ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೃಹಶೋಭೆ: ದಶಕದ ಸಡಗರ, ಗಮನಸೆಳೆದ ‘ಕೇಕ್ ಶೋ’

Last Updated 28 ಡಿಸೆಂಬರ್ 2019, 10:20 IST
ಅಕ್ಷರ ಗಾತ್ರ

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲೀಗ ಜಗದ್ವಿಖ್ಯಾತ ಅದ್ಭುತಗಳು ಮೈದಳೆದಿವೆ. ಅದೂ ಕೇಕ್‌ನಲ್ಲಿ. ಇವುಗಳ ವೀಕ್ಷಣೆಗೆ ನಿತ್ಯವೂ ಜನಸಾಗರವೇ ಜಮಾಯಿಸುತ್ತಿದೆ.

ಒಮ್ಮೆ ಕಣ್ತುಂಬಿಕೊಂಡವರು ಮಗದೊಮ್ಮೆ ಬರುವುದು ವಿಶೇಷವಾಗಿದೆ. ಕೇಕ್‌ನಲ್ಲಿ ನಿರ್ಮಾಣಗೊಂಡಿರುವ ತಾಜ್‌ಮಹಲ್‌, ಚೀನಾದ ಮಹಾಗೋಡೆ, ಜೋರ್ಡಾನ್‌ನ ಪೆಟ್ರಾ, ಪೆರುವಿನ ಮಚುಪಿಚು, ಇಟಲಿಯ ಕೊಲೆಸಿಯಮ್, ಮೆಕ್ಸಿಕೊದ ಚಿಚೆನ್ ಇಟ್ವಾ ಹಾಗೂ ಬ್ರೆಜಿಲ್‌ನ ಪ್ರವಾಸೋದ್ಯಮದ ಆಕರ್ಷಣೆ ಕ್ರೈಸ್ಟ್ ದಿ ರೆಡೀಮರ್ ಪ್ರತಿಮೆ ಪ್ರತಿಕೃತಿಗಳು ಇಲ್ಲಿವೆ.

‘ಗೃಹ ಶೋಭೆ’ ಹೆಸರಿನಡಿ ಅಂತರರಾಷ್ಟ್ರೀಯ ಗೃಹಬಳಕೆ ವಸ್ತುಗಳ ಬೃಹತ್ ಪ್ರದರ್ಶನದೊಳಗೆ, ಕ್ರಿಸ್‌ಮಸ್‌, ಹೊಸ ವರ್ಷಾಚರಣೆಯ ಸಂಭ್ರಮ ಇಮ್ಮಡಿಗೊಳಿಸಲಿಕ್ಕಾಗಿ ಡಾಲ್‌ಫಿನ್‌ ಬೇಕರ್ಸ್‌ ‘ಕೇಕ್ ಶೋ’ ಆಯೋಜಿಸಿದೆ. ಇದಕ್ಕೆ ದಶಕದ ಇತಿಹಾಸವಿದೆ. ವರ್ಷದಿಂದ ವರ್ಷಕ್ಕೆ ಕೇಕ್‌ ಶೋ ತನ್ನ ಜನಪ್ರಿಯತೆ ಹೆಚ್ಚಿಸಿಕೊಳ್ಳುವ ಜತೆಯಲ್ಲೇ ಗ್ರಾಹಕರನ್ನು ವಿಭಿನ್ನವಾಗಿ ತನ್ನತ್ತ ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.

ಅದ್ಭುತಗಳ ವೈಶಿಷ್ಟ್ಯ: ವಿಶ್ವದ ಏಳು ಅದ್ಭುತಗಳಲ್ಲಿ ಒಂದಾದ ತಾಜ್‌ಮಹಲ್‌ನ ಬೃಹತ್ ಕೇಕ್‌ ಪ್ರತಿಕೃತಿ ಎಲ್ಲರನ್ನೂ ಸೂಜಿಗಲ್ಲಿನಂತೆ ತನ್ನತ್ತ ಆಕರ್ಷಿಸುತ್ತಿದೆ. ಐಸಿಂಗ್ ಶುಗರ್, ಫುಡ್ ಕಲರ್, ಲಿಕ್ವಿಡ್ ಗ್ಲೂಕೋಸ್ ಮತ್ತು ಜೆಲಟಿನ್ ಬಳಸಿ, 7X16X16 ಅಡಿಯ ಮಾದರಿಯನ್ನು 12 ಜನರು, 18 ದಿನದಲ್ಲಿ ನಿರ್ಮಿಸಿದ್ದಾರೆ. ಇದರ ತೂಕ 1750 ಕೆಜಿಯಷ್ಟಿದೆ. ಕೇಕ್‌ ಶೋಗೆ ಭೇಟಿ ನೀಡುವ ಪ್ರತಿಯೊಬ್ಬರು ಈ ಪ್ರತಿಕೃತಿ ಮುಂಭಾಗ ತಮ್ಮ ಸೆಲ್ಫಿ ತೆಗೆದುಕೊಳ್ಳುವುದು ಸಹಜವಾಗಿದೆ.

ಜೋರ್ಡಾನ್‌ನ ಪೆಟ್ರಾ 5.5X10X4 ಅಡಿಯಿದೆ. 600 ಕೆ.ಜಿ.ತೂಕದ ಈ ಮಾದರಿಯನ್ನು ಆರು ಜನರು ಐದು ದಿನದಲ್ಲಿ ನಿರ್ಮಿಸಿದ್ದಾರೆ. ಚೀನಾದ ಮಹಾಗೋಡೆ 750 ಕೆ.ಜಿ.ತೂಕವಿದ್ದು, ಎಂಟು ಕೆಲಸಗಾರರು ಒಂಬತ್ತು ದಿನದಲ್ಲಿ ಅಂತಿಮ ರೂಪ ನೀಡಿದ್ದಾರೆ. ಇದು 5X12X4 ಅಡಿಯಿದೆ.

ಮೆಕ್ಸಿಕೊದ ಚಿಚೆನ್ ಇಟ್ವಾ 5X8X8 ಅಡಿಯಿದ್ದು, 800 ಕೆ.ಜಿ. ತೂಕವಿದೆ. ಎಂಟು ಜನರು ಐದು ದಿನದಲ್ಲಿ ಈ ಪ್ರತಿಕೃತಿ ರಚಿಸಿದ್ದಾರೆ. ಬ್ರೆಜಿಲ್‌ನ್‌ ಕ್ರೈಸ್ಟ್ ದಿ ರೆಡೀಮರ್ ಪ್ರತಿಮೆ 750 ಕೆ.ಜಿ. ತೂಕವಿದ್ದು, 9.5X8 X4ಅಡಿಯ ವಿನ್ಯಾಸ ಹೊಂದಿದೆ. ಎಂಟು ಜನರು 6 ದಿನದಲ್ಲಿ
ನಿರ್ಮಿಸಿದ್ದಾರೆ.

ಪೆರುವಿನ ಮಚು ಪಿಚು 4.5X10X 6 ಅಡಿಯ ವಿನ್ಯಾಸ ಹೊಂದಿದ್ದು, 500 ಕೆ.ಜಿ. ತೂಕವಿದೆ. ಐವರು ಆರು ದಿನದಲ್ಲಿ ಈ ಮಾದರಿ ರಚಿಸಿದ್ದಾರೆ. ಇಟಲಿಯ ಕೊಲೊಸಿಯಮ್ 300 ಕೆ.ಜಿ. ತೂಕದಿದ್ದು, 5X10X6 ಅಡಿಯ ವಿನ್ಯಾಸದ್ದಾಗಿದೆ. 8 ಜನ ಕೆಲಸಗಾರರು ಐದು ದಿನದಲ್ಲಿ ತಯಾರಿಸಿದ್ದಾರೆ. ಎಲ್ಲ ಪ್ರತಿಕೃತಿಗಳು ಐಸಿಂಗ್ ಶುಗರ್, ಫುಡ್ ಕಲರ್, ಲಿಕ್ವಿಡ್ ಗ್ಲೂಕೋಸ್ ಮತ್ತು ಜೆಲಟಿನ್‌ನಿಂದ ನಿರ್ಮಾಣವಾಗಿವೆ.

‘ಇವು ಪ್ರದರ್ಶನಕ್ಕೆ ಸೀಮಿತ. ತಿನ್ನಲಲ್ಲ. ಹಲವು ದಿನವಿದ್ದರೂ ಕೊಂಚವೂ ಹಾಳಾಗಲ್ಲ. ಪ್ರದರ್ಶನದ ಬಳಿಕ ವಿಲೇವಾರಿ ಮಾಡುತ್ತೇವೆ. ಕ್ರಿಸ್‌ಮಸ್‌, ಹೊಸ ವರ್ಷಾಚರಣೆಗಾಗಿಯೇ ಡಾಲ್ಫಿನ್ 20ಕ್ಕೂ ಹೆಚ್ಚು ತರಹೇವಾರಿ ಕೇಕ್‌ಗಳನ್ನು ತಯಾರಿಸುತ್ತಿದೆ. ನಿತ್ಯವೂ ಕೇಕ್‌ ಸವಿಯಲು ಜನಜಂಗುಳಿ ಜಮಾಯಿಸುತ್ತಿದೆ’ ಎಂದು ಡಾಲ್‌ಫಿನ್‌ ಬೇಕರ್ಸ್‌ ವ್ಯವಸ್ಥಾಪಕ ಶಾರಿಕ್ ತಿಳಿಸಿದರು.

‘ಕೇಕ್ ಮಾಡೆಲ್ ಕಣ್ತುಂಬಿಕೊಳ್ಳುವುದೇ ನಮಗೆ ಖುಷಿ. ಗೆಳತಿಯರು ಗುಂಪಾಗಿ ಎರಡನೇ ಬಾರಿಗೆ ಬಂದಿದ್ದೇವೆ. ವಿಶ್ವದ ಅದ್ಭುತಗಳ ಮುಂಭಾಗ ನಿಂತು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದೆವು. ತರಹೇವಾರಿ ಕೇಕ್‌ ಸವಿದೆವು’ ಎಂದು ಚಂದನಾ, ಜಜನಿ, ಸುರಭಿ ’ಮೆಟ್ರೊ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT