣ ಇರುತ್ತಿರಲಿಲ್ಲ. ಅವರು ಕರ್ನಾಟಕದ ಹೆಮ್ಮೆ. ಅವರ ಹೆಸರನ್ನು ಇಡುವುದರಿಂದ ಈ ರಸ್ತೆಗೊಂದು ಅರ್ಥ ಬರುತ್ತದೆ.

–ರಾಜಶೇಖರ ಕದಂಬ, ರಂಗಕರ್ಮಿ

***

1989ರಲ್ಲಿ ರಂಗಾಯಣ ಸ್ಥಾಪಿಸಿದಾಗ ಇಲ್ಲಿ ಏನೂ ಇರಲಿಲ್ಲ. ಕಾರಂತರ ಪ್ರಯತ್ನದ ಫಲವಾಗಿ ರೆಪರ್ಟರಿ, ರಸ್ತೆ ನಿರ್ಮಾಣಗೊಂಡಿತು.

–ಮೈಮ್‌ ರಮೇಶ್‌, ರಂಗಾಯಣದ ನಿವೃತ್ತ ಕಲಾವಿದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT