ಪ್ರಚಾರ ಒಂದೇ ದಿನಕ್ಕೆ ಸೀಮಿತ

ಶುಕ್ರವಾರ, ಏಪ್ರಿಲ್ 26, 2019
24 °C
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಾಣಿಸದ ಪ್ರಚಾರದ ಭರಾಟೆ

ಪ್ರಚಾರ ಒಂದೇ ದಿನಕ್ಕೆ ಸೀಮಿತ

Published:
Updated:

ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಭಾನುವಾರ ಲೋಕಸಭಾ ಚುನಾವಣೆಯ ಪ್ರಚಾರದ ಅಬ್ಬರ ಜೋರಾಗಿತ್ತು. ಆದರೆ ಸೋಮವಾರ ಎಲ್ಲವೂ ಶಾಂತವಾಗಿತ್ತು. ಪ್ರಚಾರದ ಭರಾಟೆ ಎಲ್ಲೂ ಕಾಣಿಸಲಿಲ್ಲ. ಪ್ರಮುಖ ನಾಯಕರ ಸುಳಿವು ಇರಲಿಲ್ಲ.

ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರು ಭಾನುವಾರ ಇಡೀ ದಿನ ಮೈತ್ರಿ ಅಭ್ಯರ್ಥಿ ಸಿ.ಎಚ್‌.ವಿಜಯಶಂಕರ್ ಪರ ಪ್ರಚಾರ ಕೈಗೊಂಡು ಉಭಯ ಪಕ್ಷಗಳ ಕಾರ್ಯಕರ್ತರಲ್ಲಿ ಹುರುಪು ತುಂಬಿದ್ದರು.

ಕ್ಷೇತ್ರದ ವ್ಯಾಪ್ತಿಯ ಕಡಕೊಳ, ಜಯಪುರ, ಸಿದ್ದಲಿಂಗಪುರ, ಇಲವಾಲದಲ್ಲಿ ಪ್ರಚಾರ ಕೈಗೊಂಡಿದ್ದರು. 13 ವರ್ಷಗಳ ಮುನಿಸು ಮರೆತು ಪರಸ್ಪರ ಜತೆಯಾಗಿದ್ದ ನಾಯಕರು ಮೈತ್ರಿ ಅಭ್ಯರ್ಥಿಯ ಗೆಲುವಿಗೆ ಬಲ ತುಂಬುವ ಕೆಲಸ ಮಾಡಿದ್ದರು. ಆದರೆ ಈ ಅಬ್ಬರದ ಪ್ರಚಾರ ಒಂದೇ ದಿನಕ್ಕೆ ಸೀಮಿತವಾಯಿತು.

ಸಿದ್ದರಾಮಯ್ಯ ಅವರು ಸೋಮವಾರ ಚಿಕ್ಕಮಗಳೂರು ಮತ್ತು ಕೊಡಗಿನಲ್ಲಿ ನಡೆದ ಸಮಾವೇಶಗಳಲ್ಲಿ ಪಾಲ್ಗೊಂಡರು. ಇದರಿಂದ ಮೈಸೂರಿನಲ್ಲಿ ಪ್ರಚಾರ ಸಭೆಗಳಲ್ಲಿ ಪಾಲ್ಗೊಳ್ಳಲು ಆಗಲಿಲ್ಲ. ಮತ್ತೊಂದೆಡೆ ಜಿ.ಟಿ.ದೇವೇಗೌಡ ಅವರು ನಗರದಲ್ಲಿದ್ದರೂ ಬಹಿರಂಗ ಪ್ರಚಾರದಲ್ಲಿ ಕಾಣಿಸಿಕೊಳ್ಳಲಿಲ್ಲ.

ಮೈತ್ರಿ ಅಭ್ಯರ್ಥಿ ಸಿ.ಎಚ್‌.ವಿಜಯಶಂಕರ್‌ ಅವರು ದಿನವಿಡೀ ಬಿರುಸಿನ ಪ್ರಚಾರ ಮಾಡಿದರು. ಆದರೆ ಅವರಿಗೆ ಜೆಡಿಎಸ್‌ನ ಪ್ರಮುಖ ನಾಯಕರಾರೂ ಸಾಥ್‌ ನೀಡಲಿಲ್ಲ.

ಜಿ.ಟಿ.ದೇವೇಗೌಡ ಅವರು ಸೋಮವಾರ ತಮ್ಮ ನಿವಾಸದಲ್ಲಿ ಪಕ್ಷದ ಮುಖಂಡರ ಜತೆ ಸಭೆ ನಡೆಸಿದರು. ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಸದಸ್ಯರ ಜತೆ ಚರ್ಚಿಸಿದರು. ಅವರು ಯಾವುದೇ ಪ್ರಚಾರ ಸಭೆಗಳಲ್ಲಿ ಪಾಲ್ಗೊಳ್ಳುವ ವೇಳಾಪಟ್ಟಿ ಇರಲಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸಿದ್ದರಾಮಯ್ಯ ಮತ್ತು ಜಿ.ಟಿ.ದೇವೇಗೌಡ ಅವರು ಜಂಟಿ ಪ್ರಚಾರವನ್ನು ಒಂದೇ ದಿನಕ್ಕೆ ಸೀಮಿತಗೊಳಿಸಿದ್ದು ಚರ್ಚೆಗೆ ಎಡೆಮಾಡಿಕೊಟ್ಟಿದೆ. ಮುಖಂಡರ ನಡುವಿನ ಒಂದು ದಿನದ ಒಗ್ಗಟ್ಟು ಕಾರ್ಯಕರ್ತರ ಮೇಲೆ ಎಷ್ಟರಮಟ್ಟಿಗೆ ಪರಿಣಾಮ ಬೀರಬಹುದು ಎಂಬುದನ್ನು ನೋಡಬೇಕಿದೆ.

ಸೋಮವಾರ ಬೆಳಿಗ್ಗೆ ಮಾಧ್ಯಮದವರ ಜತೆ ಮಾತನಾಡಿದ ಸಿದ್ದರಾಮಯ್ಯ, ‘ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಡೆಸಿದ ಪ್ರಚಾರ ಯಶಸ್ವಿಯಾಗಿದೆ. ಎರಡೂ ಪಕ್ಷಗಳ ಕಾರ್ಯಕರ್ತರು ಮೈತ್ರಿ ಅಭ್ಯರ್ಥಿಯ ಗೆಲುವಿಗೆ ಕೈಜೋಡಿಸಲಿದ್ದಾರೆ. ಈ ಬಾರಿ ಗೆಲುವು ನಮ್ಮದೇ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.

ಕಡಕೊಳದಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಜಿ.ಟಿ.ದೇವೇಗೌಡ ಅವರ ಕೈಹಿಡಿದು ಆತ್ಮೀಯವಾಗಿ ಮಾತನಾಡುವ ಚಿತ್ರವನ್ನು ಅವರು ತಮ್ಮ ಟ್ವಿಟರ್‌ ಖಾತೆಯಲ್ಲೂ ಪ್ರಕಟಿಸಿದ್ದಾರೆ.

ಒಬ್ಬರೇ ಪ್ರಚಾರ ಕೈಗೊಳ್ಳಬೇಕಿತ್ತು: ಜಿ.ಟಿ.ದೇವೇಗೌಡ ಅವರು ಸಿದ್ದರಾಮಯ್ಯ ಅವರ ಅನುಪಸ್ಥಿತಿಯಲ್ಲಿ ಚಾಮುಂಡೇಶ್ವರಿ ಕ್ಷೇತ್ರ ಮತ್ತು ನಗರ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಿ ಜೆಡಿಎಸ್‌ ಕಾರ್ಯಕರ್ತರ ಒಲವು ಮೈತ್ರಿ ಅಭ್ಯರ್ಥಿಯ ಪರ ಮೂಡಿಸುವ ಪ್ರಯತ್ನ ನಡೆಸಬೇಕಿತ್ತು ಎಂದು ಕಾಂಗ್ರೆಸ್‌ನ ಸ್ಥಳೀಯ ನಾಯಕರೊಬ್ಬರು ತಿಳಿಸಿದರು.

ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌ ಅವರು ತಮ್ಮ ಗಮನವನ್ನು ಮಂಡ್ಯ ಕ್ಷೇತ್ರದತ್ತ ಕೇಂದ್ರೀಕರಿಸಿದ್ದಾರೆ. ಅವರಿಗೂ ಮೈಸೂರಿನಲ್ಲಿ ಹೆಚ್ಚಿನ ಪ್ರಚಾರ ನಡೆಸಲು ಆಗಲಿಲ್ಲ. ಆದ್ದರಿಂದ ಜಿಲ್ಲಾ ಉಸ್ತುವಾರಿ ಸಚಿವರು ಇನ್ನಷ್ಟು ಆಸಕ್ತಿ ವಹಿಸಬೇಕಿತ್ತು ಎಂಬುದು ಅವರ ಹೇಳಿಕೆ.

ಮೈಸೂರು ಕ್ಷೇತ್ರದ ಟಿಕೆಟ್‌ ಕಾಂಗ್ರೆಸ್‌ಗೆ ಒದಗಿಸಿಕೊಡುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದರು. ಆದ್ದರಿಂದ ಈ ಚುನಾವಣೆಯನ್ನು ಅವರು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಬಹಿರಂಗ ಪ್ರಚಾರ ಮಂಗಳವಾರ ಸಂಜೆ 6 ಗಂಟೆಗೆ ಕೊನೆಗೊಳ್ಳಲಿದೆ. ಪ್ರಚಾರದ ಕೊನೆಯ ದಿನ ಸಿದ್ದರಾಮಯ್ಯ ಮತ್ತು ಜಿ.ಟಿ.ದೇವೇಗೌಡ ಮತ್ತೆ ಜತೆಯಾಗಿ ಕಾಣಿಸಿಕೊಳ್ಳುವರೇ ಎಂಬ ಕುತೂಹಲ ಕಾರ್ಯಕರ್ತರದ್ದು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !