ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ರಾಂತಿ ಪಡೆದ ಅಭ್ಯರ್ಥಿಗಳು, ಮುಖಂಡರು

ಗೆಲುವಿನ ವಿಶ್ವಾಸದಲ್ಲಿ ಪ್ರತಾಪಸಿಂಹ, ವಿಜಯಶಂಕರ್‌; ಮನೆಮಂದಿಯೊಂದಿಗೆ ಕಾಲ ಕಳೆದರು
Last Updated 19 ಏಪ್ರಿಲ್ 2019, 19:23 IST
ಅಕ್ಷರ ಗಾತ್ರ

ಮೈಸೂರು: ಸುಮಾರು ಒಂದು ತಿಂಗಳು ಅಬ್ಬರದ ಪ್ರಚಾರ, ಪಾದಯಾತ್ರೆ, ಭಾಷಣ, ಸಮಾವೇಶಗಳು ಮತ್ತು ಆರೋಪ–ಪ್ರತ್ಯಾರೋಪಗಳಲ್ಲಿ ಮುಳುಗಿದ್ದ ಅಭ್ಯರ್ಥಿಗಳು ಶುಕ್ರವಾರ ನಿರಾಳರಾಗಿ ಕಂಡುಬಂದರು.

ಕೇಂದ್ರ ಚುನಾವಣಾ ಆಯೋಗ ಮಾರ್ಚ್‌ 10ರಂದು ಲೋಕಸಭಾ ಚುನಾವಣೆ ದಿನಾಂಕ ಪ್ರಕಟಿಸಿತ್ತು. ಅಂದಿನಿಂದಲೂ ಮೈಸೂರು ಕ್ಷೇತ್ರದಲ್ಲಿ ಚುನಾವಣೆಗೆ ಸಂಬಂಧಿಸಿದ ಹಲವು ಚಟುವಟಿಕೆಗಳು ನಡೆದವು. ಗುರುವಾರ ನಡೆದ ಮತದಾನದೊಂದಿಗೆ ಎಲ್ಲ ಅಬ್ಬರಗಳಿಗೆ ತೆರೆಬಿದ್ದಿದೆ.

ಮೈಸೂರು ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಅಭ್ಯರ್ಥಿ ಪ್ರತಾಪಸಿಂಹ ಮತ್ತು ಕಾಂಗ್ರೆಸ್‌–ಜೆಡಿಎಸ್ ಮೈತ್ರಿ ಅಭ್ಯರ್ಥಿ ಸಿ.ಎಚ್‌.ವಿಜಯಶಂಕರ್‌ ನಡುವೆ ನೇರ ಸ್ಪರ್ಧೆ ಇದೆ. ಬಿಡುವಿಲ್ಲದ ಪ್ರಚಾರದಲ್ಲಿ ತೊಡಗಿದ್ದ ಇಬ್ಬರೂ ಶುಕ್ರವಾರ ರಾಜಕೀಯ ಜಂಜಾಟದಿಂದ ಅಲ್ಪ ಬಿಡುವು ಪಡೆದು ಕುಟುಂಬ ಸದಸ್ಯರೊಂದಿಗೆ ಕಾಲ ಕಳೆದರು.

ಅಭ್ಯರ್ಥಿಗಳ ಜತೆಗೆ ಇಷ್ಟು ದಿನ ಪ್ರಚಾರದಲ್ಲಿ ತೊಡಗಿದ್ದ ಸ್ಥಳೀಯ ಮುಖಂಡರು ಮತ್ತು ವಿವಿಧ ಪಕ್ಷಗಳ ಕಾರ್ಯಕರ್ತರು ಕೂಡಾ ವಿಶ್ರಾಂತಿಗೆ ಮೊರೆ ಹೋದರು. ಚುನಾವಣೆಯ ಫಲಿತಾಂಶಕ್ಕೆ ಇನ್ನೂ ಒಂದು ತಿಂಗಳು ಕಾಯಬೇಕು. ಆದ್ದರಿಂದ ಫಲಿತಾಂಶದ ಬಗ್ಗೆ ತಲೆಕೆಡಿಸಿಕೊಳ್ಳದೆ ಅಭ್ಯರ್ಥಿಗಳು ವಿಶ್ರಾಂತಿ ಪಡೆದರು.

ಇತರ ಕಡೆ ಪ್ರಚಾರ ಮಾಡುತ್ತೇನೆ: ‘ನನ್ನ ಕ್ಷೇತ್ರದಲ್ಲಿ ಮತದಾನ ಮುಗಿಯಿತು. ರಾಜ್ಯದ ಇನ್ನುಳಿದ 14 ಕ್ಷೇತ್ರಗಳಲ್ಲಿ ಇದೇ 23ರಂದು ಮತದಾನ ನಡೆಯುತ್ತದೆ. ಪಕ್ಷದ ಕಾರ್ಯಕರ್ತನಾಗಿ ಬೇರೆ ಬೇರೆ ಕಡೆ ಪ್ರಚಾರಕ್ಕೆ ಹೋಗುತ್ತೇನೆ. ಶನಿವಾರ ಬೀದರ್‌ಗೆ ತೆರಳಲಿದ್ದೇನೆ’ ಎಂದು ಪ್ರತಾಪಸಿಂಹ ತಿಳಿಸಿದ್ದಾರೆ.

‘ಉತ್ತರ ಭಾರತದಲ್ಲಿ ವಿವಿಧೆಡೆ ಪ್ರಚಾರದಲ್ಲಿ ಪಾಲ್ಗೊಳ್ಳುವ ಯೋಚನೆಯಿದೆ. ಅಲ್ಲಿನ ಚುನಾವಣಾ ಪ್ರಚಾರ ಹೇಗಿರುತ್ತದೆ ಎಂಬ ಅನುಭವ ಪಡೆಯಬೇಕು’ ಎಂದಿದ್ದಾರೆ.

‘2014ರ ಚುನಾವಣೆಗೆ ಹೋಲಿಸಿದರೆ ಮೈಸೂರು ಕ್ಷೇತ್ರದಲ್ಲಿ ಈ ಬಾರಿ ಮತದಾನದ ಪ್ರಮಾಣ ಹೆಚ್ಚಿದೆ. ಇದು ಒಳ್ಳೆಯ ಬೆಳವಣಿಗೆ. ಮಡಿಕೇರಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಮತದಾನ ಆಗಿದೆ. ಕೊಡಗು ಜಿಲ್ಲೆಯಲ್ಲಿ ಬಿಜೆಪಿಗೆ ಅನುಕೂಲಕರ ವಾತಾವರಣ ಇದೆ. ಆದ್ದರಿಂದ ಮತದಾನ ಹೆಚ್ಚಿನ ಪ್ರಮಾಣದಲ್ಲಿ ನಡೆದಿರುವುದು ನನ್ನ ಗೆಲುವಿಗೆ ನೆರವಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೈತ್ರಿ ಧರ್ಮ ಪಾಲನೆಯಾಗಿದೆ: ‘ಜಿಲ್ಲೆಯಲ್ಲಿ ಮೈತ್ರಿಗೆ ಸಂಬಂಧಿಸಿದಂತೆ ವೈಯಕ್ತಿವಾಗಿ ಸಣ್ಣಪುಟ್ಟ ಭಿನ್ನಾಭಿಪ್ರಾಯ ಇದ್ದಿರಬಹುದು. ಆದರೆ ಸಾಮೂಹಿಕವಾಗಿ ಇಲ್ಲಿ ಮೈತ್ರಿ ಧರ್ಮ ಪಾಲನೆಯಾಗಿದೆ. ಇದು ನನ್ನ ಗೆಲುವಿಗೆ ನೆರವು ನೀಡಲಿದೆ’ ಎಂದು ವಿಜಯಶಂಕರ್‌ ಪ್ರತಿಕ್ರಿಯಿಸಿದ್ದಾರೆ.

ಚುನಾವಣೆ ಅತ್ಯಂತ ಶಾಂತಿಯುತವಾಗಿ ಮುಕ್ತಾಯಗೊಂಡಿರುವುದು ನೆಮ್ಮದಿಯ ವಿಚಾರ. ಕಾನೂನು ಮತ್ತು ಸುವ್ಯವಸ್ಥೆಗೆ ಎಲ್ಲೂ ಧಕ್ಕೆಯಾಗಿಲ್ಲ. ಮತದಾನ ಉತ್ತಮ ಪ್ರಮಾಣದಲ್ಲಿ ನಡೆದಿರುವುದು ಸಂತಸ ನೀಡಿದೆ ಎಂದಿದ್ದಾರೆ.

‘ನಾನು ಗ್ರಾಮೀಣ ಭಾಗದಿಂದ ಬಂದವ. ಗ್ರಾಮೀಣರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ರಾಜಕೀಯದಲ್ಲಿ ಮುಂದೆ ಬಂದಿದ್ದೇನೆ. ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಮತದಾನ ಆಗಿದೆ. ಜನರು ನನ್ನ ಕೈಬಿಡುವುದಿಲ್ಲ ಎಂಬ ನಂಬಿಕೆ ಇದೆ’ ಎಂದು ಹೇಳಿದ್ದಾರೆ.

ಹೆಚ್ಚಿನ ಪ್ರಮಾಣದಲ್ಲಿ ಮತದಾನ ಆಗಿರುವುದು ಯಾರಿಗೆ ಲಾಭ ತರುತ್ತದೆ ಎಂಬುದು ಮುಖ್ಯವಲ್ಲ. ಜನರು ಸ್ವಯಂ ಪ್ರೇರಿತರಾಗಿ ಮತದಾನದಲ್ಲಿ ಭಾಗಿಯಾಗಿರುವುದನ್ನು ಮೆಚ್ಚಬೇಕು. ಹೆಚ್ಚಿನ ಮತದಾನದಿಂದ ಅನುಕೂಲ ಯಾರಿಗೆ ಮತ್ತು ಅನನುಕೂಲ ಯಾರಿಗೆ ಎಂಬುದು ಫಲಿತಾಂಶ ಹೊರಬಿದ್ದ ಬಳಿಕ ಗೊತ್ತಾಗುತ್ತದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT